

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬಹ್ರೇನ್‌ನ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರೊಂದಿಗೆ ಮಾತನಾಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿನ ಸದ್ಯದ ಪರಿಸ್ಥಿತಿ ಕುರಿತು ಅವರೊಂದಿಗೆ ಚರ್ಚಿಸಿದ್ದು, ಇಂಧನ ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ.
ಬಹ್ರೇನ್ ರಾಜನ ಜೊತೆಗೆ ದೂರವಾಣಿ ಮಾತುಕತೆ ಸಂದರ್ಭದಲ್ಲಿ ಮುಕ್ತ ಹಾಗೂ ಸುರಕ್ಷಿತ ಹಡಗು ಮಾರ್ಗಗಳ ಖಾತ್ರಿಯ ಪ್ರಾಮುಖ್ಯತೆಯನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ, "ಬಹ್ರೇನ್ ರಾಜ, ಹಮದ್ ಬಿನ್ ಇಸಾ ಅಲ್ ಖಲೀಫಾ ಅವರೊಂದಿಗಿನ ಚರ್ಚೆ ಫಲಪ್ರದವಾಗಿದೆ. ಅವರಿಗೆ ಮತ್ತು ಬಹ್ರೇನ್ ಜನರಿಗೆ ಈದ್ ಅಲ್-ಫಿತರ್ ಹಬ್ಬದ ಶುಭಾಶಯ ಕೋರಿದ್ದೇನೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಏಷ್ಯಾ ಪ್ರದೇಶದ ಪ್ರಸ್ತುತ ಪರಿಸ್ಥಿತಿಯನ್ನು ಚರ್ಚಿಸಿದ್ದೇವೆ. ಈ ಪ್ರದೇಶದಲ್ಲಿನ ಇಂಧನ ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಖಂಡಿಸಿದ್ದೇವೆ. ಜಾಗತಿಕ ಆಹಾರ, ಇಂಧನ ಮತ್ತು ರಸಗೊಬ್ಬರ ಸುರಕ್ಷತೆಯ ಮೇಲೆ ಅವುಗಳ ಪ್ರತಿಕೂಲ ಪರಿಣಾಮ ಕುರಿತು ಪ್ರಮುಖವಾಗಿ ಚರ್ಚಿಸಿರುವುದಾಗಿ ತಿಳಿಸಿದ್ದಾರೆ.
ಬಹ್ರೇನ್‌ನಲ್ಲಿರುವ ಭಾರತೀಯ ಸಮುದಾಯದ ಯೋಗಕ್ಷೇಮಕ್ಕಾಗಿ ರಾಜ, ಹಮದ್ ಬಿನ್ ಇಸಾ ಅಲ್ ಖಲೀಫಾ ಅವರ ನಿರಂತರ ಬೆಂಬಲಕ್ಕಾಗಿ ಧನ್ಯವಾದವನ್ನು ಪ್ರಧಾನಿ ಮೋದಿ ಸಲ್ಲಿಸಿದ್ದಾರೆ.
Advertisement