

ಕೋಲ್ಕತಾ: ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ಮುಂಬೈಗೆ ಹೊರಡಲಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹೈಜಾಕ್ (ಅಪಹರಣ) ಬೆದರಿಕೆ ಸಂದೇಶ ಪತ್ತೆಯಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ವಿಮಾನ ಹೊರಡುವುದಕ್ಕೂ ಕೆಲವೇ ಕ್ಷಣಗಳ ಮೊದಲು ಶೌಚಾಲಯದಲ್ಲಿ ವಿಮಾನವನ್ನು ಅಪಹರಿಸುವುದಾಗಿ ಎಚ್ಚರಿಕೆ ನೀಡಿದ್ದ ಪತ್ರವೊಂದು ಪತ್ತೆಯಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.
ವಿಮಾನವು ಬೆಳಗ್ಗೆ 10.20ಕ್ಕೆ ಟೇಕ್‌ಆಫ್ ಆಗಬೇಕಿತ್ತು. ಆದರೆ, ಪತ್ತೆಯಾದ ಪತ್ರದಲ್ಲಿ ಬೆಳಗ್ಗೆ 11.10ಕ್ಕೆ ವಿಮಾನವನ್ನು ಅಪಹರಿಸಲಾಗುವುದು ಎಂದು ಬೆದರಿಕೆ ಹಾಕಲಾಗಿತ್ತು ಎಂದು ಕೋಲ್ಕತ್ತಾ ವಿಮಾನ ನಿಲ್ದಾಣದ ನಿರ್ದೇಶಕ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.
ಪತ್ರ ಪತ್ತೆಯಾದ ತಕ್ಷಣ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಬಳಿಕ ವಿಮಾನವನ್ನು ವಿಮಾನ ನಿಲ್ದಾಣದ ಪ್ರತ್ಯೇಕ ತಪಾಸಣಾ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು.
ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತಾ ಪ್ರೋಟೋಕಾಲ್‌ಗಳನ್ನು ತಕ್ಷಣವೇ ಜಾರಿಗೊಳಿಸಲಾಗಿದ್ದು, ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ ಎಂದು ಸಿಂಗ್ ಹೇಳಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ.