

ರಾಯಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಛತ್ತೀಸ್‌ಗಢದ ನಕ್ಸಲ್ ಪೀಡಿತ ಬಸ್ತಾರ್ ಜಿಲ್ಲೆಯ ಕರನ್‌ಪುರದಲ್ಲಿರುವ ಕೋಬ್ರಾ (CoBRA) ಕಾರ್ಯಾಚರಣೆ ನೆಲೆಗೆ ಭೇಟಿ ನೀಡಿ, ದೇಶ ಕಾಯೋ ವೀರ ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶವನ್ನು ಹಲವು ದಶಕಗಳಿಂದ ಕಾಡುತ್ತಿದ್ದ ಮಾವೋವಾದಿ ದಂಗೆಯ ವಿರುದ್ಧದ ಹೋರಾಟದಲ್ಲಿ ಭಾರತವು ಅಂತಿಮವಾಗಿ ಐತಿಹಾಸಿಕ ಜಯ ಸಾಧಿಸಿದೆ ಎಂದು ಘೋಷಿಸಿದರು.
ನಕ್ಸಲಿಸಂ ವಿರುದ್ಧದ ಹೋರಾಟದಲ್ಲಿ ಭದ್ರತಾ ಸಿಬ್ಬಂದಿ ಮಾಡಿರುವ ತ್ಯಾಗ ಮತ್ತು ಸೇವೆಯನ್ನು ಶ್ಲಾಘಿಸಿದ ಅವರು, ದಶಕಗಳ ಕಾಲ ದೇಶವನ್ನು ಕಾಡಿದ್ದ ಮಾವೋವಾದಿ ಭಯೋತ್ಪಾದನೆಯ ವಿರುದ್ಧದ ಹೋರಾಟ ಅಂತ್ಯಗೊಂಡಿರುವ ಸಂದರ್ಭದಲ್ಲಿ ಈ ಬಾರಿಯ ದೀಪಾವಳಿ ವಿಶೇಷ ಮಹತ್ವ ಪಡೆದುಕೊಂಡಿದೆ ಎಂದು ಹೇಳಿದರು.
ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಶಿಬಿರದಲ್ಲಿ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಪ್ರತಿಯೊಂದು ಜಿಲ್ಲೆಯೂ ನಕ್ಸಲಿಸಂ ಮುಕ್ತವಾದ ಬಳಿಕ ಆಚರಿಸುತ್ತಿರುವ ಮೊದಲ ದೀಪಾವಳಿ ಇದಾಗಿದೆ ಎಂದರು.
ಹಿಂದೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರು ಭಯದಿಂದ ಹೊರಬರಲು ಮತ್ತು ಅಭಿವೃದ್ಧಿಯ ಹೊಸ ಹಂತಕ್ಕೆ ಕಾಲಿಡಲು ಭದ್ರತಾ ಪಡೆಗಳೇ ಕಾರಣ ಎಂದು ತಿಳಿಸಿದರು.
ದೇಶದ ಪ್ರತಿಯೊಂದು ಜಿಲ್ಲೆಯೂ ನಕ್ಸಲಿಸಂ ಮುಕ್ತವಾಗಿರುವ ಮೊದಲ ದೀಪಾವಳಿ ಇದಾಗಿದೆ. ಕೋಟ್ಯಂತರ ನಾಗರಿಕರು ನಕ್ಸಲಿಸಂನ ಭಯದಿಂದ ಹೊರಬಂದಿರುವ ಮೊದಲ ದೀಪಾವಳಿ ಇದು ಎಂದು ಹೇಳಿದರು.
