ವಾಹನ ಸವಾರರಿಗೆ Good news: Ethanol ಮಿಶ್ರಿತ ಪೆಟ್ರೋಲ್ ಮೇಲಿನ ಎಲ್ಲಾ ಸೆಸ್-ಅಬಕಾರಿ ಸುಂಕ ರದ್ದುಗೊಳಿಸಿದ ಕೇಂದ್ರ ಸರ್ಕಾರ..!

E22, E25, E27 ಹಾಗೂ E30 ಮಾದರಿಯ ಇಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ‘ಶೂನ್ಯ’ಕ್ಕೆ ಇಳಿಸಲಾಗಿದೆ. ಅಂದರೆ, ಶೇ.22, ಶೇ.25, ಶೇ.27 ಮತ್ತು ಶೇ.30 ಇಥನಾಲ್ ಮಿಶ್ರಣ ಹೊಂದಿರುವ ಪೆಟ್ರೋಲ್‌ಗೆ ಇನ್ನು ಮುಂದೆ ಅಬಕಾರಿ ಸುಂಕ ವಿಧಿಸಲಾಗುವುದಿಲ್ಲ.
File photo
ಸಂಗ್ರಹ ಚಿತ್ರ
Updated on

ನವದೆಹಲಿ: ಸ್ವಚ್ಛ ಇಂಧನ ಬಳಕೆಗೆ ಉತ್ತೇಜನ ನೀಡುವ ಮಹತ್ವದ ಕ್ರಮವಾಗಿ ಕೇಂದ್ರ ಸರ್ಕಾರ ಇಥನಾಲ್ ಮಿಶ್ರಿತ ಪೆಟ್ರೋಲ್‌ನ ಆಯ್ದ ಮಾದರಿಗಳ ಮೇಲಿನ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.

ಈ ನಿರ್ಧಾರದಿಂದ ಜೈವಿಕ ಇಂಧನ ಬಳಕೆಗೆ ಮತ್ತಷ್ಟು ಉತ್ತೇಜನ ಸಿಗುವ ನಿರೀಕ್ಷೆಯಿದ್ದು, ದೇಶದ ಕಚ್ಚಾತೈಲ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಕೇಂದ್ರದ ಗುರಿಗೆ ಬಲ ಸಿಗಲಿದೆ.

ಹಣಕಾಸು ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, E22, E25, E27 ಹಾಗೂ E30 ಮಾದರಿಯ ಇಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ‘ಶೂನ್ಯ’ಕ್ಕೆ ಇಳಿಸಲಾಗಿದೆ. ಅಂದರೆ, ಶೇ.22, ಶೇ.25, ಶೇ.27 ಮತ್ತು ಶೇ.30 ಇಥನಾಲ್ ಮಿಶ್ರಣ ಹೊಂದಿರುವ ಪೆಟ್ರೋಲ್‌ಗೆ ಇನ್ನು ಮುಂದೆ ಅಬಕಾರಿ ಸುಂಕ ವಿಧಿಸಲಾಗುವುದಿಲ್ಲ.

ಕೇಂದ್ರ ಸರ್ಕಾರ ಕಳೆದ ಕೆಲವು ವರ್ಷಗಳಿಂದ ಇಥನಾಲ್ ಮಿಶ್ರಿತ ಇಂಧನ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಪೆಟ್ರೋಲ್‌ಗೆ ಇಥನಾಲ್ ಮಿಶ್ರಣ ಮಾಡುವುದರಿಂದ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾತೈಲದ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಜೊತೆಗೆ ಇಂಧನ ವೆಚ್ಚವನ್ನು ನಿಯಂತ್ರಿಸುವುದರೊಂದಿಗೆ ಪರಿಸರ ಮಾಲಿನ್ಯವನ್ನು ತಗ್ಗಿಸುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತದೆ.

