

ನವದೆಹಲಿ: ಕೆಲವು ನಿರುದ್ಯೋಗಿ ಯುವಕರು “ಜಿರಳೆಗಳಂತೆ” ಹೆಚ್ಚುತ್ತಾ ನಂತರ ಮಾಧ್ಯಮ, ಸಾಮಾಜಿಕ ಮಾಧ್ಯಮ ಮತ್ತು ಆರ್‌ಟಿಐ ಕಾರ್ಯಕರ್ತರಾಗಿ ವ್ಯವಸ್ಥೆಯ ಮೇಲೆ ದಾಳಿ ಮಾಡಲು ಆರಂಭಿಸುತ್ತಾರೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ.
ಶುಕ್ರವಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲರ ಹುದ್ದೆ ಪಡೆಯಲು ಪ್ರಯತ್ನಿಸುತ್ತಿದ್ದ ಒಬ್ಬ ವಕೀಲರನ್ನು ತರಾಟೆಗೆ ತೆಗೆದುಕೊಳ್ಳುವ ವೇಳೆ ಸಿಜೆಐ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ ಈ ಹೇಳಿಕೆ ನೀಡಿದ್ದು, 'ಸಮರ್ಪಕ ಆಧಾರವಿಲ್ಲದೆ ಹಿರಿಯ ಅಧಿಕಾರಿಗಳು ಮತ್ತು ಸಂಸ್ಥೆಗಳ ವಿರುದ್ಧ ನಿರಂತರವಾಗಿ ಆರೋಪ ಮಾಡುವುದು ನ್ಯಾಯ ವ್ಯವಸ್ಥೆ ಮತ್ತು ಆಡಳಿತಾತ್ಮಕ ವ್ಯವಸ್ಥೆಯ ಮೇಲೆ ಅನಗತ್ಯ ಒತ್ತಡ ಉಂಟುಮಾಡುತ್ತದೆ ಎಂದು ಹೇಳಿದೆ.
ಪೀಠವು ಒಬ್ಬ ವಕೀಲರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ, 'ಸಮಾಜದಲ್ಲಿ ಈಗಾಗಲೇ “ಪರೋಪಜೀವಿಗಳು” ಇದ್ದು, ಉದ್ಯೋಗ ಸಿಗದ ಅಥವಾ ವೃತ್ತಿಯಲ್ಲಿ ಸ್ಥಾನ ಪಡೆಯದ ಕೆಲ ಯುವಕರು ಜಿರಳೆಗಳಂತೆ ಇರುತ್ತಾರೆ. ಅವರಲ್ಲಿ ಕೆಲವರು ಮಾಧ್ಯಮವಾಗುತ್ತಾರೆ, ಕೆಲವರು ಸಾಮಾಜಿಕ ಜಾಲತಾಣ ಕಾರ್ಯಕರ್ತರಾಗುತ್ತಾರೆ, ಆರ್‌ಟಿಐ ಕಾರ್ಯಕರ್ತರಾಗುತ್ತಾರೆ ಮತ್ತು ನಂತರ ಎಲ್ಲರ ಮೇಲೂ ದಾಳಿ ಪ್ರಾರಂಭಿಸುತ್ತಾರೆ. ನೀವು ಕೂಡ ಅವರ ಜೊತೆ ಕೈಜೋಡಿಸಲು ಬಯಸುತ್ತೀರಾ?” ಎಂದು ಪೀಠ ಅರ್ಜಿದಾರ ವಕೀಲರನ್ನು ಪ್ರಶ್ನಿಸಿತು.
'ಜಗತ್ತೇ ಹಿರಿಯ ವಕೀಲರಾಗಲು ಅರ್ಹವಾಗಿರಬಹುದು. ಆದರೆ ಕನಿಷ್ಠ ನೀವು ಅದಕ್ಕೆ ಅರ್ಹರಲ್ಲ' ಎಂದು ಹೇಳಿದ ಪೀಠ, 'ಅರ್ಜಿದಾರರ ವೃತ್ತಿಪರ ನಡೆ ಕುರಿತು ಅಸಮಾಧಾನ ವ್ಯಕ್ತಪಡಿಸಿ ದೆಹಲಿ ಹೈಕೋರ್ಟ್ ನಿಮಗೆ ಹಿರಿಯ ವಕೀಲರ ಹುದ್ದೆ ನೀಡಿದರೂ, ಸುಪ್ರೀಂ ಕೋರ್ಟ್ ಅದನ್ನು ರದ್ದುಪಡಿಸಬಹುದು' ಎಂದು ಎಚ್ಚರಿಸಿತು.
