ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳ ಪ್ರಮಾಣ ಶೇ.8.5: NCRB ವರದಿ

ಮೇ 7ರಂದು ಪ್ರಕಟವಾದ “The Accident Deaths and Suicides 2024” ವರದಿ ಪ್ರಕಾರ, ದೇಶದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ 14,488 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Representational image
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)ಯ ಇತ್ತೀಚಿನ ವರದಿ ವಿದ್ಯಾರ್ಥಿ ಸಮುದಾಯದ ಮಾನಸಿಕ ಸ್ಥಿತಿಯ ಬಗ್ಗೆ ಆತಂಕಕಾರಿ ಚಿತ್ರಣವನ್ನು ಬಿಚ್ಚಿಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ದೇಶದಲ್ಲಿ ವರದಿಯಾದ ಒಟ್ಟು ಆತ್ಮಹತ್ಯೆಗಳ ಪೈಕಿ 8.48 ಶೇಕಡಾ ಪ್ರಕರಣಗಳು ವಿದ್ಯಾರ್ಥಿಗಳದ್ದಾಗಿವೆ. ಕಳೆದ ದಶಕದಲ್ಲಿ ಇದು ಸ್ಪಷ್ಟ ಏರಿಕೆಯನ್ನು ತೋರಿಸಿದೆ.

ಮೇ 7ರಂದು ಪ್ರಕಟವಾದ “The Accident Deaths and Suicides 2024” ವರದಿ ಪ್ರಕಾರ, ದೇಶದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ 14,488 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶಾದ್ಯಂತ ದಾಖಲಾಗಿರುವ 1,70,746 ಆತ್ಮಹತ್ಯೆಗಳಲ್ಲಿ ವಿದ್ಯಾರ್ಥಿಗಳ ಪ್ರಮಾಣ ಹೆಚ್ಚಾಗಿದೆ.

2014ರ ಅಂಕಿ-ಅಂಶಗಳೊಂದಿಗೆ ಹೋಲಿಸಿದರೆ, ಆ ವರ್ಷ ವಿದ್ಯಾರ್ಥಿಗಳ ಆತ್ಮಹತ್ಯೆ ಸಂಖ್ಯೆ 8,068 ಆಗಿದ್ದು, ಅದು ದೇಶದ ಒಟ್ಟು ಆತ್ಮಹತ್ಯೆಗಳ 6.1 ಶೇಕಡಾಗಿತ್ತು. ಕಳೆದ ಕೆಲವು ವರ್ಷಗಳ ಅಂಕಿ-ಅಂಶಗಳು ಪ್ರತಿ ವರ್ಷ ಸರಾಸರಿ ಕನಿಷ್ಠ 13,000 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ತೋರಿಸುತ್ತವೆ. 2021ರಲ್ಲಿ ಈ ಸಂಖ್ಯೆ 13,089 ಆಗಿದ್ದರೆ, 2022ರಲ್ಲಿ 13,044 ಹಾಗೂ 2023ರಲ್ಲಿ 13,892 ಆಗಿತ್ತು.

ಈ ವಾರ ಬಿಡುಗಡೆಯಾದ ವರದಿಯಲ್ಲಿ ರಾಜ್ಯವಾರು ವಿವರಗಳು ಲಭ್ಯವಾಗದಿದ್ದರೂ, ಶಾಲೆಗಳಲ್ಲಿ ವೃತ್ತಿಪರ ಸಮಾಲೋಚನಾ ವಿಭಾಗಗಳನ್ನು ಸ್ಥಾಪಿಸಲು ಸಹಾಯ ಮಾಡುವ ಲಾಭರಹಿತ ಸಂಸ್ಥೆಯಾದ The IC3 Institute 2024ರ ಆಗಸ್ಟ್‌ನಲ್ಲಿ ಪ್ರಕಟಿಸಿದ “The Student Suicides: An Epidemic Sweeping India” ವರದಿ ಪ್ರಕಾರ, ಮಹಾರಾಷ್ಟ್ರ, ತಮಿಳು ನಾಡು ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ ವಿದ್ಯಾರ್ಥಿ ಆತ್ಮಹತ್ಯೆಗಳ ಸಂಖ್ಯೆ ಅತ್ಯಧಿಕವಾಗಿದೆ. ಈ ಮೂರು ರಾಜ್ಯಗಳು ಸೇರಿ ದೇಶದ ಒಟ್ಟು ವಿದ್ಯಾರ್ಥಿ ಆತ್ಮಹತ್ಯೆಗಳ ಮೂರನೇ ಭಾಗವನ್ನು ಹೊಂದಿವೆ.

ಹಿಂದಿನ ಅಂಕಿ-ಅಂಶಗಳ ಪ್ರಕಾರ, ದಕ್ಷಿಣ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಟ್ಟು ಆತ್ಮಹತ್ಯೆಗಳಲ್ಲಿ ಮೂರನೇ ಭಾಗದಷ್ಟು ಪಾಲು ಹೊಂದಿವೆ.

