

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ನೂತನ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕುರಿತ ಉಲ್ಲೇಖಕ್ಕೆ ಜೆಡಿಯು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
2024ರ ಲೋಕಸಭಾ ಚುನಾವಣೆಗೂ ಮುನ್ನ 'ಇಂಡಿಯಾ' ಒಕ್ಕೂಟದಿಂದ ನಿತೀಶ್ ಕುಮಾರ್ ಹೊರಬಂದ ವಿಚಾರವು ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.
ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸೋನಿಯಾ ಗಾಂಧಿ ತಮ್ಮ ಆತ್ಮಕಥನದಲ್ಲಿ ಚಿತ್ರಿಸಿರುವ ರೀತಿಗೆ ಜನತಾದಳ (ಯುನೈಟೆಡ್) ಬುಧವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ನಿತೀಶ್ ಕುಮಾರ್ ಅವರೇ ಇಂಡಿಯಾ ಮೈತ್ರಿಕೂಟದ ಶಿಲ್ಪಿ ಹಾಗೂ ಅದರ ರಚನೆಯ ಹಿಂದಿನ ಪ್ರಮುಖ ಶಕ್ತಿಯಾಗಿದ್ದರು ಎಂದು ಪ್ರತಿಪಾದಿಸಿದೆ.
ಜೆಡಿಯು ರಾಷ್ಟ್ರೀಯ ವಕ್ತಾರ ರಾಜೀವ್ ರಂಜನ್ ಪ್ರಸಾದ್ ಮಾತನಾಡಿ, ವಿರೋಧ ಪಕ್ಷಗಳ ಮೈತ್ರಿಕೂಟ ರಚನೆಯ ಸುತ್ತ ನಡೆದ ಘಟನೆಗಳನ್ನು ಸೋನಿಯಾ ಗಾಂಧಿ ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ತಮ್ಮ ಪುಸ್ತಕದಲ್ಲಿ ನಿರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಸ್ತುತ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮುನ್ನಡೆಸುತ್ತಿರುವ ಇಂಡಿಯಾ ಮೈತ್ರಿಕೂಟದ ಶಿಲ್ಪಿ ಹಾಗೂ ಪ್ರಮುಖ ಚಾಲಕಶಕ್ತಿ ನಿತೀಶ್ ಕುಮಾರ್ ಅವರೇ ಎಂಬುದು ನಮ್ಮ ನಂಬಿಕೆ" ಎಂದು ಪ್ರಸಾದ್ ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೋನಿಯಾ ಗಾಂಧಿ ತಮ್ಮ Belonging: A Journey of Love ಎಂಬ ಆತ್ಮಕಥನದಲ್ಲಿ, ನಿತೀಶ್ ಕುಮಾರ್ ಇಂಡಿಯಾ ಮೈತ್ರಿಕೂಟದಿಂದ ಹೊರಬರಲು ಅವಕಾಶಕ್ಕಾಗಿ ಕಾಯುತ್ತಿದ್ದರು ಮತ್ತು ಬಿಜೆಪಿ ಪ್ರಭಾವಕ್ಕೆ ಒಳಗಾಗಿದ್ದರು ಎಂದು ಬರೆದಿದ್ದಾರೆ. ಅಲ್ಲದೆ, 2024ರ ಆರಂಭದಲ್ಲಿ ಅವರು ಮತ್ತೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್ಡಿಎ) ಮರಳಿದ್ದನ್ನೂ ಉಲ್ಲೇಖಿಸಿದ್ದಾರೆ.
ಸೋನಿಯಾ ಗಾಂಧಿ ಅವರ ನಿರೂಪಣೆಯನ್ನು ತಳ್ಳಿಹಾಕಿದ ಪ್ರಸಾದ್, ಆರಂಭದಲ್ಲಿ ಕಾಂಗ್ರೆಸ್ ಅನ್ನು ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಲು ಬಹುತೇಕ ಪ್ರಾದೇಶಿಕ ಪಕ್ಷಗಳು ಹಿಂದೇಟು ಹಾಕಿದ್ದವು. ಆದರೆ, ನಿತೀಶ್ ಕುಮಾರ್ ಅವರೇ ಮನವೊಲಿಸಿ ಕಾಂಗ್ರೆಸ್ ಜೊತೆ ಕೈಜೋಡಿಸುವಂತೆ ಮಾಡಿದ್ದರು ಎಂದು ಹೇಳಿದ್ದಾರೆ.
ಅವರ ಪ್ರಯತ್ನದ ಫಲವಾಗಿ ಪಾಟ್ನಾದಲ್ಲಿ ಇಂಡಿಯಾ ಮೈತ್ರಿಕೂಟದ ಮೊದಲ ಸಭೆ ಯಶಸ್ವಿಯಾಗಿ ನಡೆದಿತ್ತು ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಇಂಡಿಯಾ ಮೈತ್ರಿಕೂಟ ತೊರೆಯುವ ನಿತೀಶ್ ಕುಮಾರ್ ಅವರ ನಿರ್ಧಾರವನ್ನೂ ಸಮರ್ಥಿಸಿಕೊಂಡ ಪ್ರಸಾದ್ ಅವರು, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಮಹತ್ವಾಕಾಂಕ್ಷೆ ಹಾಗೂ ಪ್ರಾದೇಶಿಕ ರಾಜಕೀಯ ಹಿತಾಸಕ್ತಿಗಳಿಂದಾಗಿ ಎನ್ಡಿಎಯನ್ನು ಎದುರಿಸಲು ಮೈತ್ರಿಕೂಟಕ್ಕೆ ಸಾಧ್ಯವಿಲ್ಲ ಎಂಬುದನ್ನು ನಿತೀಶ್ ಕುಮಾರ್ ಅಂತಿಮವಾಗಿ ಅರಿತುಕೊಂಡಿದ್ದರು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಪಾತ್ರ, ಅವುಗಳ ಮಹತ್ವಾಕಾಂಕ್ಷೆ ಹಾಗೂ ಪ್ರಾದೇಶಿಕ ರಾಜಕೀಯ ಹಿತಾಸಕ್ತಿಗಳನ್ನು ಗಮನಿಸಿದಾಗ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟವನ್ನು ಎದುರಿಸುವ ಸಾಮರ್ಥ್ಯ ಅವುಗಳಿಗಿಲ್ಲ ಎಂಬುದು ಸ್ಪಷ್ಟವಾಯಿತು. ಇದೇ ಕಾರಣಕ್ಕೆ ನಿತೀಶ್ ಕುಮಾರ್ ಇಂಡಿಯಾ ಮೈತ್ರಿಕೂಟವನ್ನು ತೊರೆದರು ಎಂದು ಹೇಳಿದ್ದಾರೆ.