3 ತಿಂಗಳ ಮುಂಚೆಯೇ ರಾಮ ಮಂದಿರ ಹಣ ಎಣಿಕೆ ಸಿಬ್ಬಂದಿಗಳ ಕಿತ್ತೊಗೆಯಲು SBI ಶಿಫಾರಸ್ಸು ಮಾಡಿತ್ತು: ವರದಿ

ರಾಮ ಮಂದಿರ ಟ್ರಸ್ಟ್‌ನ ಕೆಲವು ಅಧಿಕಾರಿಗಳು ಮಧ್ಯಪ್ರವೇಶಿಸಿ ಸಿಬ್ಬಂದಿಯನ್ನು ವಜಾಗೊಳಿಸುವುದನ್ನು ತಡೆದಿದ್ದರು ಎನ್ನಲಾಗಿದೆ.
Ayodhya Ram Mandir
ರಾಮ ಮಂದಿರ online desk
Updated on

ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, 3 ತಿಂಗಳ ಮುಂಚೆಯೇ ರಾಮ ಮಂದಿರ ಹಣ ಎಣಿಕೆ ಸಿಬ್ಬಂದಿಗಳ ಕಿತ್ತೊಗೆಯಲು SBI ಶಿಫಾರಸ್ಸು ಮಾಡಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.

ಅಯೋಧ್ಯೆಯ ರಾಮ ಮಂದಿರದ ಹುಂಡಿ ದೇಣಿಗೆ ಹಣ ಎಣಿಕೆ ಸಿಬ್ಬಂದಿಯ ವಿರುದ್ಧ ಕಳ್ಳತನದ ಅನುಮಾನ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ, ಹುಂಡಿ ದೇಣಿಗೆ ಹಣ ಎಣಿಕೆ ಸಿಬ್ಬಂದಿಗಳನ್ನು ಮೂರು ತಿಂಗಳ ಹಿಂದೆಯೇ ಕರ್ತವ್ಯದಿಂದ ತೆಗೆದುಹಾಕುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಿಫಾರಸು ಮಾಡಿತ್ತು ಎಂದು ಮೂಲಗಳು ತಿಳಿಸಿವೆ.

ಆದರೆ, ರಾಮ ಮಂದಿರ ಟ್ರಸ್ಟ್‌ನ ಕೆಲವು ಅಧಿಕಾರಿಗಳು ಮಧ್ಯಪ್ರವೇಶಿಸಿ ಸಿಬ್ಬಂದಿಯನ್ನು ವಜಾಗೊಳಿಸುವುದನ್ನು ತಡೆದಿದ್ದರು ಎನ್ನಲಾಗಿದೆ.

ದೇಣಿಗೆ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಾಮ ಮಂದಿರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಇದೇ ಪ್ರಕರಣದಲ್ಲಿ ಮಾಜಿ ಟ್ರಸ್ಟಿ ಅನಿಲ್ ಮಿಶ್ರಾ ಹಾಗೂ ಗೋಪಾಲ್ ರಾವ್ ಅವರಿಗೆ ಕೂಡ ಶೀಘ್ರದಲ್ಲೇ ನೋಟಿಸ್ ಜಾರಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇತ್ತ ಪ್ರಕರಣ ಬೆಳಕಿಗೆ ಬರುತ್ತಲೇ ಚಂಪತ್ ರೈ ಮತ್ತು ಅನಿಲ್ ಮಿಶ್ರಾ ಈಗಾಗಲೇ ಟ್ರಸ್ಟ್‌ಗೆ ರಾಜೀನಾಮೆ ನೀಡಿದ್ದು, ಗೋಪಾಲ್ ರಾವ್ ಕೂಡ ಟ್ರಸ್ಟ್ ಚಟುವಟಿಕೆಗಳಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ದೇಣಿಗೆ ಹಣ ಎಣಿಕೆ ಕಾರ್ಯದಲ್ಲಿ ತೊಡಗಿದ್ದ ಎಂಟು ಸಿಬ್ಬಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಜೊತೆಗೆ, ಹುಂಡಿಗಳಿಂದ ಕಳವಾಗಿರುವ ಹಣ ಮತ್ತು ಇತರೆ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

Ayodhya Ram Mandir
ರಾಮ ಮಂದಿರ ದೇಣಿಗೆ ವಿವಾದ: 'ಆಕಾಶವೇನು ಕಳಚಿ ಬೀಳಲ್ಲ'; ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ..!

