NEET ಭದ್ರತೆಗೆ ಆದ್ಯತೆ; ದೇಶಾದ್ಯಂತ Telegram app ತಾತ್ಕಾಲಿಕ ನಿಷೇಧ, ಕೇಂದ್ರದ ಆದೇಶ ಎತ್ತಿಹಿಡಿದ Delhi ಹೈಕೋರ್ಟ್..!

ನೀಟ್-ಯುಜಿ ಮರುಪರೀಕ್ಷೆ ನಡೆಸುವ ಸಂದರ್ಭದಲ್ಲಿ ಉದ್ಭವಿಸಿದ್ದ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನೀಡಿದ ಕಾರಣಗಳು ಸಮಂಜಸವಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
file photo
ಸಂಗ್ರಹ ಚಿತ್ರ
Updated on

ನವದೆಹಲಿ: ನೀಟ್-ಯುಜಿ (NEET-UG) ಮರುಪರೀಕ್ಷೆಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಂ ಮೆಸೇಜಿಂಗ್ ಆ್ಯಪ್ ಮೇಲೆ ಕೇಂದ್ರ ಸರ್ಕಾರ ವಿಧಿಸಿದ್ದ ತಾತ್ಕಾಲಿಕ ನಿರ್ಬಂಧವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ.

ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಟೆಲಿಗ್ರಾಂ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರಿದ್ದ ಪೀಠ ತಿರಸ್ಕರಿಸಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಕೇಂದ್ರ ಸರ್ಕಾರ ತನ್ನ ತುರ್ತು ಅಧಿಕಾರಗಳನ್ನು ಬಳಸಲು ಸಾಕಷ್ಟು ಕಾರಣಗಳನ್ನು ತೋರಿಸಿದೆ ಎಂದು ಅಭಿಪ್ರಾಯಪಟ್ಟಿತು.

“ಕೇಂದ್ರ ಸರ್ಕಾರಕ್ಕೆ ಟೆಲಿಗ್ರಾಂ ಪ್ರವೇಶವನ್ನು ನಿರ್ಬಂಧಿಸುವ ಅಧಿಕಾರವಿದೆ. ಸರ್ಕಾರ ಕೈಗೊಂಡ ಕ್ರಮಗಳು ಕನಿಷ್ಠ ನಿರ್ಬಂಧಿತ (least restrictive) ಸ್ವರೂಪದ್ದಾಗಿದ್ದು, ಅನುಪಾತದ ಪರೀಕ್ಷೆಯು (test of proportionality) ತೃಪ್ತಿಕರವಾಗಿದೆ. ಆದ್ದರಿಂದ ಈ ಆದೇಶವನ್ನು ಅತಿಯಾದ ಅಥವಾ ಅಸಮಂಜಸ ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ನೀಟ್-ಯುಜಿ ಮರುಪರೀಕ್ಷೆ ನಡೆಸುವ ಸಂದರ್ಭದಲ್ಲಿ ಉದ್ಭವಿಸಿದ್ದ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನೀಡಿದ ಕಾರಣಗಳು ಸಮಂಜಸವಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ನಿಗದಿಪಡಿಸಿರುವ ಎಲ್ಲಾ ಪ್ರಕ್ರಿಯೆಗಳನ್ನು ಸರ್ಕಾರ ಸರಿಯಾಗಿ ಅನುಸರಿಸಿದೆ ಎಂದು ತಿಳಿಸಿದೆ.

ಕೇಂದ್ರ ಸರ್ಕಾರ ಹೊರಡಿಸಿದ ನಿರ್ಬಂಧ ಆದೇಶಗಳು ಸೂಕ್ತ ಕಾರಣಗಳನ್ನು ಒಳಗೊಂಡಿದ್ದು, ಕಾನೂನುಬದ್ಧವಾಗಿವೆ ಎಂದು ಸ್ಪಷ್ಟಪಡಿಸಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ವ್ಯಾಪ್ತಿಯಲ್ಲಿ ‘ಮಾಹಿತಿ’ ಎಂಬ ವ್ಯಾಖ್ಯಾನದಿಂದ ಈ ವೇದಿಕೆಯನ್ನು ಹೊರಗಿಡಲು ಯಾವುದೇ ಕಾರಣವಿಲ್ಲ” ಎಂದು ನ್ಯಾಯಾಲಯ ಹೇಳಿದೆ.

file photo
NEET UG ಮರು ಪರೀಕ್ಷೆ: 150 ಮಿಲಿಯನ್ ಬಳಕೆದಾರರ ಹಕ್ಕುಗಳನ್ನು ಹೇಗೆ ಮೊಟಕುಗೊಳಿಸುತ್ತೀರಾ? ಟೆಲಿಗ್ರಾಮ್ ಬ್ಯಾನ್ ಪ್ರಶ್ನಿಸಿದ ಹೈಕೋರ್ಟ್!

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ವಿವಾದದ ಹಿನ್ನೆಲೆ, ಸಂಘಟಿತ ನಕಲು ಜಾಲಗಳು ಟೆಲಿಗ್ರಾಂ ವೇದಿಕೆಯನ್ನು ದುರುಪಯೋಗಪಡಿಸಿಕೊಂಡಿವೆ ಎಂಬ ಆತಂಕವನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿತ್ತು.

ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ಕಾರಣ ಮೂಲ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, 2026ರ ನೀಟ್-ಯುಜಿ ಮರುಪರೀಕ್ಷೆಯನ್ನು ಜೂನ್ 21ರಂದು ನಡೆಸಲು ನಿಗದಿಪಡಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY), ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಜೂನ್ 22ರವರೆಗೆ ಭಾರತದಲ್ಲಿ ಟೆಲಿಗ್ರಾಂ ಸೇವೆಗೆ ಪ್ರವೇಶ ನಿರ್ಬಂಧಿಸಲು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ನಿರ್ದೇಶನ ನೀಡಿತ್ತು.

ಇದರ ಜೊತೆಗೆ, ಈಗಾಗಲೇ ಪೋಸ್ಟ್ ಮಾಡಿರುವ ಸಂದೇಶಗಳನ್ನು ಸಂಪಾದಿಸುವ (message editing) ಸೌಲಭ್ಯವನ್ನು ಜೂನ್ 30ರವರೆಗೆ ಸ್ಥಗಿತಗೊಳಿಸುವಂತೆ ಟೆಲಿಗ್ರಾಂಗೆ ಸೂಚಿಸಲಾಗಿತ್ತು. ಹಾಗೆಯೇ, ನಿರ್ಬಂಧದ ಅವಧಿಯಲ್ಲಿ ಟೆಲಿಗ್ರಾಂ ಆ್ಯಪ್ ಅನ್ನು ತಮ್ಮ ಆ್ಯಪ್ ಸ್ಟೋರ್‌ಗಳಿಂದ ತೆಗೆದುಹಾಕುವಂತೆ ಗೂಗಲ್ ಮತ್ತು ಆಪಲ್‌ಗೂ ಸರ್ಕಾರ ನಿರ್ದೇಶನ ನೀಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com