'ಭ್ರಷ್ಟಾಚಾರ ವಿರೋಧಿ ಹೋರಾಟದ ಹಿಂದೆ BJP-RSS ಕೈವಾಡ'; 'ಸಂಬಂಧವೇ ಇಲ್ಲ' ಎಂದು ಸೋನಿಯಾಗಾಂಧಿ ಆರೋಪಕ್ಕೆ ಅಣ್ಣಾ ಹಜಾರೆ ಕಿಡಿ

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ತಮ್ಮ Belonging: A Journey of Love ಆತ್ಮಕಥನದಲ್ಲಿ, ಅಣ್ಣಾ ಹಜಾರೆ ನೇತೃತ್ವದ 'ಇಂಡಿಯಾ ಅಗೇನ್ಸ್ಟ್ ಕರಪ್ಷನ್' ಚಳವಳಿಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ರಹಸ್ಯವಾಗಿ..
Anna Hazare on Sonia Gandhi's BJP-RSS claim
ಸೋನಿಯಾ ಗಾಂಧಿ ಮತ್ತು ಅಣ್ಣಾ ಹಜಾರೆ
Updated on: 

ಮುಂಬೈ: 2011-12ರಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಬಿಜೆಪಿ ಮತ್ತು RSS ಪರೋಕ್ಷ ಬೆಂಬಲ ನೀಡಿದ್ದವು ಎಂಬ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಹೇಳಿಕೆಯನ್ನು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಳ್ಳಿಹಾಕಿದ್ದಾರೆ.

ಬಿಜೆಪಿ ಅಥವಾ ಆರ್‌ಎಸ್‌ಎಸ್‌ ಜೊತೆ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ತಮ್ಮ Belonging: A Journey of Love ಆತ್ಮಕಥನದಲ್ಲಿ, ಅಣ್ಣಾ ಹಜಾರೆ ನೇತೃತ್ವದ 'ಇಂಡಿಯಾ ಅಗೇನ್ಸ್ಟ್ ಕರಪ್ಷನ್' ಚಳವಳಿಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ರಹಸ್ಯವಾಗಿ ಬೆಂಬಲ ನೀಡಿದ್ದವು ಎಂದು ಉಲ್ಲೇಖಿಸಿದ್ದಾರೆ.

ಈ ಚಳವಳಿಯು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಉದ್ದೇಶ ಹೊಂದಿತ್ತು ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಣ್ಣಾ ಹಜಾರೆ, "ಇದು ತಪ್ಪು. ನನಗೆ ಬಿಜೆಪಿ ಅಥವಾ ಆರ್‌ಎಸ್‌ಎಸ್‌ ಜೊತೆ ಯಾವುದೇ ಸಂಬಂಧವಿಲ್ಲ. ಅವರ ಕಾರ್ಯಕ್ರಮಗಳಲ್ಲೂ ನಾನು ಭಾಗವಹಿಸಿಲ್ಲ. ನನಗೆ ದೇಶವೇ ಮೊದಲ ಆದ್ಯತೆ" ಎಂದು ಹೇಳಿದ್ದಾರೆ.

ತಮ್ಮ ಹೋರಾಟಗಳು ಸದಾ ಸಮಾಜ ಮತ್ತು ದೇಶದ ಹಿತದೃಷ್ಟಿಯಿಂದ ನಡೆದಿವೆಯೇ ಹೊರತು ಯಾವುದೇ ರಾಜಕೀಯ ಪಕ್ಷದ ಪರವಾಗಿ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Anna Hazare on Sonia Gandhi's BJP-RSS claim
Babri ಧ್ವಂಸದ ದಿನ ಬಿಕ್ಕಿ ಬಿಕ್ಕಿ ಅತ್ತಿದ್ದೆ: ಇಂದಿರಾ ಹತ್ಯೆ ನಂತರ ಪ್ರತಿಕ್ಷಣವೂ ಭಯದಲ್ಲೇ ಬದುಕಿದ್ದೆವು: ‘Belonging’ ಆತ್ಮಚರಿತ್ರೆಯಲ್ಲಿ ಹಳೇ ನೆನಪುಗಳ ಕೆದಕಿದ ಸೋನಿಯಾ ಗಾಂಧಿ..!