ಇದೇ ವೇಳೆ ಬಸ್ತಾರ್ ಮತ್ತು ಅಬುಜ್ಮಾಡ್ ಪ್ರದೇಶಗಳಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಗಳಿಗೆ ತರಬೇತಿ ಹಾಗೂ ಕಾರ್ಯಾಚರಣೆಯ ಕೇಂದ್ರವಾಗಿ ಕಾರ್ಯನಿರ್ವಹಿಸುವ ಕರಣ್‌ಪುರದಲ್ಲಿರುವ ಕೋಬ್ರಾ (CoBRA) ಕಾರ್ಯಾಚರಣಾ ನೆಲೆಗೂ ಪ್ರಧಾನಿ ಭೇಟಿ ನೀಡಿದರು.
ದೇಶದ 140 ಕೋಟಿ ಜನರ ಪರವಾಗಿ ಭದ್ರತಾ ಸಿಬ್ಬಂದಿಯ ಸಮರ್ಪಣೆ ಮತ್ತು ಸೇವೆಗೆ ಕೃತಜ್ಞತೆ ಸಲ್ಲಿಸಲು ತಾನು ಇಲ್ಲಿಗೆ ಬಂದಿರುವುದಾಗಿ ಹೇಳಿದರು.
ಒಂದು ಕಾಲದಲ್ಲಿ ನಕ್ಸಲ್ ಭಯೋತ್ಪಾದನೆಯಿಂದ ನಲುಗಿದ್ದ ನೆಲ ಬಸ್ತಾರ್. ಆದರೆ, ನಿಮ್ಮ ತ್ಯಾಗ ಮತ್ತು ಸಮರ್ಪಣೆಯಿಂದ ಆ ಭಯೋತ್ಪಾದನೆ ಅಂತ್ಯಗೊಂಡಿದ್ದು, ಅಭಿವೃದ್ಧಿಯ ಹೊಸ ಅಲೆ ಆರಂಭವಾಗಿದೆ ಎಂದು ಶ್ಲಾಘಿಸಿದರು.
ನಕ್ಸಲಿಸಂ ಸಮಸ್ಯೆಯನ್ನು ನಿಭಾಯಿಸುವಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರಗಳ ವಿರುದ್ಧವೂ ಮೋದಿ ವಾಗ್ದಾಳಿ ನಡೆಸಿದರು.
ನಕ್ಸಲಿಸಂ ಅನ್ನು ಗುಣಪಡಿಸಲಾಗದ ಕಾಯಿಲೆ ಎಂದು ಪರಿಗಣಿಸಿದ್ದ ಹಿಂದಿನ ಸರ್ಕಾರಗಳಿಗೆ ಅದನ್ನು ಎದುರಿಸುವ ರಾಜಕೀಯ ಇಚ್ಛಾಶಕ್ತಿ ಇರಲಿಲ್ಲ ಎಂದು ಆರೋಪಿಸಿದರು.
ಬಳಿಕ 2004ರಿಂದ 2013ರವರೆಗಿನ ಅಂಕಿಅಂಶಗಳನ್ನು ಉಲ್ಲೇಖಿಸಿದ ಅವರು, ಪ್ರತಿ ವರ್ಷ ನಕ್ಸಲರಿಗಿಂತ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದರು ಎಂದರು.
2014ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಅಗತ್ಯವಾದ ರಾಜಕೀಯ ಇಚ್ಛಾಶಕ್ತಿ ಹೆಚ್ಚಾಯಿತು ಎಂದು ಹೇಳಿದರು.
ಆಗಿನ ಸರ್ಕಾರಗಳು ನಕ್ಸಲಿಸಂ ಅನ್ನು ಗುಣಪಡಿಸಲಾಗದ ಕಾಯಿಲೆ ಎಂದು ಪರಿಗಣಿಸಿ, ಸಮಸ್ಯೆಯನ್ನು ಹಾಗೆಯೇ ಬಿಟ್ಟಿದ್ದವು ಎಂದು ಟೀಕಿಸಿದರು.
