ಬಕ್ರೀದ್'ಗೆ ಆಹ್ವಾನಿಸಿ ಹಿಂದೂ ಯುವಕನ ಕೊಲೆ: ಪ್ರಮುಖ ಆರೋಪಿ Asad ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವು!

ಮೇ 28ರಂದು ಉತ್ತರ ಪ್ರದೇಶದ ಘಾಜಿಯಾಬಾದ್‌ನ ಖೋಡಾ ಪ್ರದೇಶದಲ್ಲಿ ಸೂರ್ಯ ಪ್ರತಾಪ್ ಚೌಹಾಣ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿತ್ತು.
Asad
ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿರುವ ಆರೋಪಿ ಅಸದ್
Updated on

ಘಾಜಿಯಾಬಾದ್: ಬಕ್ರೀದ್ ದಿನ 17 ವರ್ಷದ ಯುವಕ ಸೂರ್ಯ ಪ್ರತಾಪ್ ಚೌಹಾಣ್ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅಸದ್ ಶನಿವಾರ ತಡರಾತ್ರಿ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾನೆ.

ಮೇ 28ರಂದು ಉತ್ತರ ಪ್ರದೇಶದ ಘಾಜಿಯಾಬಾದ್‌ನ ಖೋಡಾ ಪ್ರದೇಶದಲ್ಲಿ ಸೂರ್ಯ ಪ್ರತಾಪ್ ಚೌಹಾಣ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿತ್ತು.

ಗಂಭೀರವಾಗಿ ಗಾಯಗೊಂಡಿದ್ದ ಸೂರ್ಯ ಪ್ರತಾಪ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಸ್ಥಳೀಯರು ಹಾಗೂ ಹಲವು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ಆರೋಪಿಗಳ ತಕ್ಷಣದ ಬಂಧನಕ್ಕೆ ಒತ್ತಾಯಿಸಿದ್ದವು.

ಪ್ರಕರಣದ ಪ್ರಮುಖ ಆರೋಪಿ ಅಸದ್ ತಲೆಮರೆಸಿಕೊಂಡಿದ್ದ, ಆತನ ಬಂಧನಕ್ಕೆ ರೂ.50 ಸಾವಿರ ಬಹುಮಾನ ಘೋಷಿಸಲಾಗಿತ್ತು. ಈಗಾಗಲೇ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ, ಅಸದ್ ಪತ್ತೆಯಾಗದ ಹಿನ್ನೆಲೆಯಲ್ಲಿ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ನಡೆಸಿದ್ದರು.

Asad
ಘಾಜಿಯಾಬಾದ್: ನನ್ನ ಖಾಸಗಿ ಅಂಗವನ್ನು ಮುಟ್ಟಿ, ಅಕ್ರಮ ಸಂಬಂಧ ಹೊಂದುವಂತೆ ಒತ್ತಡ: ಪೊಲೀಸರ ವಿರುದ್ಧ ಮಹಿಳೆ ಆರೋಪ

ಈ ನಡುವೆ ಅಸದ್ ತನ್ನ ಸಹಚರರಿಂದ ಹಣ ಪಡೆದು, ಪರಾರಿಯಾಗಲು ಸಿದ್ಧತೆ ನಡೆಸುತ್ತಿದ್ದ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಖೋಡಾ ಮತ್ತು ಇಂದಿರಾಪುರಂ ಪೊಲೀಸ್ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿ ವಿವಿಧ ಸ್ಥಳಗಳಲ್ಲಿ ತಪಾಸಣೆ ಆರಂಭಿಸಿದ್ದವು.

ಈ ವೇಳೆ ಬೈಕ್‌ನಲ್ಲಿ ಬಂದ ಅಸದ್ ಮತ್ತು ಆತನ ಸಹಚರನನ್ನು ಪೊಲೀಸರು ತಡೆಹಿಡಿಯಲು ಯತ್ನಿಸಿದಾಗ, ಅಸದ್ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಆತ್ಮರಕ್ಷಣೆಗಾಗಿ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ.

ಈ ವೇಳೆ ಗಾಯಗೊಂಡಿದ್ದ ಅಸದ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಆತ ಮೃತಪಟ್ಟಿದ್ದಾನೆಂದು ಘೋಷಿಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಅಧಿಕಾರಿಗೂ ಗಾಯಗಳಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಎನ್‌ಕೌಂಟರ್ ನಡೆದ ಸ್ಥಳದಿಂದ ಅಸದ್ ಬಳಸುತ್ತಿದ್ದ ಬೈಕ್ ಹಾಗೂ ಶಸ್ತ್ರಾಸ್ತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ, ಅಸದ್ ಜೊತೆಯಲ್ಲಿದ್ದ ಮತ್ತೊಬ್ಬ ಸಹಚರ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

ಈ ನಡುವೆ ಅಸದ್ ಎನ್‌ಕೌಂಟರ್ ಕುರಿತು ಮೃತ ಸೂರ್ಯ ಪ್ರತಾಪ್ ಚೌಹಾಣ್ ಅವರ ತಾಯಿ ಪ್ರತಿಕ್ರಿಯಿಸಿದ್ದು, “ನನ್ನ ಮಗನ ಹತ್ಯೆಯಲ್ಲಿ ಭಾಗಿಯಾಗಿದ್ದ ಉಳಿದ ಆರೋಪಿಗಳ ವಿರುದ್ಧವೂ ಇದೇ ರೀತಿಯ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಪ್ರತಿಕ್ರಿಯಿಸಿ, “ಕೊಲೆಗಾರರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ನೀಡಲಾಗುವುದು” ಎಂದು ಹೇಳಿದ್ದರು.

ಇದೇ ವೇಳೆ ಮಾಯಾವತಿಯವರು ಈ ಘಟನೆಯನ್ನು “ಅತ್ಯಂತ ದುಃಖಕರ ಹಾಗೂ ಆತಂಕಕಾರಿ” ಎಂದು ಬಣ್ಣಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com