'ಕನ್ನಡ ಬಂದಿದ್ರೆ ಇನ್ನೂ ಚೆನ್ನಾಗಿ ಮಾತನಾಡುತ್ತಿದ್ದೆ': ಕಾಂಗ್ರೆಸ್ ಸಿಎಂಗಳ ಎದುರೇ ಪ್ರಧಾನಿ ಮೋದಿ ಗುಣಗಾನ ಮಾಡಿದ ಆಂಧ್ರ ಸಿಎಂ Chandrababu Naidu!

ಕನ್ನಡದಲ್ಲೇ ಭಾಷಣ ಆರಂಭಿಸಿದ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಕಾಂಗ್ರೆಸ್​​ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್​​ ಮತ್ತು ರೇವಂತ್​​ ರೆಡ್ಡಿ ಎದುರೇ ಪ್ರಧಾನಿ ಮೋದಿ ಗುಣಗಾನ ಮಾಡಿದರು.
AP CM Chandrababu Naidu
ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು
Updated on

ಹೊಸಪೇಟೆ: ತುಂಗಭದ್ರ ಜಲಾಶಯದ ಕ್ರೆಸ್ಟ್ ಗೇಟ್ ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಿಎಂಗ ಎದುರೇ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಪ್ರಧಾನಿ ನರೇಂದ್ರ ಮೋದಿ ಅವರ ಗುಣಗಾನ ಮಾಡಿದ ಘಟನೆ ನಡೆದಿದೆ.

ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್​ ಗೇಟ್​​ಗಳ ಲೋಕಾರ್ಪಣೆ ಹಿನ್ನೆಲೆ ಕೊಪ್ಪಳ ತಾಲೂಕಿನ ಮುನಿರಾಬಾದ್​ನಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ನದಿಗಳ ಜೋಡಣೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯನ್ನು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ರೈತ ಬಾಂಧವರಿಗೆ ನಮಸ್ಕಾರ ಅಂತಾ ಕನ್ನಡದಲ್ಲೇ ಭಾಷಣ ಆರಂಭಿಸಿದ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಕಾಂಗ್ರೆಸ್​​ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್​​ ಮತ್ತು ರೇವಂತ್​​ ರೆಡ್ಡಿ ಎದುರೇ ಪ್ರಧಾನಿ ಮೋದಿ ಗುಣಗಾನ ಮಾಡಿದರು.

AP CM Chandrababu Naidu
ತುಂಗಭದ್ರೆಗೆ ಹೊಸ ಕಳೆ; ನೂತನ 33 ಕ್ರೆಸ್ಟ್ ಗೇಟ್‌ಗಳ ಲೋಕಾರ್ಪಣೆ: ಒಂದೇ ವೇದಿಕೆಯಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳು..!

ಗೋದಾವರಿ- ಕಾವೇರಿ ನದಿಗಳ ಜೋಡಣೆಗೆ ಆಗ್ರಹ

ಇದೇ ವೇಳೆ ಗೋದಾವರಿ- ಕಾವೇರಿ ನದಿಗಳ ಜೋಡಣೆಗೆ ಆಗ್ರಹಿಸಿದ ಚಂದ್ರಬಾಬು ನಾಯ್ಡು ಅವರು, ನದಿಗಳ ಜೋಡಣೆಯಿಂದ ನೀರಿನ ಸಮಸ್ಯೆಗೆ ಪರಿಹಾರ ದೊರೆಯಲಿದ್ದು, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಇದು ನಡೆಯುವ ವಿಶ್ವಾಸ ತನಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ಈಗಾಗಲೇ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ನಡುವಿನ 'ಕೆನ್-ಬೆತ್ವಾ' ಯೋಜನೆ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ನಡುವಿನ 'ಪಾರ್ವತಿ-ಕಾಳಿಸಿಂಧು-ಚಂಬಲ್' ನದಿ ಜೋಡಣೆ ಯೋಜನೆಗಳನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದೆ.

