ಪಶ್ಚಿಮ ಬಂಗಾಳದಲ್ಲಿ ಭಾರೀ ದುರಂತ: ಹಲ್ದಿಯಾ ಪೆಟ್ರೋಕೆಮಿಕಲ್ಸ್‌ನಲ್ಲಿ ಭೀಕರ ಅಗ್ನಿ ಅವಘಡ; 20ಕ್ಕೂ ಹೆಚ್ಚು ಮಂದಿಗೆ ಗಾಯ, ಐವರ ಸ್ಥಿತಿ ಗಂಭೀರ..!

ಗಾಯಗೊಂಡವರಲ್ಲಿ ಹಲ್ದಿಯಾ ಪೆಟ್ರೋಕೆಮಿಕಲ್ಸ್‌ನ ಇಬ್ಬರು ಭದ್ರತಾ ಸಿಬ್ಬಂದಿಯೂ ಸೇರಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ.
Dark smoke and flames billow after a massive fire broke out suddenly in naphtha-carrying pipeline at the Haldia Refinery, in Purba Medinipur district, West Bengal
ಬೆಂಕಿ ಹೊತ್ತಿ ಉರಿಯುತ್ತಿರುವುದು.
Updated on

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯ ಹಲ್ದಿಯಾದಲ್ಲಿರುವ ಹಲ್ದಿಯಾ ಪೆಟ್ರೋಕೆಮಿಕಲ್ಸ್ (HPL)ನ ನಾಫ್ತಾ (Naphtha) ಸಾಗಿಸುವ ಪೈಪ್‌ಲೈನ್‌ನಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಮಂಗಳವಾರ ಬೆಳಗಿನ ಜಾವ ಸುಮಾರು 2.45ರಿಂದ 3 ಗಂಟೆಯ ನಡುವೆ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಹಲ್ದಿಯಾ ಪುರಸಭೆಯ ವಾರ್ಡ್‌ 13ರ ಚಿರಂಜಿಬ್‌ಪುರ ಪ್ರದೇಶಕ್ಕೆ ವ್ಯಾಪಿಸಿದೆ. ಬೆಂಕಿಯ ಜ್ವಾಲೆ ಹಲವು ಮನೆಗಳನ್ನು ಆವರಿಸಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಯಿತು.

ಘಟನೆಯ ಮಾಹಿತಿ ಸಿಕ್ಕ ತಕ್ಷಣ 12ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದವು.

ಪೊಲೀಸರ ಪ್ರಕಾರ, ಗಾಯಗೊಂಡವರಲ್ಲಿ ಹಲ್ದಿಯಾ ಪೆಟ್ರೋಕೆಮಿಕಲ್ಸ್‌ನ ಇಬ್ಬರು ಭದ್ರತಾ ಸಿಬ್ಬಂದಿಯೂ ಸೇರಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ.

ಕೆಲವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸುಮಾರು 10 ಮಂದಿಯನ್ನು ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆ, ಎನ್‌ಆರ್‌ಎಸ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಘಟನಾ ಸ್ಥಳವನ್ನು ಭದ್ರತಾ ವಲಯವಾಗಿ ಘೋಷಿಸಲಾಗಿದ್ದು, ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ತರುವ ಕಾರ್ಯ ಮುಂದುವರಿದಿದೆ. ಅವಘಡಕ್ಕೆ ನಿಖರ ಕಾರಣ ತನಿಖೆ ಬಳಿಕವೇ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Dark smoke and flames billow after a massive fire broke out suddenly in naphtha-carrying pipeline at the Haldia Refinery, in Purba Medinipur district, West Bengal
ಉತ್ತರಪ್ರದೇಶ: ಲಖನೌ ಕೋಚಿಂಗ್ ಸೆಂಟರ್ ಅಗ್ನಿ ಅವಘಡ; ವಿದ್ಯಾರ್ಥಿಗಳ ಸಾವಿನ ಸಂಖ್ಯೆ 15ಕ್ಕೆ ಏರಿಕೆ, 5 ಮಂದಿಗೆ ಗಂಭೀರ ಗಾಯ!