ಇಥನಾಲ್ ಸಾಮಾನ್ಯವಾಗಿ ಕಬ್ಬು, ಜೋಳ ಸೇರಿದಂತೆ ಕೃಷಿ ಉತ್ಪನ್ನಗಳಿಂದ ತಯಾರಾಗುವುದರಿಂದ ಈ ಕ್ರಮ ರೈತರಿಗೂ ಪರೋಕ್ಷ ಲಾಭ ತಂದುಕೊಡಲಿದೆ.

ಇಥನಾಲ್ ಉತ್ಪಾದನೆ ಹೆಚ್ಚಾದಂತೆ ಕೃಷಿ ಕ್ಷೇತ್ರಕ್ಕೆ ಹೊಸ ಮಾರುಕಟ್ಟೆ ದೊರೆಯಲಿದ್ದು, ರೈತರ ಆದಾಯ ಹೆಚ್ಚಿಸಲು ಸಹಕಾರಿಯಾಗಲಿದೆ.

File photo
ಇಂಧನ ಅಬಕಾರಿ ಸುಂಕ ಇಳಿಕೆ ಬೆಲೆ ಏರಿಕೆಯಿಂದ ಗ್ರಾಹಕರಿಗೆ ರಕ್ಷಣೆ ಒದಗಿಸುತ್ತದೆ: ನಿರ್ಮಲಾ ಸೀತಾರಾಮನ್; Video

ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆಗಳಲ್ಲಿ ಏರಿಳಿತ ಕಂಡುಬರುತ್ತಿದ್ದು, ದೇಶದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಹೆಚ್ಚಾಗಿವೆ.

ಮೇ ತಿಂಗಳ ದ್ವಿತೀಯಾರ್ಧದಲ್ಲಿ ಇಂಧನ ದರಗಳು ಲೀಟರ್‌ಗೆ ಸುಮಾರು ರೂ.7.50ರಷ್ಟು ಏರಿಕೆಯಾಗಿದ್ದವು. ಈ ಹಿನ್ನೆಲೆ ಗ್ರಾಹಕರ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಹಾಗೂ ಪರ್ಯಾಯ ಇಂಧನ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಜಾಗತಿಕ ಕಚ್ಚಾತೈಲ ಬೆಲೆಗಳು ಏರಿಕೆಯಾಗಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ ರೂ.10ರಷ್ಟು ಕಡಿತಗೊಳಿಸಿತ್ತು.

ಆ ನಿರ್ಧಾರದಿಂದ ಸರ್ಕಾರಕ್ಕೆ ವಾರ್ಷಿಕವಾಗಿ ರೂ.1 ಲಕ್ಷ ಕೋಟಿಗೂ ಅಧಿಕ ಆದಾಯ ನಷ್ಟವಾಗಿದ್ದರೂ, ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಜಾರಿಗೊಳಿಸಲಾಗಿತ್ತು.

ಇದೀಗ ಇಥನಾಲ್ ಮಿಶ್ರಿತ ಪೆಟ್ರೋಲ್‌ಗೆ ಅಬಕಾರಿ ಸುಂಕ ಸಂಪೂರ್ಣ ಮನ್ನಾ ಮಾಡುವ ಮೂಲಕ ಕೇಂದ್ರ ಸರ್ಕಾರ ಸ್ವಚ್ಛ ಇಂಧನ ಬಳಕೆ, ಇಂಧನ ಭದ್ರತೆ, ರೈತರ ಆದಾಯ ವೃದ್ಧಿ ಹಾಗೂ ಪರಿಸರ ಸಂರಕ್ಷಣೆ ಎಂಬ ನಾಲ್ಕು ಪ್ರಮುಖ ಗುರಿಗಳನ್ನು ಒಂದೇ ವೇಳೆ ಸಾಧಿಸಲು ಮುಂದಾಗಿದೆ. ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತ ನಿರ್ಮಾಣದತ್ತ ಇದು ಮತ್ತೊಂದು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com