

ಪುಣೆ: ಲೋಹಗಢ ಕೋಟೆಯಲ್ಲಿ ನಡೆದ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು, ಇದೀಗ ಮತ್ತೊಂದು ಸ್ಫೋಟಕ ಅಂಶ ಭಾರಿ ಸುದ್ದಿಗೆ ಗ್ರಾಸವಾಗಿದೆ.
ಜೂನ್ 18ರಂದು ಪುಣೆ ಜಿಲ್ಲೆಯ ಲೋಹಗಢ ಕೋಟೆಯಲ್ಲಿ ಕಂದಕಕ್ಕೆ ಬಿದ್ದು ಮೃತಪಟ್ಟ 25 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.
ಈ ನಡುವೆ ಲೋಹಗಢ ಕೋಟೆಯಲ್ಲಿ ಕೇತನ್ ಅಗರ್ವಾಲ್ ಅವರ ದೇಹದ ರಕ್ಷಣಾ ಕಾರ್ಯಾಚರಣೆ ನಡೆಸಿದ್ದ ತಂಡದ ಸದಸ್ಯನ ಹೇಳಿಕೆ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಕೇತನ್ ರನ್ನು ಕೋಟೆಯ ಮೇಲಿಂದ ತಳ್ಳುವ ಮೊದಲೇ ಅವರನ್ನು ಕೊಲ್ಲಲಾಗಿತ್ತೇ ಎಂಬ ಆಘಾತಕಾರಿ ಪ್ರಶ್ನೆ ಮೂಡುತ್ತಿದೆ.
ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್ ಇಬ್ಬರೂ ಕೇತನ್ ರನ್ನು ಕೊಲೆಗೈದು ಅವರ ತಲೆ ಜಜ್ಜಿ ಹಾಕಿ ಬಳಿಕ ಕೋಟೆ ಮೇಲಿಂದ ಕೆಳಗೆ ತಳ್ಳಿದರೇ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಕೇತನ್ ಮೃತದೇಹವನ್ನು ಹೊರತೆಗೆದ ರಕ್ಷಣಾ ತಂಡದ ಸದಸ್ಯರೊಬ್ಬರು, ಕೇತನ್ ಅವರ ತಲೆ ಜಜ್ಜಿದ ಸ್ಥಿತಿಯಲ್ಲಿದ್ದು, ಕೈಕಾಲುಗಳಲ್ಲಿ ಹಲವಾರು ಗಾಯಗಳಿದ್ದವು ಎಂದು ತಿಳಿಸಿದ್ದಾರೆ.
ತಲೆ ಜಜ್ಜಿದ ಸ್ಥಿತಿಯಲ್ಲಿ ದೇಹ ಪತ್ತೆ
ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಗಾಯಕ್ವಾಡ್ ಎಂಬ ಸಿಬ್ಬಂದಿ ಮೃತದೇಹವನ್ನು ಹೊರತೆಗೆದ ಸಂದರ್ಭವನ್ನು ನೆನಪಿಸಿಕೊಂಡು ಸುದ್ದಿಸಂಸ್ಥೆ ಜೊತೆ ಮಾತನಾಡಿದ್ದಾರೆ.
ಈ ವೇಳೆ ಅವರು 'ಬೆಳಗ್ಗೆ 10.30ಕ್ಕೆ ಪೊಲೀಸ್ ಠಾಣೆಗೆ ಮಾಹಿತಿ ಬಂದಿತ್ತು. ರಕ್ಷಣಾ ಕಾರ್ಯಾಚರಣೆ ಮಧ್ಯಾಹ್ನ 12.30ರವರೆಗೆ ನಡೆಯಿತು. ಕೇತನ್ ಮೃತದೇಹ ಸಿಕ್ಕಾಗ ಅವರ ತಲೆ ಜಜ್ಜಿದ ಸ್ಥಿತಿಯಲ್ಲಿತ್ತು. ದೇಹದ ಅನೇಕ ಕಡೆಗಳಲ್ಲಿ ಸಾಕಷ್ಟು ಗಾಯಗಳಾಗಿದ್ದವು. ನಂತರ ಮಧ್ಯಾಹ್ನ 1.30ರ ಸುಮಾರಿಗೆ ಮೃತದೇಹವನ್ನು ಆಂಬ್ಯುಲೆನ್ಸ್ ಸಿಬ್ಬಂದಿಗೆ ಹಸ್ತಾಂತರಿಸಲಾಯಿತು ಎಂದು ಹೇಳಿದ್ದಾರೆ.
