ಕಾಲುದಾರಿಯಲ್ಲಿ ನಡೆಯುವ ಹಕ್ಕಿಗೆ ಮೂಲಭೂತ ಹಕ್ಕಿನ ಮಾನ್ಯತೆ ಸಿಗುವುದಾದರೆ, ಮತದಾನದ ಹಕ್ಕಿಗೆ ಯಾಕಿಲ್ಲ?; ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್‌ ಪ್ರಶ್ನೆ

ಗುರುತಿಸಲಾದ ಪಾದಚಾರಿ ಮಾರ್ಗಗಳಲ್ಲಿ ನಡೆಯುವ ಹಕ್ಕು ಸಂವಿಧಾನದ ಅಡಿಯಲ್ಲಿ ರಕ್ಷಿಸಲ್ಪಟ್ಟ ಮೂಲಭೂತ ಹಕ್ಕಾಗಿದ್ದು, ರಸ್ತೆಗಳಲ್ಲಿ ಮೋಟಾರು ವಾಹನಗಳ ಚಲನೆಗಿಂತ ಈ ಹಕ್ಕು ಹೆಚ್ಚಿನ ಆದ್ಯತೆಯನ್ನು ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟಿತ್ತು.
Lok Sabha Election Voting
ಮತದಾನ (ಸಾಂದರ್ಭಿಕ ಚಿತ್ರ)
Updated on

ನವದೆಹಲಿ: ದೇಶದ ಚುನಾವಣಾ ವ್ಯವಸ್ಥೆ, ಮತದಾರರ ಪಟ್ಟಿಯ ಪರಿಷ್ಕರಣೆ ಹಾಗೂ ಮತದಾರರ ಹಕ್ಕುಗಳ ಕುರಿತು ಚರ್ಚೆಗಳು ತೀವ್ರಗೊಂಡಿರುವ ನಡುವಲ್ಲೇ ಮತದಾನದ ಹಕ್ಕಿಗೆ ಮೂಲಭೂತ ಹಕ್ಕಿನ ಸ್ಥಾನಮಾನ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಚುನಾವಣಾ ಆಯೋಗದ ಕಾರ್ಯವೈಖರಿ ಪಕ್ಷಪಾತದಿಂದ ಕೂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆಯಂತೆ ಚುನಾವಣಾ ಆಯೋಗ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ.

"ಮತದಾನದ ಹಕ್ಕಿಗೆ ಮೂಲಭೂತ ಹಕ್ಕಿನ ಸ್ಥಾನಮಾನ ನೀಡಿದರೆ, ಅದಕ್ಕೆ ಅತ್ಯುನ್ನತ ನ್ಯಾಯಾಂಗ ರಕ್ಷಣೆ ದೊರೆಯುತ್ತದೆ. ಪ್ರಜಾಪ್ರಭುತ್ವದ ಮೂಲಾಧಾರವಾದ ಮತದಾನದ ಹಕ್ಕು ಕೇವಲ ಕಾನೂನುಬದ್ಧ ಹಕ್ಕಾಗಿ ಉಳಿಯಬಾರದು" ಎಂದು ಹೇಳಿದ್ದಾರೆ.

ಇದೇ ವೇಳೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪನ್ನು ಉಲ್ಲೇಖಿಸಿರುವ ಅವರು, ಕಾಲುದಾರಿಯಲ್ಲಿ ನಡೆಯುವ ಹಕ್ಕು (Right to Walk on Footpath) ಮೂಲಭೂತ ಹಕ್ಕು ಎಂದು ನ್ಯಾಯಾಲಯ ಘೋಷಿಸಿರುವುದನ್ನು ನೆನಪಿಸಿದರು.

"ಕಾಲುದಾರಿಯಲ್ಲಿ ನಡೆಯುವ ಹಕ್ಕಿಗೆ ಮೂಲಭೂತ ಹಕ್ಕಿನ ಮಾನ್ಯತೆ ನೀಡಬಹುದಾದರೆ, ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಅತ್ಯಗತ್ಯವಾದ ಮತದಾನದ ಹಕ್ಕಿಗೂ ಅದೇ ಮಾನ್ಯತೆ ಯಾಕೆ ನೀಡಬಾರದು?" ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಸಂವಿಧಾನ ರಚನಾ ಸಭೆಯಲ್ಲಿ ಈ ವಿಷಯದ ಬಗ್ಗೆ ನಡೆದ ಚರ್ಚೆಗಳನ್ನೂ ಜೈರಾಮ್ ರಮೇಶ್ ಉಲ್ಲೇಖಿಸಿದರು.