ಸಿಬ್ಬಂದಿಗೆ ಟ್ರಸ್ಟ್ ಅಧಿಕಾರಿಗಳ ಬೆಂಬಲ?

ರಾಮ ಮಂದಿರ ಟ್ರಸ್ಟ್‌ನ ಬ್ಯಾಂಕ್ ಖಾತೆಯನ್ನು ನಿರ್ವಹಿಸುತ್ತಿರುವ ಎಸ್‌ಬಿಐ, ದೇಣಿಗೆ ಹಣ ಎಣಿಕೆ ಕಾರ್ಯವನ್ನು ಖಾಸಗಿ ಔಟ್‌ಸೋರ್ಸಿಂಗ್ ಸಂಸ್ಥೆಗೆ ವಹಿಸಿತ್ತು. ಸುಮಾರು ಮೂರು ತಿಂಗಳ ಹಿಂದೆಯೇ ಹುಂಡಿಯ ಹಣವನ್ನು ದುರುಪಯೋಗ ಮಾಡಲಾಗುತ್ತಿದೆ ಎಂಬ ಅನುಮಾನ ಬ್ಯಾಂಕ್‌ಗೆ ಬಂದಿತ್ತು. ಇದರಿಂದಾಗಿ ದೇಣಿಗೆ ಎಣಿಕೆ ಸಿಬ್ಬಂದಿಯನ್ನು ಬದಲಾಯಿಸುವಂತೆ ಎಸ್‌ಬಿಐ ಶಿಫಾರಸು ಮಾಡಿತ್ತು.

ಔಟ್‌ಸೋರ್ಸಿಂಗ್ ಸಂಸ್ಥೆಯೂ ಸಿಬ್ಬಂದಿಯನ್ನು ತೆಗೆದುಹಾಕಲು ಸಿದ್ಧತೆ ನಡೆಸಿತ್ತು. ಆದರೆ ಟ್ರಸ್ಟ್‌ನ ಕೆಲವು ಅಧಿಕಾರಿಗಳು ಮಧ್ಯಪ್ರವೇಶಿಸಿ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ. ಚಂಪತ್ ರೈ ಮತ್ತು ಅನಿಲ್ ಮಿಶ್ರಾ ಅವರ ಪ್ರಭಾವದ ಕಾರಣದಿಂದ ಸಿಬ್ಬಂದಿಯನ್ನು ವಜಾಗೊಳಿಸಲು ಸಾಧ್ಯವಾಗಲಿಲ್ಲ. ಇದರಿಂದ ಕಳ್ಳತನದ ಚಟುವಟಿಕೆಗಳು ನಿರಂತರವಾಗಿ ಮುಂದುವರಿದವು ಎಂದು ಮೂಲಗಳು ಆರೋಪಿಸಿವೆ.

ಬ್ಯಾಂಕ್ ಸಿಬ್ಬಂದಿಯ ಪಾತ್ರವೂ ತನಿಖೆಗೆ

ಮಾತ್ರವಲ್ಲದೇ ಈ ಪ್ರಕರಣದಲ್ಲಿ ಎಸ್‌ಬಿಐ ಸಿಬ್ಬಂದಿಗಳಾದ ರತ್ನೇಶ್ ಮತ್ತು ಗಗನದೀಪ್ ಅವರ ಪಾತ್ರವೂ ಬೆಳಕಿಗೆ ಬಂದಿದೆ. ಇಬ್ಬರೂ ಬ್ಯಾಂಕ್ ಉದ್ಯೋಗಿಗಳಾಗಿದ್ದು, ದೇಣಿಗೆ ಹಣ ಎಣಿಕೆ ನಡೆಯುವ ಕೊಠಡಿಯಲ್ಲಿ ಮೇಲ್ವಿಚಾರಣೆಗಾಗಿ ಹಾಜರಿರುತ್ತಿದ್ದರು. ಕಳ್ಳತನದಲ್ಲಿ ಅವರ ಪಾತ್ರವಿದೆ ಎಂಬುದಕ್ಕೆ ಪೊಲೀಸರಿಗೆ ಸ್ಪಷ್ಟ ಸಾಕ್ಷ್ಯಗಳು ದೊರೆತಿವೆ ಎಂದು ಮೂಲಗಳು ತಿಳಿಸಿವೆ. ಅವರ ವಿರುದ್ಧವೂ ಶೀಘ್ರದಲ್ಲೇ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