ಅಂತೆಯೇ ಕೇತನ್ ಅವರ ಮೃತದೇಹವನ್ನು ದಟ್ಟ ಅರಣ್ಯದ ಮಾರ್ಗವಾಗಿ ಹೊತ್ತು ತರಬೇಕಾಗಿದ್ದು, ಕಡಿದಾದ ಇಳಿಜಾರಿನಲ್ಲಿ ಅದನ್ನು ಮೇಲಕ್ಕೆತ್ತುವುದು ರಕ್ಷಣಾ ಸಿಬ್ಬಂದಿಗೆ ಸವಾಲಾಗಿತ್ತು ಎಂದು ಗಾಯಕ್ವಾಡ್ ಹೇಳಿದ್ದಾರೆ.
ಇನ್ನು ತನಿಖಾ ತಂಡದ ಅಧಿಕಾರಿಗಳು ಅಭಿಪ್ರಾಯಪಟ್ಟಂತೆ ಕೇತನ್ ಗುಡ್ಡದ ಮೇಲಿಂದ ಬಿದ್ದಾಗ ಬಂಡೆ ಕಲ್ಲುಗಳಿಗೆ ಅವರ ತಲೆ ಬಡಿದಿರುವ ಸಾಧ್ಯತೆ ಕೂಡ ಇದೆ. ಈ ಬಗ್ಗೆ ವೈದ್ಯಕೀಯ ಪರೀಕ್ಷೆಗಳು ಮಾಹಿತಿ ನೀಡಬಹುದು ಎಂದು ಹೇಳಿದ್ದಾರೆ.
ಎಲ್ಲರೂ ಅಳುತ್ತಿದ್ದರೆ ಸಿಯಾ ಶಾಂತವಾಗಿದ್ದಳು
ಅಂತೆಯೇ ಕೇತನ್ ಮೃತದೇಹವನ್ನು ಹೊರತೆಗೆಯುವ ಕಾರ್ಯಾಚರಣೆ ವೇಳೆ ಆತನ ಭಾವಿ ಪತ್ನಿ ಸಿಯಾ ಕೂಡ ಅಲ್ಲಿಯೇ ಇದ್ದಳು. ಅಲ್ಲಿ ಇದ್ದ ಬಹುತೇಕ ಎಲ್ಲರೂ ಆತಂಕಗೊಂಡು ದುಃಖ ವ್ಯಕ್ತಪಡಿಸುತ್ತಿದ್ದಾಗ, ಸಿಯಾ ಮಾತ್ರ ಶಾಂತವಾಗಿ ಕಾಣಿಸಿಕೊಂಡಳು. ಆದರೆ ಇತರರು ಜೋರಾಗಿ ಅಳುತ್ತಿದ್ದರೂ, ಆಕೆ ಹೆಚ್ಚು ಭಾವನಾತ್ಮಕವಾಗಿ ವರ್ತಿಸುತ್ತಿರುವಂತೆ ಕಂಡುಬಂದಿಲ್ಲ" ಎಂದು ಗಾಯಕ್ವಾಡ್ ಅವರು ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಚಾಟ್ ಮತ್ತು ರಿಸೈಕಲ್ ಬಿನ್ ಕೂಡ ಡಿಲೀಟ್
ಇತ್ತ ಪ್ರಕರಣದ ತನಿಖೆ ಮುಂದುವರಿದಿರುವಾಗ, ಪೊಲೀಸರು ಸಿಯಾ ಮತ್ತು ಚೇತನ್ ಇಬ್ಬರೂ ಅಪರಾಧಕ್ಕೂ ಮೊದಲು ಹಾಗೂ ಲೋಹಗಢ ಘಟನೆಯ ನಂತರ ತಮ್ಮ ಮೊಬೈಲ್‌ಗಳಲ್ಲಿದ್ದ ಸಂಪೂರ್ಣ ಚಾಟ್ ಇತಿಹಾಸ ಮತ್ತು ರಿಸೈಕಲ್ ಬಿನ್‌ನಲ್ಲಿದ್ದ ಮಾಹಿತಿ ಎರಡನ್ನೂ ಅಳಿಸಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
