

ನವದೆಹಲಿ: ತಮ್ಮ ಕಠಿಣ ಹಾಗೂ ಅಪರೂಪದ ಇಂಗ್ಲಿಷ್ ಪದಗಳ ಬಳಕೆಯಿಂದಲೇ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುವ ಕಾಂಗ್ರೆಸ್ ಸಂಸದ ಶಶಿ ತರೂರ್, ಇದೀಗ ರಾಜಕೀಯ ವಲಯದಲ್ಲಿ ಬಳಸಲಾಗುವ 'ಗೋದಿ' (Godi) ಮೀಡಿಯಾ, 'ಅಂಧಭಕ್ತ್' ಎಂಬ ಪದಗಳಿಗೆ ಹೊಸ ಇಂಗ್ಲಿಷ್ ಪರ್ಯಾಯ ಪದವೊಂದನ್ನು ಪರಿಚಯಿಸಿದ್ದಾರೆ.
ಸದಾ ವಿಪಕ್ಷಗಳನ್ನು ಮತ್ತು ಆಡಳಿತ ಪಕ್ಷದ ಪರವಾಗಿ ನಿಲ್ಲುವವರನ್ನು ಟೀಕಿಸಲು ಬಳಕೆಯಾಗುವ ಈ ಪದಗಳ ಬದಲಾಗಿ, ಶಶಿ ತರೂರ್ ಅವರು "Quockerwodger" (ಕ್ವಾಕರ್‌ವಾಡ್ಜರ್) ಎಂಬ ವಿಭಿನ್ನ ಪದವನ್ನು ಬಳಸುವಂತೆ ಸೂಚಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಜನರನ್ನು 'ಅಂಧಭಕ್ತರು', 'ಗೋದಿ', 'ಹಣ ಪಡೆದು ಕೆಲಸ ಮಾಡುವವರು' ಮುಂತಾದ ಪದಗಳಿಂದ ಕರೆಯುವುದರಿಂದ ಬೇಸರವಾಗಿದ್ದರೆ, 'ಕ್ವಾಕರ್‌ವಾಡ್ಜರ್' ಪದ ಪರ್ಯಾಯವಾಗಬಹುದು ಹೇಳಿದ್ದಾರೆ.
ಅಲ್ಲದೆ ಆ ಪದದ ಅರ್ಥವನ್ನೂ ತಿಳಿಸಿರುವ ಅವರು, ಬೇರೊಬ್ಬ ವ್ಯಕ್ತಿಯ ನಿಯಂತ್ರಣದಲ್ಲಿದ್ದು, ಅವರ ಸೂಚನೆಯಂತೆ ವರ್ತಿಸುವ ರಾಜಕೀಯ ಕೈಗೊಂಬೆ ಅಥವಾ ವ್ಯಕ್ತಿಯನ್ನು 'ಕ್ವಾಕರ್‌ವಾಡ್ಜರ್' ಎಂದು ಕರೆಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದು ನಮ್ಮ ಕಾಲದ ಪದ. ಕಳೆದ 12 ವರ್ಷಗಳಲ್ಲಿ ಆಡಳಿತ ಪಕ್ಷ ಇಂತಹ ಕೆಲವರನ್ನು ಸೃಷ್ಟಿಸಿದೆ ಎಂದು ನನಗನಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.
'ಅಂಧಭಕ್ತರು' ಮತ್ತು 'ಗೋದಿ ಮೀಡಿಯಾ' ಎಂಬ ಪದಗಳನ್ನು ಸರ್ಕಾರದ ಟೀಕಾಕಾರರು ಬಿಜೆಪಿ ಕಟ್ಟಾ ಬೆಂಬಲಿಗರು ಹಾಗೂ ಸರ್ಕಾರದ ನಿರೂಪಣೆಗಳನ್ನು ಪ್ರಸಾರ ಮಾಡುತ್ತವೆ ಎಂದು ಆರೋಪಿಸಿ ಮಾಧ್ಯಮಗಳ ಒಂದು ವರ್ಗವನ್ನು ಉಲ್ಲೇಖಿಸಲು ಬಳಸುತ್ತಾರೆ.
ಲೇಖಕ, ರಾಜಕಾರಣಿ ಹಾಗೂ ಪದಗಳ ಬಳಕೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ತರೂರ್ ತಮ್ಮ ಅಪರೂಪದ ಪದಪ್ರಯೋಗಗಳಿಂದ ಸಾಮಾಜಿಕ ಜಾಲತಾಣ ಬಳಕೆದಾರರನ್ನು ಆಗಾಗ್ಗೆ ನಿಘಂಟಿನ ಮೊರೆ ಹೋಗುವಂತೆ ಮಾಡುತ್ತಾರೆ.
ಈ ಹಿಂದೆ 'ಆಲೊಡಾಕ್ಸೋಫೋಬಿಯಾ' (Allodoxaphobia) ಎಂಬ ಅಪರೂಪದ ಪದವನ್ನು ಬಳಸಿ ಬಿಜೆಪಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದರು. ಇತರರ ಅಭಿಪ್ರಾಯಗಳ ಬಗ್ಗೆ ಇರುವ ಅತಾರ್ಕಿಕ ಭಯ ಎಂಬುದು ಈ ಪದದ ಅರ್ಥ ಎಂದು ಅವರು ವಿವರಿಸಿದ್ದರು.
ಇದಲ್ಲದೆ, 'ಫರ್ರಾಗೊ' (Farrago) ಮತ್ತು 'ಟ್ರೋಗ್ಲೊಡೈಟ್' (Troglodyte) ಮುಂತಾದ ಪದಗಳ ಮೂಲಕವೂ ಗಮನ ಸೆಳೆದಿದ್ದರು. 'ಫರ್ರಾಗೊ' ಎಂದರೆ ಗೊಂದಲಮಯ ಮಿಶ್ರಣ ಎಂದರ್ಥ. 'ಟ್ರೋಗ್ಲೊಡೈಟ್' ಎಂದರೆ ಉದ್ದೇಶಪೂರ್ವಕವಾಗಿ ಅಜ್ಞಾನಿ ಅಥವಾ ಹಳೆಯ ವಿಚಾರಗಳಿಗೆ ಅಂಟಿಕೊಂಡಿರುವ ವ್ಯಕ್ತಿ ಎಂಬ ಅರ್ಥವಿದೆ.