ಚಿತ್ತೂರು (ಆಂಧ್ರಪ್ರದೇಶ): ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ; ಅದರಂತೆ ಸೋತು ಮನೆವಾಸ ಬೇಡ, ಗೆಲುವಿನ ಸಿಂಹಾಸನವೇ ಬೇಕು ಎಂದು ಬಹುತೇಕ ಎಲ್ಲ ಅಭ್ಯರ್ಥಿಗಳು, ತಪ್ಪು ಎಂದು ಗೊತ್ತಿದ್ದರೂ ಕೂಡ ತಮ್ಮ ಪ್ರಚಾರದ ವೇಳೆ ಹಣವನ್ನ ಹಂಚುತ್ತಾರೆ. ಆದರೆ, ಇದು ಅದೆಷ್ಟೋ ಸಮಯ ವರ್ಕ್ ಆಗಲ್ಲ! ಹೀಗೆ ಚುನಾವೆಣೆಯಲ್ಲಿ ಸೋತ ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ಅಭ್ಯರ್ಥಿಯೊಬ್ಬರು, ತಾವೇ ಪ್ರಚಾರದ ವೇಳೆ ಹಂಚಿದ್ದ ಹಣವನ್ನು ವಾಪಸ್ ನೀಡುವಂತೆ ಮತದಾರರಿಗೆ ಎಚ್ಚರಿಕೆ ನೀಡಿರುವ ವಿಚಿತ್ರ ಘಟನೆಯ ವಿಡಿಯೋ ವೈರಲ್ ಆಗಿದೆ. ಆ ಕುರಿತ ವರದಿ ಇಲ್ಲಿದೆ:
ತಲಾ 1000 ಹಂಚಿದರೂ ಸೋಲು!
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ಪುರಸಭೆಯ 32ನೇ ವಾರ್ಡ್‌ನ ಮುನ್ಸಿಪಲ್ ಚುನಾವಣೆಯಲ್ಲಿ ಸೋಲುಂಡ ವೈಎಸ್‌ಆರ್‌ಸಿಪಿ ಪಕ್ಷದ ಅಭ್ಯರ್ಥಿಯಾಗಿದ್ದ ಕೆ. ರೆಡ್ಡಿ ಪ್ರಸಾದ್, ಪ್ರಚಾರದ ವೇಳೆ ಮತದಾರರಿಗೆ ಹಂಚಿದ್ದ ಹಣವನ್ನು ವಾಪಸ್ ಕೊಡುವಂತೆ ಪಟ್ಟು ಹಿಡಿದಿದ್ದಾರೆ. ಜನಸೇನಾ ಪಕ್ಷದ ಪ್ರತಿಸ್ಪರ್ಧಿ ಪೂಲಾ ಚೈತನ್ಯ ಮೋಹನ್ ಎಂಬುವವರ ವಿರುದ್ಧ ಸ್ಪರ್ಧಿಸಿದ್ದ ರೆಡ್ಡಿ ಪ್ರಸಾದ್, ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಬರೋಬ್ಬರಿ 10 ಲಕ್ಷ ರೂಪಾಯಿಗಳನ್ನು ಬಡ್ಡಿ ಹಾಗೂ ಸಾಲದ ರೂಪದಲ್ಲಿ ತಂದು ಮತದಾರರಿಗೆ ಹಂಚಿದ್ದರು. ಹೀಗೆ, ಪ್ರತಿ ವೋಟ್‌ಗೆ ಸುಮಾರು 1,000 ರೂಪಾಯಿಗಳಂತೆ ಹಂಚಿಕೆ ಮಾಡಲಾಗಿತ್ತು. ಆದರೆ, ಚುನಾವಣಾ ಫಲಿತಾಂಶ ಬಂದಾಗ ಅವರು ತೀವ್ರ ಮುಖಭಂಗ ಅನುಭವಿಸಿ ಸೋತರು.
ವೈರಲ್ ಆದ ವೀಡಿಯೊ ಸಂದೇಶ ಮುಂದುವರೆದು, ತಮ್ಮ ಸೋಲಿನಿಂದ ಕಂಗಾಲಾದ ರೆಡ್ಡಿ ಪ್ರಸಾದ್, ವೀಡಿಯೊ ಒಂದನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅದರಲ್ಲಿ, "ನಾನು ಸಾಲ ಮಾಡಿ, ಬಡ್ಡಿ ಕಟ್ಟಿ ನಿಮಗೆಲ್ಲ ಹಣ ನೀಡಿದ್ದೆ. ಆದರೆ ನೀವು ನನಗೆ ವೋಟ್ ಹಾಕದೇ ದ್ರೋಹ ಮಾಡಿದ್ದೀರಿ. ಯಾರೆಲ್ಲ ನನಗೆ ವೋಟ್ ಹಾಕಿಲ್ಲವೋ, ಅವರೆಲ್ಲ ತಕ್ಷಣವೇ ನಾನು ಕೊಟ್ಟ ಹಣವನ್ನು ವಾಪಸ್ ಮಾಡಬೇಕು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ" ಎಂದು ಬಹಿರಂಗವಾಗಿಯೇ ಮತದಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಏತನ್ಮಧ್ಯೆ, ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಚುನಾವಣೆಯಲ್ಲಿ ಮತಕ್ಕಾಗಿ ಹಣ ಹಂಚುವುದು ಕಾನೂನುಬಾಹಿರವಾಗಿದ್ದರೂ, ಅಭ್ಯರ್ಥಿಯೇ ಸ್ವತಃ ಬಹಿರಂಗವಾಗಿ ತಾನು ಹಣ ಹಂಚಿದ್ದನ್ನು ಒಪ್ಪಿಕೊಂಡು, ವಾಪಸ್ ಕೇಳುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಚುನಾವಣಾ ಆಯೋಗವು ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.