"ತನಿಖೆಯ ವೇಳೆ, ಇಬ್ಬರೂ ಆರೋಪಿಗಳು ಜೂನ್ 18ಕ್ಕೂ ಮುನ್ನ ಮತ್ತು ಲೋಹಗಢ ಘಟನೆ ನಡೆದ ನಂತರ ತಮ್ಮ ಫೋನ್‌ಗಳಲ್ಲಿದ್ದ ಚಾಟ್‌ಗಳನ್ನು ಅಳಿಸಿರುವುದು ಬೆಳಕಿಗೆ ಬಂದಿದೆ. ತಮ್ಮ ಫೋನ್‌ಗಳ ರಿಸೈಕಲ್ ಬಿನ್‌ಗಳಿಂದಲೂ ಆ ಚಾಟ್‌ಗಳನ್ನು ಸಂಪೂರ್ಣವಾಗಿ ಅಳಿಸಲಾಗಿದೆ," ಎಂದು ತನಿಖಾ ತಂಡದ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
6 ತಿಂಗಳಿನಿಂದ ಸಂಪರ್ಕ
ಪುಣೆ ಗ್ರಾಮೀಣ ಪೊಲೀಸರ ತನಿಖೆಯ ಪ್ರಕಾರ, ಸಿಯಾ ಮತ್ತು ಚೇತನ್ ಕಳೆದ ಆರು ತಿಂಗಳಿನಿಂದ ಪರಸ್ಪರ ಸಂಪರ್ಕದಲ್ಲಿದ್ದು, ಈ ಅವಧಿಯಲ್ಲಿ ಸುಮಾರು 2,004 ಬಾರಿ ದೂರವಾಣಿ ಕರೆಗಳ ಮೂಲಕ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ, ಘಟನೆ ನಡೆದ ದಿನ ಇಬ್ಬರೂ ನಗರದ ಕಾಫಿ ಕಫೆಯೊಂದರಲ್ಲಿ ಭೇಟಿಯಾಗಿ ಕೊಲೆ ಸಂಚಿನ ಅಂತಿಮ ರೂಪುರೇಷೆಗಳನ್ನು ಚರ್ಚಿಸಿದ್ದರೆಂಬ ಆರೋಪವೂ ಕೇಳಿಬಂದಿದೆ. ಅಲ್ಲದೆ, ಲೋಹಗಢ ಕೋಟೆಯಲ್ಲಿ ಕೇತನ್ ಅವರನ್ನು ಯಾವ ಸ್ಥಳದಿಂದ ತಳ್ಳಬೇಕು ಎಂಬುದನ್ನೂ ಮುಂಚಿತವಾಗಿಯೇ ಯೋಜಿಸಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.
ಸಿಯಾ ಸಹೋದರನ ವಿಚಾರಣೆ
ಇತ್ತ ಸಿಯಾಗೆ ಚೇತನ್‌ನನ್ನು ಪರಿಚಯಿಸಿದ್ದಾನೆ ಎನ್ನಲಾದ ಆಕೆಯ ಸಹೋದರ ಸಾಹಿಲ್‌ನನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಶುಕ್ರವಾರ 10 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆಗೆ ಒಳಗಾದ ಸಾಹಿಲ್, ಸಿಯಾ ಮತ್ತು ಚೇತನ್ ನಡುವಿನ ಸಂಬಂಧದ ಬಗ್ಗೆ ಹಲವು ತಿಂಗಳುಗಳಿಂದ ತಿಳಿದಿದ್ದೆ.
ಕೇತನ್ ಅವರೊಂದಿಗೆ ಸಿಯಾಗೆ ನಿಶ್ಚಿತಾರ್ಥವಾಗಿದ್ದ ಕಾರಣ ಆ ಸಂಬಂಧವನ್ನು ಕೊನೆಗೊಳಿಸುವಂತೆ ತಾನು ಸಲಹೆ ನೀಡಿದ್ದೆ ಎಂದು ಪೊಲೀಸರಿಗೆ ಹೇಳಿರುವುದಾಗಿ ವರದಿಯಾಗಿದೆ.