ಉನ್ನತ ಶಿಕ್ಷಣ ನೀತಿ ಸಂಶೋಧನಾ ಕೇಂದ್ರದ ಮಾಜಿ ನಿರ್ದೇಶಕರಾದ ಎನ್ ವಿ ವರ್ಗೀಸ್, ವಿದ್ಯಾರ್ಥಿ ಆತ್ಮಹತ್ಯೆಗಳಿಗೆ ಮೂರು ಪ್ರಮುಖ ಕಾರಣಗಳಿವೆ ಎಂದು ತಿಳಿಸಿದ್ದಾರೆ. “ಕೆಲವರು ವಿದ್ಯಾರ್ಥಿಗಳು ನೀಟ್ ಅಥವಾ ಜೆಇಇ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ತಮ್ಮಲ್ಲಿ ಸಾಮರ್ಥ್ಯವಿಲ್ಲ ಎಂದು ಭಾವಿಸುತ್ತಾರೆ. ಪೋಷಕರು ಒತ್ತಡ ಹೇರುವುದರಿಂದ ಅವರು ಭಾರೀ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಇದರಿಂದ ಅವರು ಆತ್ಮಹತ್ಯೆಯಂತಹ ತೀವ್ರ ನಿರ್ಧಾರಕ್ಕೆ ತಲುಪುತ್ತಾರೆ. ಕೋಚಿಂಗ್ ಕೇಂದ್ರಗಳಿಗಾಗಿ ಪ್ರಸಿದ್ಧವಾಗಿರುವ ಕೋಟಾದಲ್ಲಿ ಮತ್ತೆ ಮತ್ತೆ ಸಂಭವಿಸುವ ಆತ್ಮಹತ್ಯೆಗಳು ಇದಕ್ಕೆ ಉದಾಹರಣೆ ಎಂದು ಹೇಳಿದರು.

ಇದಲ್ಲದೆ, ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಇತರರಿಂದ ಎದುರಾಗುವ ಅವಮಾನ ಮತ್ತು ಭೇದಭಾವವೂ ಭಾರೀ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಿದರು. ಇತ್ತೀಚೆಗೆ ಕೇರಳದಲ್ಲಿ ನಡೆದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದಲ್ಲಿ, ಆಡಳಿತದಿಂದ ವಿದ್ಯಾರ್ಥಿಗೆ ಭಾರೀ ಅವಮಾನ ಮಾಡಲಾಗಿತ್ತು ಎಂದು ಹೇಳಿದರು.

ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ವಿದ್ಯಾರ್ಥಿಗಳ ಜೀವನಶೈಲಿಗೆ ತಕ್ಕಂತೆ ಬದುಕಬೇಕೆಂಬ ಸಹಪಾಠಿಗಳ ಒತ್ತಡವೂ ಮತ್ತೊಂದು ಪ್ರಮುಖ ಕಾರಣವಾಗಿದೆ ಎಂದು ವರ್ಗೀಸ್ ಹೇಳುತ್ತಾರೆ. ವಿದ್ಯಾರ್ಥಿ ಆತ್ಮಹತ್ಯೆ ತಡೆಯಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಆತ್ಮಹತ್ಯೆಗಳ ಏರಿಕೆ ಮುಂದುವರಿದಿದೆ.

ಸರ್ವೋಚ್ಚ ನ್ಯಾಯಾಲಯ ನೇಮಿಸಿದ್ದ ರಾಷ್ಟ್ರೀಯ ಪರೀಕ್ಷಾ ಕಾರ್ಯಪಡೆ 2025ರ ಆಗಸ್ಟ್‌ನಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ವಿಶೇಷ ಪೋರ್ಟಲ್ ಆರಂಭಿಸಿತ್ತು. 2022ರಲ್ಲಿ ರಾಷ್ಟ್ರೀಯ ಆತ್ಮಹತ್ಯೆ ತಡೆ ತಂತ್ರವನ್ನು ಜಾರಿಗೆ ತಂದು ದೇಶದಲ್ಲಿ ಆತ್ಮಹತ್ಯೆ ಪ್ರಮಾಣವನ್ನು 10 ಶೇಕಡಾ ಕಡಿಮೆ ಮಾಡುವ ಗುರಿ ಇಡಲಾಗಿತ್ತು.

ಕೇಂದ್ರ ಶಿಕ್ಷಣ ಸಚಿವಾಲಯ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಉತ್ತೇಜಿಸಲು ಮನೋದರ್ಪಣ ಮತ್ತು ಟೆಲಿ-ಮಾನಸ್ ಯೋಜನೆಯಡಿ 14416 ಉಚಿತ ಸಹಾಯವಾಣಿ ಆರಂಭಿಸಿದೆ. 2014ರ ರಾಷ್ಟ್ರೀಯ ಮಾನಸಿಕ ಆರೋಗ್ಯ ನೀತಿ ಹಾಗೂ 2017ರ ಮಾನಸಿಕ ಆರೋಗ್ಯ ಕಾಯ್ದೆಗಳು ಪ್ರಮುಖ ಕಾನೂನು ಕ್ರಮಗಳಾಗಿವೆ.

ಇತ್ತೀಚಿನ ತಿಂಗಳುಗಳಲ್ಲಿ ಇಂಡಿಯನ್ ಇನ್ಸ್ಟ್ಟೂಟ್ ಆಫ್ ಟೆಕ್ನಾಲಜಿಗಳಲ್ಲಿ ನಡೆದ ಆತ್ಮಹತ್ಯೆಗಳ ಸರಣಿಯ ಬಳಿಕ, ಕಾರಣಗಳನ್ನು ಪತ್ತೆಹಚ್ಚಿ ಇಂತಹ ಘಟನೆಗಳನ್ನು ತಡೆಯಲು ವಿಶೇಷ ಸಮಿತಿಯನ್ನೂ ರಚಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com