ಈ ಸ್ಫೋಟದಿಂದ ಸಮೀಪದ ರೈಲ್ವೆಯ ಮೇಲ್ದರ್ಜೆಯ ವಿದ್ಯುತ್ ತಂತಿಗಳು ಮತ್ತು ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದ್ದು, ಹಲ್ದಿಯಾ-ಪಾಂಸ್ಕುರಾ ಹಾಗೂ ಹಲ್ದಿಯಾ-ಹೌರಾ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಸ್ಥಳೀಯರ ಪ್ರಕಾರ, ನಾಫ್ತಾ ಸಾಗಿಸುತ್ತಿದ್ದ ಪೈಪ್‌ಲೈನ್‌ನಲ್ಲಿ ಭಾರೀ ಸ್ಫೋಟ ಸಂಭವಿಸಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಇದ್ದಾರೆ.

ಈ ನಡುವೆ ಸ್ಥಳೀಯ ಶಾಸಕ ಪ್ರದೀಪ್ ಬಿಜ್ಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, "ನಾಫ್ತಾ ಪೈಪ್‌ಲೈನ್‌ನಲ್ಲಿ ಸೋರಿಕೆಯಾಗಿದ್ದರಿಂದ ಭಾರೀ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ ಎಂದ ಹೇಳಿದ್ದಾರೆ.

ಹಲ್ದಿಯಾ ಪೆಟ್ರೋಕೆಮಿಕಲ್ಸ್ ಸಂಸ್ಥೆಯು ಘಟನೆ ಕುರಿತು ತನಿಖೆಗೆ ಆದೇಶಿಸಿದ್ದು, ಮೊದಲ ಆದ್ಯತೆ ಸಿಬ್ಬಂದಿ ಹಾಗೂ ಸ್ಥಳೀಯರ ಸುರಕ್ಷತೆಯಾಗಿದೆ ಎಂದು ತಿಳಿಸಿದೆ.

ಕಂಪನಿಯ ಘಟಕದ ಸಮೀಪ ನಾಫ್ತಾವನ್ನು ಅನಧಿಕೃತವಾಗಿ ಕದಿಯಲು ಮಾಡಲಾಗಿದ್ದ ಸ್ಥಳದ ಬಳಿ ಈ ಅವಘಡ ಸಂಭವಿಸಿರಬಹುದು ಎಂಬ ಅನುಮಾನವಿದೆ ಎಂದು ಕಂಪನಿ ತಿಳಿಸಿದೆ.

ನಾಫ್ತಾ ಅತ್ಯಂತ ಸುಲಭವಾಗಿ ಹೊತ್ತಿ ಉರಿಯುವ ದಹನಶೀಲ ಹೈಡ್ರೋಕಾರ್ಬನ್ ಆಗಿದ್ದು, ಪೆಟ್ರೋಲಿಯಂ ಉತ್ಪನ್ನಗಳನ್ನು ಅನಧಿಕೃತವಾಗಿ ಮುಟ್ಟುವುದು ಅಥವಾ ಕದಿಯುವುದು ಅಪಾಯಕಾರಿ ಎಂದು ಸ್ಥಳೀಯರಿಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು ಎಂದು ಹೇಳಿದೆ .

ಇದೇ ವೇಳೆ ತನಿಖೆ ಪೂರ್ಣಗೊಳ್ಳುವ ಮುನ್ನ ಯಾರ ಮೇಲೂ ಹೊಣೆಗಾರಿಕೆ ಹೊರಿಸುವುದು ಅಥವಾ ಯಾವುದೇ ಅಂತಿಮ ಅಭಿಪ್ರಾಯ ವ್ಯಕ್ತಪಡಿಸುವುದು ಸೂಕ್ತವಲ್ಲ. ತನಿಖಾ ಸಂಸ್ಥೆಗಳೊಂದಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಹಲ್ದಿಯಾ ಪೆಟ್ರೋಕೆಮಿಕಲ್ಸ್ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com