ಇದೇ ಮಾದರಿಯಲ್ಲಿ ದಕ್ಷಿಣ ಭಾರತದ ಪ್ರಮುಖ ನದಿಗಳಾದ ಗೋದಾವರಿ ಮತ್ತು ಕಾವೇರಿ ನದಿಗಳ ಜೋಡಣೆ ಯೋಜನೆಯನ್ನು ಕೇಂದ್ರ ಸರ್ಕಾರವು 'ರಾಷ್ಟ್ರೀಯ ಯೋಜನೆ'ಯಾಗಿ ಪರಿಗಣಿಸಿ ಅನುಷ್ಠಾನಕ್ಕೆ ತರಬೇಕು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ಅಲ್ಲದೆ ದೇಶದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನದಿಗಳ ಜೋಡಣೆ ಅತ್ಯಂತ ತುರ್ತಾಗಿ ಆಗಬೇಕಿದೆ. ನದಿ ಜೋಡಣೆ ಪ್ರಕ್ರಿಯೆಯಲ್ಲಿ ಯಾವುದೇ ರಾಜ್ಯಕ್ಕೆ ಅನ್ಯಾಯವಾಗಬಾರದು ಎಂದು ಸ್ಪಷ್ಟಪಡಿಸಿದ ನಾಯ್ಡು ಅವರು, ಈ ಯೋಜನೆಯನ್ನು ಜಾರಿಗೊಳಿಸುವಾಗ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಸಬೇಕು ಎಂದು ಒತ್ತಿ ಹೇಳಿದರು.

ಈ ಮೂರೂ ರಾಜ್ಯಗಳ ಹಕ್ಕುಗಳಿಗೆ ಧಕ್ಕೆ ಬಾರದಂತೆ ಸೂಕ್ತ ಕ್ರಿಯ ಯೋಜನೆ ರೂಪಿಸುವುದರ ಜೊತೆಗೆ, ಅಗತ್ಯ ಬಿದ್ದರೆ ತಮಿಳುನಾಡಿಗೂ ನೀರನ್ನು ಕೊಂಡೊಯ್ಯುವ ವ್ಯವಸ್ಥೆ ಮಾಡಬೇಕು. ರಾಜ್ಯಗಳ ಒಳಗೆ ನದಿಗಳ ಜೋಡಣೆ ಯಶಸ್ವಿಯಾದ ನಂತರ, ರಾಜ್ಯಗಳ ನಡುವಿನ ಜೋಡಣೆಗೆ ಎಲ್ಲರೂ ಒಪ್ಪಿಗೆ ನೀಡಬೇಕು ಎಂದು ಚಂದ್ರಬಾಬು ನಾಯ್ಡು ಅವರು ಕರೆ ನೀಡಿದರು.

ಎನ್`ಟಿಆರ್ ಸ್ಮರಣೆ

ಇದೇ ವೇಳೆ 1983 ರಲ್ಲಿ ಎನ್.ಟಿ. ರಾಮರಾವ್ ಅವರ ನಾಯಕತ್ವದಲ್ಲಿ ಅವಿಭಜಿತ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಒಟ್ಟಾಗಿ ಸೇರಿ ಚೆನ್ನೈನ ಕುಡಿಯುವ ನೀರಿಗಾಗಿ 15 ಟಿಎಂಸಿ ಅಡಿ ನೀರನ್ನು ಒದಗಿಸಿದ್ದ ಐತಿಹಾಸಿಕ ಒಕ್ಕೂಟ ವ್ಯವಸ್ಥೆಯ ಉದಾಹರಣೆಯನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.

ಪ್ರಸ್ತುತ ದೇಶದಲ್ಲಿ ಒಂದು ಕಡೆ ಭೀಕರ ಪ್ರವಾಹ ಬಂದರೆ, ಮತ್ತೊಂದು ಕಡೆ ತೀವ್ರ ಬರಗಾಲವಿರುತ್ತದೆ. ಈ ವರ್ಷ ಎಲ್ ನಿನೋ ಪ್ರಭಾವದಿಂದಾಗಿ ತುಂಗಭದ್ರಾ ಹಾಗೂ ಆಲಮಟ್ಟಿ ಜಲಾಶಯಗಳಿಗೂ ನಿರೀಕ್ಷಿತ ಪ್ರಮಾಣದಲ್ಲಿ ನೀರಿನ ಒಳಹರಿವು ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದೇಶದ ಎಲ್ಲಾ ನದಿಗಳನ್ನು ಜೋಡಿಸುವುದೇ ಇರುವ ಏಕೈಕ ಮಾರ್ಗವಾಗಿದೆ.

