

ಕೊಲ್ಕೋತಾ: ತೃಣಮೂಲ ಕಾಂಗ್ರೆಸ್‌ಗೆ ಮತ್ತೊಂದು ದೊಡ್ಡ ಹಿನ್ನಡೆ ಉಂಟಾಗಿದೆ. ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿಗೆ ಆಪ್ತೆಯಾಗಿದ್ದ ರಾಜ್ಯಸಭಾ ಸಂಸದೆ ಸುಷ್ಮಿತಾ ದೇವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಟಿಎಂಸಿ ಈಗಾಗಲೇ ಆಂತರಿಕ ಭಿನ್ನಾಭಿಪ್ರಾಯ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷವನ್ನು ತೊರೆಯುವ ನಾಯಕರ ಮಧ್ಯೆ ರಾಜ್ಯಸಭಾ ಸಂಸದೆ ಸುಷ್ಮಿತಾ ದೇವ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಆಘಾತವನ್ನು ಉಂಟು ಮಾಡಿದೆ.
"ನಾನು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ದಯವಿಟ್ಟು ಅದನ್ನು ತಕ್ಷಣ ಜಾರಿಗೆ ಬರುವಂತೆ ಅಂಗೀಕರಿಸಬಹುದು" ಎಂದು ನಿರ್ಗಮಿತ ನಾಯಕಿ ರಾಜ್ಯಸಭಾ ಅಧ್ಯಕ್ಷ ಸಿಪಿ ರಾಧಾಕೃಷ್ಣನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ರಾಜೀನಾಮೆಯ ಸ್ವಲ್ಪ ಸಮಯದ ನಂತರ, ದೆಹಲಿಯ ನಿವಾಸದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಶರ್ಮಾ ಅವರೊಂದಿಗೆ ನಗುತ್ತಿರುವ ಸುಶ್ಮಿತಾ ದೇವ್ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
ಸುಷ್ಮಿತಾ ದೇವ್ ಅವರ ರಾಜೀನಾಮೆಯನ್ನು ಪಕ್ಷಕ್ಕೆ ಮತ್ತೊಂದು ರಾಜಕೀಯ ಹೊಡೆತ ಎಂದು ಪರಿಗಣಿಸಲಾಗುತ್ತಿದೆ. ಆದರೆ, ಅವರ ರಾಜೀನಾಮೆಯ ಹಿಂದಿನ ಕಾರಣಗಳನ್ನು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಲಾಗಿಲ್ಲ. ಸುಷ್ಮಿತಾ ದೇವ್ ಬಹಳ ಹಿಂದಿನಿಂದಲೂ ಟಿಎಂಸಿಯ ಪ್ರಮುಖ ಮುಖವಾಗಿದ್ದು, ರಾಷ್ಟ್ರಮಟ್ಟದಲ್ಲಿ ಪಕ್ಷದ ಪರವಾಗಿ ಸಕ್ರಿಯ ಪಾತ್ರ ವಹಿಸಿ ಕೆಲಸ ಮಾಡಿದ್ದಾರೆ.
Advertisement