ಉಚ್ಚಾಟಿತ ಜೆಡಿಯು ಶಾಸಕ ಅನಂತ್ ಸಿಂಗ್‌ಗೆ ಸುಪ್ರೀಂ ಶಾಕ್: ಕೊಲೆ ಕೇಸ್ ಜಾಮೀನು ರದ್ದು, ಡಿಸೆಂಬರ್ 1 ರೊಳಗೆ ಶರಣಾಗಲು ಆದೇಶ

ಉಚ್ಚಾಟಿತ ಜೆಡಿಯು ಶಾಸಕ ಅನಂತ್ ಸಿಂಗ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಭಾರಿ ಹಿನ್ನಡೆಯಾಗಿದ್ದು, ಕೊಲೆ ಪ್ರಕರಣವೊಂದರಲ್ಲಿ ಅವರಿಗೆ ಪಾಟ್ನಾ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಿ, ಡಿಸೆಂಬರ್ 1, 2026ರೊಳಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:
Expelled JD(U) MLA Anant Singh
ಜೆಡಿಯು ಉಚ್ಚಾಟಿತ ಶಾಸಕ ಅನಂತ್ ಸಿಂಗ್ANI
Updated on: 

ನವದೆಹಲಿ: ಇತ್ತೀಚೆಗೆ ನಡೆದ ಬಿಹಾರ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿ ನೀರಾಜ್ ಕುಮಾರ್ ವಿರುದ್ಧವಾಗಿ, ಜನ ಸೂರಜ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದ ಕಾರಣ ಜೆಡಿಯು ಪಕ್ಷದಿಂದ ಉಚ್ಚಾಟನೆಗೊಂಡಿರುವ ಶಾಸಕ ಅನಂತ್ ಸಿಂಗ್ ಅವರಿಗೆ ಮತ್ತೊಂದು ಕಾನೂನು ಕಂಟಕ ಎದುರಾಗಿದೆ. ಹೌದು, ಕೊಲೆ ಪ್ರಕರಣವೊಂದರಲ್ಲಿ ಬಿಹಾರ ರಾಜಕೀಯದ 'ಬಾಹುಬಲಿ' ಎಂದೇ ಗುರುತಿಸಿಕೊಂಡಿರುವ ಪ್ರಭಾವಿ ನಾಯಕ ಅನಂತ್ ಸಿಂಗ್ ಅವರಿಗೆ ಪಾಟ್ನಾ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಿ, ಡಿಸೆಂಬರ್ 1, 2026ರೊಳಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಪ್ರಕರಣ?

ಕಳೆದ ವರ್ಷ ಅಕ್ಟೋಬರ್ 30, 2025 ರಂದು ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮೊಕಾಮಾದಲ್ಲಿ ನಡೆದ ಹಿಂಸಾಚಾರದಲ್ಲಿ 75 ವರ್ಷದ ದುಲಾರ್ ಚಂದ್ ಯಾದವ್ ಅವರನ್ನು ಎಸ್‌ಯುವಿ ವಾಹನದಡಿ ತುಳಿಸಿ ಕೊಲೆ ಮಾಡಲಾಗಿತ್ತು. ಈ ಕೊಲೆಯ ಪ್ರಮುಖ ಸಂಚುಗಾರ ಎಂಬ ಆರೋಪದಡಿ ಅನಂತ್ ಸಿಂಗ್ ಅವರನ್ನು ನವೆಂಬರ್ 1, 2025 ರಂದು ಬಂಧಿಸಲಾಗಿತ್ತು. ಆದರೆ, ಈ ವರ್ಷದ ಮಾರ್ಚ್ 19 ರಂದು ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಮೃತರ ಮೊಮ್ಮಗ ನೀರಜ್ ಕುಮಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಸುಪ್ರೀಂ ಕೋರ್ಟ್, ಅಪರಾಧದ ಗಂಭೀರತೆ ಮತ್ತು ಅನಂತ್ ಸಿಂಗ್ ಅವರ ಹಿಂದಿನ ಅಪರಾಧ ಹಿನ್ನೆಲೆಯನ್ನು ಪರಿಗಣಿಸದೆ ಪಾಟ್ನಾ ಹೈಕೋರ್ಟ್ ಜಾಮೀನು ನೀಡಿರುವುದು ತಪ್ಪು ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಹೈಕೋರ್ಟ್ ಆದೇಶವನ್ನು ಅಮಾನತುಗೊಳಿಸಿ ಜಾಮೀನು ರದ್ದು ಮಾಡಿದೆ. ಅದರಂತೆ, ಅನಂತ್ ಸಿಂಗ್ ಅವರು ಡಿಸೆಂಬರ್ 1 ರೊಳಗೆ ಅಧಿಕಾರಿಗಳ ಮುಂದೆ ಶರಣಾಗಿ ಮತ್ತೆ ಜೈಲು ಪಾಲಾಗಬೇಕಿದೆ. ಈ ಮೂಲಕ ಕೌಟುಂಬಿಕ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತಮಗೆ ನೀಡಿರುವ ಮಧ್ಯಂತರ ಜಾಮೀನನ್ನು ವಿಸ್ತರಿಸಬೇಕೆಂಬ ಅನಂತ್ ಸಿಂಗ್ ಅವರ ಮನವಿಯನ್ನೂ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

Expelled JD(U) MLA Anant Singh
'JD(U) ಕಥೆ ಮುಗಿದಿದೆ, ಮುಂದಿನ ಚುನಾವಣೆಯಲ್ಲಿ ಪಕ್ಷ 10-12 ಸ್ಥಾನಗಳಿಗೆ ಸೀಮಿತವಾಗಲಿದೆ': ಉಚ್ಚಾಟಿತ ಶಾಸಕ ಅನಂತ್ ಸಿಂಗ್

ಮುಂದುವರೆದು, ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ 4 ತಿಂಗಳ ಒಳಗಾಗಿ ಈ ಕೊಲೆ ಪ್ರಕರಣದ ಸಂಪೂರ್ಣ ತನಿಖೆಯನ್ನು ಮುಕ್ತಾಯಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಬಿಹಾರ ಪೊಲೀಸರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X