ಸುಮಾರು 20 ರಾಜ್ಯಗಳ 230ಕ್ಕೂ ಹೆಚ್ಚು ಜಿಲ್ಲೆಗಳು ಒಂದು ಕಾಲದಲ್ಲಿ ನಕ್ಸಲಿಸಂನಿಂದ ಪ್ರಭಾವಿತವಾಗಿದ್ದವು. ಒಂದೇ ವರ್ಷದಲ್ಲಿ 2,000ಕ್ಕೂ ಹೆಚ್ಚು ದಾಳಿಗಳು ನಡೆದಿದ್ದವು ಎಂದು ತಿಳಿಸಿದರು.
2010ರಲ್ಲಿ ದಂತೇವಾಡದಲ್ಲಿ ನಡೆದ ದಾಳಿಯಲ್ಲಿ 76 ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದ ಘಟನೆಯನ್ನೂ ಅವರು ಸ್ಮರಿಸಿದರು.
ಅದೇ ವರ್ಷ ನಡೆದ ಮತ್ತೊಂದು ದಾಳಿಯಲ್ಲಿ 44 ನಾಗರಿಕರು ಮೃತಪಟ್ಟಿದ್ದರು. ದಶಕಗಳ ಕಾಲ ನಡೆದ ನಕ್ಸಲ್ ಹೋರಾಟದಲ್ಲಿ ಛತ್ತೀಸ್‌ಗಢದಲ್ಲಿ 1,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದರು.
ಇದೇ ವೇಳೆ ಹಿಂದಿನ ಸರ್ಕಾರಗಳ ಪ್ರಭಾವಿ ನಾಯಕರು ಈ ಸಾವುಗಳ ಬಗ್ಗೆ ಸಂತಾಪ ವ್ಯಕ್ತಪಡಿಸಲು ಕೂಡ ವಿಫಲರಾಗಿದ್ದರು ಎಂದು ಆರೋಪಿಸಿದ ಅವರು, ತಮ್ಮ ಸರ್ಕಾರ ನಕ್ಸಲ್ ಮತ್ತು ಪ್ರತ್ಯೇಕತಾವಾದಿ ಸಂಘಟನೆಗಳ ಹಣಕಾಸಿನ ಮೂಲಗಳನ್ನು ಕಡಿತಗೊಳಿಸಲು, ನಕಲಿ ನೋಟುಗಳ ಜಾಲವನ್ನು ನಾಶಪಡಿಸಲು ಹಾಗೂ ಅವುಗಳ ಪೂರೈಕೆ ಮಾರ್ಗಗಳನ್ನು ಬಂದ್ ಮಾಡಲು ಕ್ರಮ ಕೈಗೊಂಡಿದೆ ಎಂದು ಹೇಳಿದರು.
ನಕ್ಸಲ್ ನಿಗ್ರಹ ಕಾರ್ಯಾಚರಣೆಯ ಯಶಸ್ಸನ್ನು ವಿವರಿಸಿದ ಪ್ರಧಾನಿ ಮೋದಿ, ಕಳೆದ ಒಂದು ವರ್ಷದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಒಬ್ಬ ಸಿಆರ್‌ಪಿಎಫ್ ಯೋಧನೂ ಪ್ರಾಣ ಕಳೆದುಕೊಳ್ಳದಿರುವುದು ಕಳೆದ 47 ವರ್ಷಗಳಲ್ಲೇ ಮೊದಲ ಬಾರಿಯಾಗಿದೆ ಎಂದು ಹೇಳಿದರು. ಇದು ದೇಶದ ನೀತಿಗಳು ಹಾಗೂ ಭದ್ರತಾ ಸಿಬ್ಬಂದಿಯ ದೃಢಸಂಕಲ್ಪ ಮತ್ತು ಧೈರ್ಯಕ್ಕೆ ಸಂದ ಜಯ ಎಂದು ಬಣ್ಣಿಸಿದರು.