ಹೆಚ್ಚುವರಿ ನೀರಿರುವ ನದಿಗಳಿಂದ ಕೊರತೆಯಿರುವ ನದಿಗಳಿಗೆ ನೀರನ್ನು ಹರಿಸುವ ಮೂಲಕ ಬರಗಾಲವನ್ನು ಸಮರ್ಥವಾಗಿ ಎದುರಿಸಬಹುದು. ಇದರಿಂದ ರಾಜ್ಯಗಳ ನಡುವಿನ, ಜಿಲ್ಲೆಗಳ ನಡುವಿನ ಹಾಗೂ ರೈತರ ನಡುವಿನ ನೀರಿನ ಸಂಘರ್ಷಗಳನ್ನು ಸಂಪೂರ್ಣವಾಗಿ ತಡೆಯಬಹುದು ಎಂದು ಚಂದ್ರಬಾಬು ನಾಯ್ಡು ಅಭಿಪ್ರಾಯಪಟ್ಟರು.

'ಕನ್ನಡ ಬಂದಿದ್ರೆ ಇನ್ನೂ ಚೆನ್ನಾಗಿ ಮಾತನಾಡುತ್ತಿದ್ದೆ'

ನನಗೆ ಕನ್ನಡ ಬಂದಿದ್ರೆ ಇನ್ನೂ ಚೆನ್ನಾಗಿ ಮಾತನಾಡುತ್ತಿದ್ದೆ ಎಂದ ಚಂದ್ರಬಾಬು ನಾಯ್ಡು, 'ತುಂಗಭದ್ರಾ ತಾಯಿಗೆ ಶಿರಭಾಗಿ ನಮಸ್ಕಾರ ಮಾಡ್ತೀನಿ. ತುಂಗಾ ಪಾನಃ ಗಂಗಾ ಸ್ನಾನಃ ಎಂಬ ಮಾತಿದೆ. ತುಂಗಾ ನೀರು ಕುಡಿಯಲು ಶುದ್ಧ ಎಂದೇ ಪ್ರಸಿದ್ದಿ ಪಡೆದಿದೆ. ಕೊಚ್ಚಿ ಹೋಗಿದ್ದರಿಂದ ನೂತನ ಕ್ರಸ್ಟ್‌ ಗೇಟ್‌ ಲೋಕಾರ್ಪಣೆ ಆಗಿದೆ. ಕೊಚ್ಚಿ ಹೋಗಿದ್ದ ಒಂದು ಗೇಟ್‌ನ್ನು ಮಾತ್ರ ಹೊಸದಾಗಿ ಅಳವಡಿಸಿಲ್ಲ. ಬದಲಾಗಿ ಜಲಾಶಯದ ಎಲ್ಲಾ 33 ಗೇಟ್ ಹೊಸದಾಗಿ ಅಳವಡಿಸಲಾಗಿದೆ. ಕೇವಲ ಆರು ತಿಂಗಳಲ್ಲಿ ಈ ಕೆಲಸ ಮುಗಿದಿದ್ದಕ್ಕೆ ಹೆಮ್ಮೆ ಇದೆ ಎಂದರು.

ಮೂವರು ಸಿಎಂಗಳು ಒಂದೇ ವೇದಿಕೆಯಲ್ಲಿ ಸೇರಿದ್ದು ಒಂದು ಇತಿಹಾಸ ಎಂದ ನಾಯ್ಡು, ಹೊಸ ಕ್ರಸ್ಟ್‌ ಗೇಟ್‌ ಅಳವಡಿಕೆ ವಿಳಂಬವಾಗಿದ್ದರೆ ಭಾರಿ ಅಪಾಯ ಆಗುತ್ತಿತ್ತು. ಇದೀಗ ಆ ಅಪಾಯ ದೂರವಾಗಿದೆ ಎಂದರು.