Lok Sabha Election Voting
Rajya Sabha, MLC ಚುನಾವಣೆಗಳಲ್ಲಿ ಮತದಾರರು ಶಾಸಕರೇ ಆಗಿದ್ದರೂ ಬೇರೆ ಬೇರೆ ಮತದಾನ ವಿಧಾನವೇಕೆ: ಚುನಾವಣಾಧಿಕಾರಿಗಳಿಗೆ ಸುರೇಶ್ ಕುಮಾರ್ ಪ್ರಶ್ನೆ

ಸಂವಿಧಾನ ರಚನಾ ಸಭೆಯು 1947ರಲ್ಲಿ ಮೂಲಭೂತ ಹಕ್ಕುಗಳು, ಅಲ್ಪಸಂಖ್ಯಾತರು ಹಾಗೂ ಆದಿವಾಸಿ ಮತ್ತು ಹೊರಗಿಡಲಾದ ಪ್ರದೇಶಗಳ ಕುರಿತ ಸಲಹಾ ಸಮಿತಿಯನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಅಧ್ಯಕ್ಷತೆಯಲ್ಲಿ ರಚಿಸಿತ್ತು. ಆ ಸಮಿತಿಯಲ್ಲಿ ಮತದಾನದ ಹಕ್ಕನ್ನು ಮೂಲಭೂತ ಹಕ್ಕಾಗಿಸಬೇಕೇ ಎಂಬುದರ ಬಗ್ಗೆ ವಿಸ್ತೃತ ಚರ್ಚೆ ನಡೆದಿತ್ತು.

ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಮತದಾನದ ಹಕ್ಕಿಗೆ ಮೂಲಭೂತ ಹಕ್ಕಿನ ಸ್ಥಾನಮಾನ ನೀಡಬೇಕೆಂದು ಬಲವಾಗಿ ವಾದಿಸಿದ್ದರು. ಆದರೆ ಸರ್ದಾರ್ ಪಟೇಲ್, ಸಿ. ರಾಜಗೋಪಾಲಾಚಾರಿ ಸೇರಿದಂತೆ ಕೆಲವರು, ಅಂತಹ ಕ್ರಮ ಕೈಗೊಂಡರೆ ಸಂಸ್ಥಾನಗಳು ಭಾರತೀಯ ಒಕ್ಕೂಟಕ್ಕೆ ಸೇರುವುದರಲ್ಲಿ ಹಿಂಜರಿಯುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದರು. ಆದ್ದರಿಂದ ಸಂವಿಧಾನದಲ್ಲೇ ಸಾಮಾನ್ಯ ಪ್ರಾಪ್ತವಯಸ್ಕ ಮತಹಕ್ಕನ್ನು ಸೇರಿಸುವುದು ಸಾಕು ಎಂದು ಅವರು ವಾದಿಸಿದ್ದರು.

“ಸರ್ದಾರ್ ಪಟೇಲ್ ಅವರೇ ಸಾಮಾನ್ಯ ಪ್ರಾಪ್ತವಯಸ್ಕ ಮತಹಕ್ಕು ಅರ್ಥಾತ್ ಒಂದು ಅಪ್ರತ್ಯಕ್ಷ ಮೂಲಭೂತ ಹಕ್ಕು ಎಂಬ ನಿಲುವು ಹೊಂದಿದ್ದರು. ಇದೇ ಹಿನ್ನೆಲೆ ಕಲಂ 326ರಲ್ಲಿ ಸಾರ್ವತ್ರಿಕ ಪ್ರಾಪ್ತವಯಸ್ಕ ಮತಹಕ್ಕಿನ ಆಧಾರದ ಮೇಲೆ ಚುನಾವಣೆ ನಡೆಸುವ ವ್ಯವಸ್ಥೆ ಬಂದಿದೆ,

1951ರ ಜನಪ್ರತಿನಿಧಿಗಳ ಕಾಯ್ದೆಯಡಿ ಮತದಾನದ ಹಕ್ಕು ಕೇವಲ ಶಾಸನಬದ್ಧ ಹಕ್ಕೋ ಅಥವಾ ಸ್ಪಷ್ಟ ಮೂಲಭೂತ ಹಕ್ಕೋ ಎಂಬ ಚರ್ಚೆ ಏಳು ದಶಕಗಳಿಂದ ಮುಂದುವರಿದಿದೆ. ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ.

ಇತ್ತೀಚೆಗೆ 2023ರ ಮಾರ್ಚ್‌ನಲ್ಲಿ ಅನೂಪ್ ಬರನ್‌ವಾಲ್ ವಿರುದ್ಧ ಭಾರತ ಸರ್ಕಾರ ಪ್ರಕರಣದಲ್ಲಿ ನ್ಯಾಯಮೂರ್ತಿ ಅಜಯ್ ರಸ್ತೋಗಿ ತಮ್ಮ ಭಿನ್ನಾಭಿಪ್ರಾಯದಲ್ಲಿ ಮತದಾನದ ಹಕ್ಕು ಮೂಲಭೂತ ಹಕ್ಕು ಎಂದು ಅಭಿಪ್ರಾಯಪಟ್ಟಿದ್ದರು.