ಸಿಆರ್‌ಪಿಎಫ್, ಕೋಬ್ರಾ, ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಇಂಡೋ-ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ), ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ), ಭಾರತೀಯ ಮೀಸಲು ಪಡೆ (ಐಆರ್‌ಬಿ) ಮತ್ತು ಬಸ್ತರ್ ಫೈಟರ್ಸ್ ಸೇರಿದಂತೆ ರಾಜ್ಯ ಪೊಲೀಸ್ ಪಡೆಗಳು ಹಾಗೂ ಮಹಿಳಾ ಸಿಬ್ಬಂದಿಯ ಕೊಡುಗೆಯನ್ನು ಅವರು ಶ್ಲಾಘಿಸಿದರು.
ದೇಶದ ಆಂತರಿಕ ಭದ್ರತೆ ಮತ್ತು ಗಡಿ ರಕ್ಷಣೆಯ ನಡುವೆ ಸಾಮ್ಯತೆ ವಿವರಿಸಿದ ಪ್ರಧಾನಿ, ದೇಶದೊಳಗೆ ನಕ್ಸಲರ ವಿರುದ್ಧ ಹೋರಾಡುವ ಸಿಬ್ಬಂದಿಯ ಪಾತ್ರವೂ ಗಡಿಯಲ್ಲಿ ದೇಶವನ್ನು ಕಾಯುವ ಯೋಧರಷ್ಟೇ ಮಹತ್ವದ್ದಾಗಿದೆ ಎಂದರು.
ರಾಷ್ಟ್ರದ ಆಂತರಿಕ ಭದ್ರತೆ ಬಲವಾಗಿದ್ದಾಗ ಹೊರಗಿನ ಶತ್ರುಗಳು ಯಶಸ್ವಿಯಾಗಲು ಸಾಧ್ಯವಿಲ್ಲ. ಆದರೆ, ಆಂತರಿಕ ಭದ್ರತೆ ದುರ್ಬಲಗೊಂಡಾಗ ಹೊರಗಿನ ಶತ್ರುಗಳೂ ತಲೆ ಎತ್ತಲು ಆರಂಭಿಸುತ್ತಾರೆ ಎಂದು ಹೇಳಿದರು.
ಭದ್ರತಾ ಪರಿಸ್ಥಿತಿ ಸುಧಾರಿಸಿರುವುದರಿಂದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶಿಕ್ಷಣ, ಆರೋಗ್ಯ, ರಸ್ತೆ ಸಂಪರ್ಕ, ವಿದ್ಯುತ್, ಸಂವಹನ, ಪ್ರವಾಸೋದ್ಯಮ ಮತ್ತು ಉದ್ಯೋಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಅವಕಾಶ ಸೃಷ್ಟಿಯಾಗಿದೆ ಎಂದು ತಿಳಿಸಿದರು.
ಹಿಂಸಾಚಾರ ತ್ಯಜಿಸುವವರು ಮುಖ್ಯವಾಹಿನಿಗೆ ಮರಳಬಹುದು. ಆದರೆ, ನಾಗರಿಕರಿಗೆ ಬೆದರಿಕೆ ಹಾಕುವ ಮತ್ತು ಕಾನೂನು ಉಲ್ಲಂಘಿಸುವವರ ವಿರುದ್ಧ ಭದ್ರತಾ ಪಡೆಗಳು ಕ್ರಮ ಕೈಗೊಳ್ಳಲಿವೆ ಎಂದು ಎಚ್ಚರಿಸಿದರು.
ದೇಶದ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭದ್ರತಾ ಸಿಬ್ಬಂದಿಗೆ ದೀಪಾವಳಿ ಶುಭಾಶಯ ತಿಳಿಸಿದ ಪ್ರಧಾನಿ, ಅವರ ತ್ಯಾಗ ಮತ್ತು ಸೇವೆ ರಾಷ್ಟ್ರದ ಏಕತೆ ಹಾಗೂ ಸಮಗ್ರತೆಯನ್ನು ಕಾಪಾಡುವಲ್ಲಿ ಮಹತ್ವದ ಕೊಡುಗೆ ನೀಡಿದೆ ಎಂದು ಹೇಳಿದರು.