AP CM Chandrababu Naidu
ಮತ್ತೊಂದು ದುರಂತ: ಗೋವಾದ ಬಾಗಾ ಬೀಚ್‌ನಲ್ಲಿ ಅಲೆಗಳ ಅಬ್ಬರಕ್ಕೆ ಕೊಚ್ಚಿಹೋಗಿ ಕರ್ನಾಟಕ ಪ್ರವಾಸಿಗ ಸಾವು, Video

ಮೋದಿ ನಾಯಕತ್ವದಲ್ಲಿ ದೇಶ ವೇಗವಾಗಿ ಮುನ್ನಡೆಯುತ್ತಿದೆ

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶ ಬಹಳ ವೇಗವಾಗಿ ಮುನ್ನಡೆಯುತ್ತಿದೆ. ಸರಿಯಾದ ವ್ಯಕ್ತಿ, ಸರಿಯಾದ ಸ್ಥಳ ಮತ್ತು ಸರಿಯಾದ ಸಮಯ ಇದ್ದರೆ ಎಲ್ಲ ಸಾಧ್ಯವೆಂದು ಪ್ರತಿದಾರಿ ಬಾರಿ ನಾನು ಹೇಳುತ್ತೇನೆ. ಅದು ನರೇಂದ್ರ ಮೋದಿ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ದೇಶವು ತಂತ್ರಜ್ಞಾನ, ಹೆದ್ದಾರಿ ಹಾಗೂ ದೂರಸಂಪರ್ಕ ವಲಯದಲ್ಲಿ ಜಾಗತಿಕ ಮಟ್ಟದಲ್ಲಿ ವೇಗವಾಗಿ ಮುನ್ನಡೆಯುತ್ತಿದ್ದು, ನದಿಗಳ ಜೋಡಣೆ ಪ್ರಕ್ರಿಯೆಯೂ ಅವರ ನೇತೃತ್ವದಲ್ಲಿ ಯಶಸ್ವಿಯಾಗಲಿದೆ ಎಂಬ ದೃಢ ವಿಶ್ವಾಸವನ್ನು ನಾಯ್ಡು ವ್ಯಕ್ತಪಡಿಸಿದರು.

12 ಜನರಿಗೆ ಸನ್ಮಾನ

ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್​​ ಗೇಟ್​​ಗಳನ್ನು ಯಶಸ್ವಿಯಾಗಿ ಅಳವಡಿಕೆ ಮಾಡಿದ ಕನ್ನಯ್ಯ ನಾಯ್ಡು ಸೇರಿದಂತೆ 12 ಜನರಿಗೆ ಕಾರ್ಯಕ್ರಮದ ವೇದಿಕೆಯಲ್ಲಿ ಸನ್ಮಾನ ನೆರವೇರಿಸಲಾಗಿದೆ. ಮೂರು ರಾಜ್ಯಗಳ ಸಿಎಂ ಹಾಗೂ ಕೇಂದ್ರ ಜಲಶಕ್ತಿ ಸಚಿವರು ಗೌರವ ಸಮರ್ಪಣೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಮೂರು ರಾಜ್ಯಗಳ ಸಿಎಂಗಳು ಭಾಗಿಯಾಗಿದ್ದು ವಿಶೇಷವಾಗಿತ್ತು. ಜೊತೆಗೆ ಕೇಂದ್ರ ಜಲಶಕ್ತಿ ಸಚಿವ ಸಿ. ಆರ್. ಪಾಟೀಲ್ ಸೇರಿ ಆಂಧ್ರ ಮತ್ತು ತೆಲಂಗಾಣ ಎರಡೂ ರಾಜ್ಯಗಳ ಜಲಸಂಪನ್ಮೂಲ ಸಚಿವರು ಕೂಡ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com