Lok Sabha Election Voting
Watch | ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ! ವಿಜಯೇಂದ್ರ, ಕುಮಾರಸ್ವಾಮಿ ಹೇಳಿದ್ದಿಷ್ಟು...

ಮತದಾನಕ್ಕೆ ಸಂಬಂಧಿಸಿದ ಹಲವು ಹಕ್ಕುಗಳನ್ನು ಸುಪ್ರೀಂ ಕೋರ್ಟ್ ಈಗಾಗಲೇ ಮಾನ್ಯತೆ ನೀಡಿದೆ. ಅಭ್ಯರ್ಥಿಗಳ ಅಪರಾಧ ಹಿನ್ನೆಲೆ, ಆರ್ಥಿಕ ಹಿತಾಸಕ್ತಿ, ರಾಜಕೀಯ ನಿಧಿಗಳ ಮೂಲಗಳ ಬಗ್ಗೆ ಮತದಾರರಿಗೆ ತಿಳಿದುಕೊಳ್ಳುವ ಹಕ್ಕು, ಮತದಾನದ ರಹಸ್ಯತೆ ಹಾಗೂ NOTA ಮೂಲಕ ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕುಗಳನ್ನು ನ್ಯಾಯಾಲಯ ಒಪ್ಪಿಕೊಂಡಿದೆ.

ಇಂತಹ ಎಲ್ಲಾ ಸುತ್ತಮುತ್ತಲಿನ ಹಕ್ಕುಗಳಿಗೆ ಮೂಲಭೂತ ರಕ್ಷಣೆ ಸಿಕ್ಕಿರುವಾಗ, ಅದರ ಕೇಂದ್ರವಾಗಿರುವ ಮತದಾನದ ಹಕ್ಕು ಮಾತ್ರ ಇನ್ನೂ ಶಾಸನಬದ್ಧ ಹಕ್ಕಾಗಿಯೇ ಉಳಿದಿರುವುದು ಅಸಂಗತ ಎಂದು ವಾದಿಸಿದ್ದಾರೆ.

ಮತದಾನದ ಹಕ್ಕಿಗೆ ಮೂಲಭೂತ ಹಕ್ಕಿನ ಸ್ಥಾನಮಾನ ನೀಡಿದರೆ ಪ್ರಜಾಪ್ರಭುತ್ವದ ರಕ್ಷಣೆಗೆ ಬಲ ಸಿಗುತ್ತದೆ. ವಿಶೇಷವಾಗಿ SIR ಪ್ರಕ್ರಿಯೆಯಡಿಯಲ್ಲಿ ವಿವಿಧ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆದಿರುವ ಮತದಾರರ ಹಕ್ಕು ಹರಣ ಅಥವಾ ಅನ್ಯಾಯಕರ ಅನರ್ಹತೆ ವಿರುದ್ಧ ಸುಪ್ರೀಂ ಕೋರ್ಟ್ ಮಟ್ಟದ ಗಟ್ಟಿಯಾದ ನ್ಯಾಯಾಂಗ ಪರಿಶೀಲನೆ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಐದು ವರ್ಷದ ಬಾಲಕನ ಸಾವಿಗೆ ಕಾರಣವಾದ ಮೋಟಾರು ಅಪಘಾತ ಪರಿಹಾರ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ, ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿತ್ತು.

ಗುರುತಿಸಲಾದ ಪಾದಚಾರಿ ಮಾರ್ಗಗಳಲ್ಲಿ ನಡೆಯುವ ಹಕ್ಕು ಸಂವಿಧಾನದ ಅಡಿಯಲ್ಲಿ ರಕ್ಷಿಸಲ್ಪಟ್ಟ ಮೂಲಭೂತ ಹಕ್ಕಾಗಿದ್ದು, ರಸ್ತೆಗಳಲ್ಲಿ ಮೋಟಾರು ವಾಹನಗಳ ಚಲನೆಗಿಂತ ಈ ಹಕ್ಕು ಹೆಚ್ಚಿನ ಆದ್ಯತೆಯನ್ನು ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟಿತ್ತು.

ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೇ “ಭಾರತೀಯ ಪ್ರಜಾಪ್ರಭುತ್ವವನ್ನು ಉಳಿಸಬೇಕಾದರೆ ಮತದಾನದ ಹಕ್ಕನ್ನೂ ಮೂಲಭೂತ ಹಕ್ಕು ಎಂದು ಘೋಷಿಸಬಾರದೆ?” ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com