

ನವದೆಹಲಿ: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಓಮಿಡ್ ಆಸ್ಪತ್ರೆಯ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯನ್ನು ಭಾರತ ಮಂಗಳವಾರ ಖಂಡಿಸಿದೆ. ಈ ದಾಳಿಯಲ್ಲಿ ಕನಿಷ್ಠ 400 ಜನ ಸಾವನ್ನಪ್ಪಿದ್ದು, ಹಲವಾರು ಜನ ಗಾಯಗೊಂಡಿದ್ದಾರೆ.
ಈ ದಾಳಿಯನ್ನು "ಅನಾಗರಿಕ" ಮತ್ತು "ಹೇಡಿತನದ ಕೃತ್ಯ" ಎಂದು ಕರೆದ ವಿದೇಶಾಂಗ ಸಚಿವಾಲಯ(MEA), ಪಾಕಿಸ್ತಾನವು "ಹತ್ಯಾಕಾಂಡವನ್ನು ಮಿಲಿಟರಿ ಕಾರ್ಯಾಚರಣೆಯಾಗಿ ಬಿಂಬಿಸಲು ಪ್ರಯತ್ನಿಸುತ್ತಿದೆ" ಎಂದು ಹೇಳಿದೆ.
"ಇದು ಹೇಡಿತನದ ಕೃತ್ಯವಾಗಿದ್ದು, ಅಸಹ್ಯಕರ ಹಿಂಸಾಚಾರವಾಗಿದೆ. ಇದನ್ನು ಮಿಲಿಟರಿ ಟಾರ್ಗೆಟ್ ಎಂದು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಇದು ಹೆಚ್ಚಿನ ಸಂಖ್ಯೆಯ ನಾಗರಿಕರ ಜೀವಗಳನ್ನು ಬಲಿ ತೆಗೆದುಕೊಂಡಿದೆ" ಎಂದು MEA ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದೆ.
ಆಸ್ಪತ್ರೆಯ ಮೇಲಿನ ದಾಳಿಯು ಪಾಕಿಸ್ತಾನದ ಘೋರ ಆಕ್ರಮಣಕಾರಿ ಕೃತ್ಯ. ಅಫ್ಘಾನಿಸ್ತಾನದ ಸಾರ್ವಭೌಮತ್ವದ ಮೇಲಿನ ದಾಳಿ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆ ಎಂದು ವಿದೇಶಾಂಗ ಸಚಿವಾಲಯ ಆಕ್ರೋಶ ಹೊರಹಾಕಿದೆ.
ಪ್ರಪಂಚದಾದ್ಯಂತ ಮುಸ್ಲಿಂ ಸಮುದಾಯಗಳಲ್ಲಿ ಶಾಂತಿ, ಆತ್ಮಾವಲೋಕನ ಮತ್ತು ಕರುಣೆಯ ಸಂದರ್ಭವಾದ ಪವಿತ್ರ ರಂಜಾನ್ ತಿಂಗಳಲ್ಲಿ ಈ ದಾಳಿ ನಡೆದಿರುವುದು ಖಂಡನೀಯ. ಆಸ್ಪತ್ರೆ ಮತ್ತು ಅದರ ರೋಗಿಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಳ್ಳುವುದನ್ನು ಸಮರ್ಥಿಸುವ ನೈತಿಕತೆ ಅವರಿಗಿಲ್ಲ ಎಂದು ಭಾರತ ಹೇಳಿದೆ.
ಭಾರತವು ಮೃತರ ಕುಟುಂಬಗಳಿಗೆ ತನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ.
ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ 2,000 ಹಾಸಿಗೆ ಸೌಲಭ್ಯವಿರುವ ದೊಡ್ಡ ಆಸ್ಪತ್ರೆಯ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದ್ದು, ದಾಳಿಯಲ್ಲಿ 400 ಮಂದಿ ಸಾವಿಗೀಡಾಗಿದ್ದು, 250 ಜನರು ಗಾಯಗೊಂಡಿದ್ದಾರೆ.
Advertisement