Ayodhya Ram Mandir
ರಾಮ ಮಂದಿರ ದೇಣಿಗೆ ದುರುಪಯೋಗ ಆರೋಪ: ಟ್ರಸ್ಟ್ ನ ಮಾಜಿ ಕಾರ್ಯದರ್ಶಿ ಚಂಪತ್ ರಾಯ್ ಹೇಳಿಕೆ ದಾಖಲಿಸಿದ ಪೊಲೀಸರು!

ಶಿಫಾರಸ್ಸು ಆಧಾರದಲ್ಲಿ ನೇಮಕ?

ಇದಕ್ಕೂ ಮೊದಲು ದೇಣಿಗೆ ಎಣಿಕೆ ಸಿಬ್ಬಂದಿಯನ್ನು ಪೊಲೀಸ್ ಪರಿಶೀಲನೆ ಇಲ್ಲದೆ, ಶಿಫಾರಸುಗಳ ಆಧಾರದ ಮೇಲೆ ನೇಮಕ ಮಾಡಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿತ್ತು. ಬಂಧಿತ ಎಂಟು ಆರೋಪಿಗಳಲ್ಲಿ ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ರಾಮಶಂಕರ್ ಮಿಶ್ರಾ, ಅವ್ನೀಶ್ ಹಾಗೂ ಕರುಣೇಶ್ ಶುಕ್ಲಾ ಅವರನ್ನು ಔಟ್‌ಸೋರ್ಸಿಂಗ್ ಸಂಸ್ಥೆ ಮೂಲಕ ನೇಮಕ ಮಾಡಲಾಗಿತ್ತು.

ಇವರೆಲ್ಲರೂ ಟ್ರಸ್ಟ್ ಅಧಿಕಾರಿಗಳ ಸಂಬಂಧಿಕರು ಅಥವಾ ಆಪ್ತರಾಗಿದ್ದು, ರತ್ನೇಶ್ ಮತ್ತು ಗಗನದೀಪ್ ಅವರ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಈ ಆರು ಮಂದಿಯ ಜೊತೆಗೆ ಸುಭಾಷ್ ಶ್ರೀವಾಸ್ತವ ಮತ್ತು ಟಿನ್ನು ಯಾದವ್ ಸೇರಿದಂತೆ ಒಟ್ಟು ಎಂಟು ಆರೋಪಿಗಳನ್ನು ಬಂಧಿಸಲಾಗಿದೆ.

ಹೊಸ ಮಾರ್ಗಸೂಚಿ

ಮುಂದಿನ ದಿನಗಳಲ್ಲಿ ದೇಣಿಗೆ ಹಣ ಎಣಿಕೆ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ರಾಮ ಮಂದಿರ ಟ್ರಸ್ಟ್ ಜಾರಿಗೆ ತರಲಿದೆ. ಹೊಸ ಸಿಬ್ಬಂದಿಗೆ ಪೊಲೀಸ್ ಪರಿಶೀಲನೆ, ಹಿನ್ನೆಲೆ ಪರಿಶೀಲನೆ ಹಾಗೂ ಕಾರ್ಯಕ್ಷಮತೆ ಮೌಲ್ಯಮಾಪನ ಕಡ್ಡಾಯಗೊಳಿಸುವ ಬಗ್ಗೆ ಜುಲೈ 11ರಂದು ನಡೆಯಲಿರುವ ಟ್ರಸ್ಟ್ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com