ಯಾವುದೇ ಕೇಸ್ ಗಳಿಲ್ಲವೇ?
ಅರ್ಜಿದಾರ ಫೇಸ್‌ಬುಕ್‌ನಲ್ಲಿ ಬಳಸಿದ್ದ ಭಾಷೆಯನ್ನೂ ಸಿಜೆಐ ಉಲ್ಲೇಖಿಸಿದ ಪೀಠ, 'ನಿಮಗೆ ಬೇರೆ ಯಾವುದೇ ಪ್ರಕರಣಗಳಿಲ್ಲವೇ? ಹಿರಿಯ ವಕೀಲರ ಹುದ್ದೆ ಬಯಸುವ ವ್ಯಕ್ತಿಯ ನಡೆ ಇದೇನಾ? ಹಿರಿಯ ವಕೀಲರ ಹುದ್ದೆ ಎಂದರೆ ಪ್ರದಾನವಾಗುವ ಗೌರವವಾಗಿದ್ದು, ಅದನ್ನು ಬೆನ್ನಟ್ಟುವಂತಹದ್ದಲ್ಲ. ನೀವು ಅದನ್ನು ಬೆನ್ನಟ್ಟುತ್ತಿದ್ದೀರಿ. ಇದು ಸರಿಯಾದ ರೀತಿಯಂತೆ ಕಾಣುತ್ತದೆಯೇ? ಹಿರಿಯ ವಕೀಲರ ಹುದ್ದೆ ಕೇವಲ ಅಲಂಕಾರಿಕ ಸ್ಥಾನಮಾನವೇ ಎಂದು ಪೀಠ ಪ್ರಶ್ನಿಸಿತು.
ಪದವಿಗಳ ಬಗ್ಗೆಯೇ ಅನುಮಾನವಿದೆ
ಕಪ್ಪು ಕೋಟ್ ಧರಿಸಿ ವಕಾಲತ್ತು ನಡೆಸುತ್ತಿರುವ ಅನೇಕ ಮಂದಿಯ ಪದವಿಗಳ ನೈಜತೆಯ ಬಗ್ಗೆ ಗಂಭೀರ ಅನುಮಾನಗಳಿವೆ. ಅವರ ಪದವಿಗಳನ್ನು ಪರಿಶೀಲಿಸಲು ಸಿಬಿಐ (Central Bureau of Investigation) ತನಿಖೆ ನಡೆಸಬೇಕೆಂದು ನಾವು ಕೇಳಲು ಬಯಸುತ್ತೇವೆ. ಈ ವಿಷಯದಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ (Bar Council of India) ಯಾವುದೇ ಕ್ರಮ ಕೈಗೊಳ್ಳುವುದಿಲ್ಲ, ಏಕೆಂದರೆ ಅವರಿಗೆ “ಮತಗಳು ಬೇಕು” ಎಂದು ಕಿಡಿಕಾರಿತು.
ಬೆಚ್ಚಿದ ಅರ್ಜಿದಾರರಿಂದ ಅರ್ಜಿ ವಾಪಸ್
ಅತ್ತ ಸಿಜೆಐ ಚಾಟಿ ಬೀಸುತ್ತಲೇ ಎಚ್ಚೆತ್ತುಕೊಂಡ ಅರ್ಜಿದಾರ ವಕೀಲರು, ಪೀಠದ ಮುಂದೆ ಕ್ಷಮೆ ಕೇಳಿ, ಅರ್ಜಿಯನ್ನು ಹಿಂತೆಗೆದುಕೊಳ್ಳಲು ಅನುಮತಿ ಕೋರಿದರು. ಪೀಠವು ಅರ್ಜಿಯನ್ನು ಹಿಂತೆಗೆದುಕೊಳ್ಳಲು ಅನುಮತಿ ನೀಡಿತು.
Advertisement