ಮನಮೋಹನ್ ಸಿಂಗ್ ಸೋಲಿಗೆ ನಾನೇ ಕಾರಣ ಎನ್ನಲು ಆಧಾರವೇನು?

2014ರ ಲೋಕಸಭೆ ಚುನಾವಣೆಯಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಸೋಲಲು ತಮ್ಮ ಹೋರಾಟವೇ ಕಾರಣ ಎಂಬ ಅಭಿಪ್ರಾಯಕ್ಕೂ ಅಣ್ಣಾ ಹಜಾರೆ ಪ್ರಶ್ನೆ ಎತ್ತಿದ್ದಾರೆ.

"ನನ್ನ ಹೋರಾಟದಿಂದಲೇ 2014ರ ಚುನಾವಣೆಯಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಸೋತಿತು ಎಂದು ಹೇಳಲು ಆಧಾರವೇನು?" ಎಂದು ಅವರು ಕೇಳಿದ್ದಾರೆ.

ಸೋನಿಯಾ ಗಾಂಧಿ ಮತ್ತು ತಾವು ಈವರೆಗೂ ಪರಸ್ಪರ ಭೇಟಿಯಾಗಿಲ್ಲ ಎಂದಿರುವ ಹಜಾರೆ, ತಮ್ಮನ್ನು ವೈಯಕ್ತಿಕವಾಗಿ ತಿಳಿಯದವರು ತಮ್ಮ ಬಗ್ಗೆ ಇಂತಹ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ನನ್ನನ್ನು ಭೇಟಿಯೇ ಆಗಿಲ್ಲ, ನನ್ನ ಬಗ್ಗೆ ಹೇಗೆ ಮಾತನಾಡುತ್ತಾರೆ?

ಇದೇ ವೇಳೆ "ಅವರು ನನ್ನನ್ನು ನೋಡಿಲ್ಲ, ನಾನೂ ಅವರನ್ನು ನೋಡಿಲ್ಲ. ಪರಸ್ಪರ ಭೇಟಿಯೇ ಆಗದಿರುವಾಗ ಒಬ್ಬರ ಬಗ್ಗೆ ಮತ್ತೊಬ್ಬರು ಮಾತನಾಡುವುದು ಎಷ್ಟು ಸೂಕ್ತ?" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವವರು ಮಾತನಾಡುವಾಗ ಜವಾಬ್ದಾರಿ ವಹಿಸಬೇಕು ಎಂದೂ ಅವರು ಹೇಳಿದ್ದಾರೆ.

"ಜವಾಬ್ದಾರಿಯುತ ವ್ಯಕ್ತಿಗಳು ಜವಾಬ್ದಾರಿಯಿಂದ ಮಾತನಾಡಬೇಕು. ಅಸ್ಪಷ್ಟವಾಗಿ ಮಾತನಾಡುವುದು ಸರಿಯಲ್ಲ. ಇಂತಹ ಹೇಳಿಕೆಗಳಿಂದ ಅವರದ್ದೇ ವರ್ಚಸ್ಸಿಗೆ ಧಕ್ಕೆಯಾಗುತ್ತದೆ" ಎಂದು ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಆತ್ಮಕಥನ

ಸೋನಿಯಾ ಗಾಂಧಿ ಅವರ ಆತ್ಮಕಥನದ ಆಯ್ದ ಭಾಗವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅದರಲ್ಲಿ 2012ರಲ್ಲಿ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರ ವಿರೋಧಿ ಚಳವಳಿಯ ಪ್ರಮುಖ ಮುಖವಾಗಿ ಹೊರಹೊಮ್ಮಿದ್ದರು ಎಂದು ಸೋನಿಯಾ ಉಲ್ಲೇಖಿಸಿದ್ದಾರೆ.

ಅಲ್ಲದೆ, ಚಳವಳಿಯಲ್ಲಿ ಭಾಗವಹಿಸಿದ್ದ ಕೆಲವು ಪ್ರಮುಖರು ನಂತರ ಈ ಹೋರಾಟವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಂಘಟಿಸಿ, ರಹಸ್ಯವಾಗಿ ಬೆಂಬಲಿಸಿದ್ದವು ಎಂದು ಹೇಳಿಕೊಂಡಿದ್ದನ್ನು ಅವರು ಪ್ರಸ್ತಾಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X