

ಚೆನ್ನೈ: ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಂಡ ಹೀನಾಯ ಸೋಲು ಇದೀಗ ಎಐಎಡಿಎಂಕೆಯಲ್ಲಿ ಆಂತರಿಕ ಬಿರುಕಿಗೆ ಕಾರಣವಾಗಿದೆ. ತಮಿಳುನಾಡಿನಲ್ಲಿ ಆಡಳಿತಾರೂಢ ಟಿವಿಕೆಗೆ ಬೆಂಬಲ ನೀಡುವ ಬಗ್ಗೆ ಶಾಸಕರು ಭಿನ್ನಾಭಿಪ್ರಾಯ ಹೊಂದಿದ್ದು, ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ವಿರುದ್ಧ ಬಂಡಾಯದ ಲಕ್ಷಣಗಳು ಸಹ ಗೋಚರಿಸುತ್ತಿವೆ.
ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಲ್ಲಿ 167 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ, ಪಕ್ಷವು ಕೇವಲ 47 ಸ್ಥಾನಗಳನ್ನು ಪಡೆಯುವಲ್ಲಿ ಸಾಧ್ಯವಾಯಿತು.
ಚುನಾವಣಾ ಫಲಿತಾಂಶಗಳ ಹಿನ್ನೆಲೆಯಲ್ಲಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಶಾಸಕರ ಸರಣಿ ಸಭೆಗಳು ನಡೆದವು.
ಎಐಎಡಿಎಂಕೆ ಮೂಲಗಳ ಪ್ರಕಾರ, ಪಕ್ಷದ ಒಂದು ವರ್ಗ ಸರ್ಕಾರ ರಚನೆಯಲ್ಲಿ ಟಿವಿಕೆಗೆ ಬೆಂಬಲ ನೀಡುವುದನ್ನು ಬಲವಾಗಿ ವಿರೋಧಿಸಿದರೆ, ಇನ್ನೊಂದು ಬಣ ವಿಜಯ್ ನೇತೃತ್ವದ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡಬೇಕೆಂದು ಪ್ರತಿಪಾದಿಸಿದೆ. ಪಕ್ಷದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಎಡಪ್ಪಾಡಿ ಕೆ ಪಳನಿಸ್ವಾಮಿ ರಾಜೀನಾಮೆ ನೀಡಬೇಕೆಂದು ಕೆಲವು ಶಾಸಕರು ಒತ್ತಾಯಿಸಿದ್ದಾರೆ.
ಸಿವಿ ಷಣ್ಮುಗಂ ಮತ್ತು ಎಸ್‌ಪಿ ವೇಲುಮಣಿ ಸೇರಿದಂತೆ ಹಲವಾರು ಹಿರಿಯ ನಾಯಕರು ಮತ್ತು ಮಾಜಿ ಸಚಿವರು ತಮ್ಮ ಬೆಂಬಲಿಗ ಶಾಸಕರೊಂದಿಗೆ ಪಳನಿಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಗೈರಾಗಿದ್ದರು. ಷಣ್ಮುಗಂ, ವೇಲುಮಣಿ ಮತ್ತು ಅವರ ಬೆಂಬಲಿಗರು ಟಿವಿಕೆಯನ್ನು ಬೆಂಬಲಿಸಲು ಆಸಕ್ತಿ ತೋರಿಸಿದ್ದಾರೆ ಎಂದು ಪಕ್ಷದೊಳಗಿನವರು ತಿಳಿಸಿದ್ದಾರೆ.
'ಪಕ್ಷದೊಳಗೆ ಸ್ಪಷ್ಟವಾದ ಒಡಕು ಇದೆ. ಅನೇಕ ಶಾಸಕರು ನಾಯಕತ್ವ ಬದಲಾವಣೆಯನ್ನು ಬಯಸುತ್ತಾರೆ. ಪಳನಿಸ್ವಾಮಿ ನಾಯಕರಾಗಿ ಮುಂದುವರಿದರೆ, ಕೆಲವು ಶಾಸಕರು ಟಿವಿಕೆಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಪಕ್ಷದ ಉನ್ನತ ಹುದ್ದೆಯಿಂದ ಪಳನಿಸ್ವಾಮಿ 'ಸ್ವಯಂಪ್ರೇರಣೆಯಿಂದ ಕೆಳಗಿಳಿಯಬೇಕು'. ಇದರಿಂದ ಪಕ್ಷ ಮತ್ತೆ ಒಂದಾಗಲು ಮತ್ತು ಮುಂದಿನ ಚುನಾವಣೆಯನ್ನು ಎದುರಿಸಲು ಸಾಧ್ಯವಾಗುತ್ತದೆ' ಎಂದು ಎಐಎಡಿಎಂಕೆ ಮಾಜಿ ನಾಯಕ ಕೆಸಿ ಪಳನಿಸ್ವಾಮಿ ಹೇಳಿದ್ದಾರೆ.
ಎಐಎಡಿಎಂಕೆ ನಾಯಕರ ನಡುವಿನ ತಪ್ಪುಗ್ರಹಿಕೆಯನ್ನು ಮಾತುಕತೆ ಮತ್ತು ಒಗ್ಗಟ್ಟಿನ ಮೂಲಕ ಪರಿಹರಿಸಿಕೊಳ್ಳಬೇಕು. ಎಐಎಡಿಎಂಕೆ ಶಾಸಕರು ವಿಧಾನಸಭೆಯಲ್ಲಿ ಒಟ್ಟಿಗೆ ಕುಳಿತಿದ್ದರಿಂದ ಪಕ್ಷವು ಇಲ್ಲಿಯವರೆಗೆ ಒಗ್ಗಟ್ಟಾಗಿದೆ ಎಂದು ನಾನು ಭಾವಿಸುತ್ತೇನೆ. ಎಐಎಡಿಎಂಕೆಯ ಹಿರಿಯ ನಾಯಕರು ಪಕ್ಷದಲ್ಲಿ ಯಾವುದೇ ವಿಭಜನೆಯಾಗದಂತೆ ನೋಡಿಕೊಳ್ಳಬೇಕು ಎಂದು ರಾಜಕೀಯ ವಿಶ್ಲೇಷಕ ಸತ್ಯಾಲಯ ರಾಮಕೃಷ್ಣನ್ ಹೇಳಿದರು.
Advertisement