

ಚೆನ್ನೈ: ದಳಪತಿ ವಿಜಯ್ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೇವಲ ಎರಡು ದಿನಗಳಲ್ಲೇ ತಮಿಳು ಚಲನಚಿತ್ರೋದ್ಯಮದ ಗಮನ ಸೆಳೆಯುವಂತಹ ಮಹತ್ವ ನಿರ್ಧಾರ ತೆಗೆದುಕೊಂಡಿದ್ದಾರೆ.
ನಟಿ ತ್ರಿಶಾ ಮತ್ತು ಸೂರ್ಯ ಅಭಿನಯದ `ಕರುಪ್ಪ್' ಚಿತ್ರದ ನಿರ್ಮಾಪಕರ ಬೆಂಬಲಕ್ಕೆ ಧಾವಿಸಿದ ಸಿಎಂ ವಿಜಯ್ ಅವರು, ಬೆಳಗ್ಗೆ 9 ಗಂಟೆಯ ಫಸ್ಟ್ ಶೋಗೆ ವಿಶೇಷ ಅನುಮತಿ ನೀಡಿದ್ದಾರೆ.
ಆರ್ ಜೆ ಬಾಲಾಜಿ ನಿರ್ದೇಶನದ ಆಕ್ಷನ್ ಸಿನಿಮಾ ಕರುಪ್ಪ್ ಮೇ 14 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ವಿಜಯ್ ಅವರ ಈ ನಡೆ ತಮಿಳು ಚಲನಚಿತ್ರೋದ್ಯಮದ ಗಮನ ಸೆಳೆದಿದೆ. ಕರುಪ್ಪ್ ಸಿನಿಮಾಗೆ ಸಿಎಂ ವಿಜಯ್ ಅವರು ದಿನಕ್ಕೆ 5 ಶೋಗಳಿಗೆ ಅನುಮತಿ ನೀಡಿದ್ದಾರೆ. ಜೊತೆಗೆ ಶೋ ಸಮಯದಲ್ಲಿ ಚಿತ್ರಮಂದಿರದ ಮಾಲೀಕರು ಜನದಟ್ಟಣೆಯನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ವಿಶೇಷ ಅನುಮತಿ ನೀಡಿದ್ದಕ್ಕೆ ಕರುಪ್ಪ್ ಸಿನಿಮಾ ನಿರ್ಮಾಪಕರು ಸಿಎಂ ವಿಜಯ್ ಅವರಿಗೆ ಧನ್ಯವಾದ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಬೆಳಗ್ಗೆ 9 ಗಂಟೆಗಿಂತ ಮುಂಚೆ ಥಿಯೇಟರ್‌ಗಳಲ್ಲಿ ಸಿನಿಮಾ ಶೋಗೆ ಅವಕಾಶವಿಲ್ಲ. ಸಿನಿಮಾ ರಿಲೀಸ್ ಆದ ಮೊದಲ ದಿನ ಫಸ್ಟ್ ಶೋ ವೇಳೆ ಅಭಿಮಾನಿಗಳ ಅತಿರೇಕದ ವರ್ತನೆ, ಟ್ರಾಫಿಕ್ ಸಮಸ್ಯೆ, ಅನಾಹುತಗಳನ್ನು ತಪ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ. ಸಾಮಾನ್ಯವಾಗಿ ಬೆಳಿಗ್ಗೆ 11 ಅಥವಾ 12 ಗಂಟೆಗೆ ಮೊದಲ ಶೋ ಆರಂಭವಾಗುತ್ತದೆ. ಒಂದು ವೇಳೆ ಅದಕ್ಕೂ ಮುಂಚೆ ಶೋ ನಿಗದಿಪಡಿಸಬೇಕೆಂದರೆ ಸರ್ಕಾರದಿಂದ ಅನುಮತಿ ಪಡೆಯಬೇಕು.
Advertisement