

ಬೆಂಗಳೂರು: ವಿಮಾನದ ಶೌಚಾಲಯದಲ್ಲಿ ಹೈಜಾಕ್ ಬೆದರಿಕೆ ಸಂದೇಶ ಪತ್ತೆಯಾದ ಹಿನ್ನೆಲೆಯಲ್ಲಿ ಲಖನೌಗೆ ತೆರಳುತ್ತಿದ್ದ ಇಂಡಿಗೋ ವಿಮಾನವೊಂದು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ತುರ್ತು ಲ್ಯಾಂಡಿಂಗ್ ಮಾಡಿರುವ ಆತಂಕಕಾರಿ ಘಟನೆ ಶನಿವಾರ ಸಂಜೆ ನಡೆದಿದೆ.
ವಿಮಾನ ನಿಲ್ದಾಣದ ಟರ್ಮಿನಲ್ 1ರಿಂದ ಹೊರಟಿದ್ದ 6E-451 ಸಂಖ್ಯೆಯ ವಿಮಾನದ ಶೌಚಾಲಯದಲ್ಲಿ ಕೈಬರಹದ ಬೆದರಿಕೆ ಪತ್ರವೊಂದು ಪತ್ತೆಯಾಗಿದೆ. ಇದನ್ನು ಗಮನಿಸಿದ ವಿಮಾನದ ಸಿಬ್ಬಂದಿ ತಕ್ಷಣ ಪೈಲಟ್‌ಗಳಿಗೆ ಮಾಹಿತಿ ನೀಡಿದ್ದಾರೆ.
ಪತ್ರದಲ್ಲಿ ಈ ವಿಮಾನವನ್ನು ಸಂಜೆ 6.30ಕ್ಕೆ ಅಪಹರಣ ಮಾಡಲಾಗುತ್ತದೆ. ಇದನ್ನು ನಿರ್ಲಕ್ಷಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬರೆಯಲಾಗಿತ್ತು ಎಂದು ವರದಿಯಾಗಿದೆ.
ಬೆದರಿಕೆ ಸಂದೇಶ ಪತ್ತೆಯಾದ ಬೆನ್ನಲ್ಲೇ ವಿಮಾನದಲ್ಲಿ ಪೂರ್ಣ ಪ್ರಮಾಣದ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಬಳಿಕ ಪೈಲಟ್‌ಗಳು ವಿಮಾನವನ್ನು ಬೆಂಗಳೂರಿನ ಮೂಲ ವಿಮಾನ ನಿಲ್ದಾಣಕ್ಕೆ ಮರಳಿಸಲು ನಿರ್ಧರಿಸಿದರು.
ಈ ನಡುವೆ ಬೆಂಗಳೂರಿನಿಂದ ಲಖನೌಗೆ ತೆರಳುತ್ತಿದ್ದ ವಿಮಾನದಲ್ಲಿ ಭದ್ರತಾ ಬೆದರಿಕೆ ವರದಿಯಾಗಿರುವುದನ್ನು ಇಂಡಿಗೋ ವಿಮಾನಯಾನ ಸಂಸ್ಥೆ ಶನಿವಾರ ಖಚಿತಪಡಿಸಿದೆ.
ಪ್ರಮಾಣಿತ ಕಾರ್ಯಾಚರಣಾ ವಿಧಾನಗಳ ಪ್ರಕಾರ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಲಾಗಿದ್ದು, ಅಗತ್ಯ ಭದ್ರತಾ ತಪಾಸಣೆಗಾಗಿ ವಿಮಾನವನ್ನು ವಾಪಸ್ ಕರೆತರಲು ಪೈಲಟ್‌ಗಳು ನಿರ್ಧರಿಸಿದರು ಎಂದು ಸಂಸ್ಥೆ ತಿಳಿಸಿದೆ.
ಅಗತ್ಯ ಅನುಮತಿಗಳು ದೊರೆತ ಬಳಿಕ ವಿಮಾನವು ತನ್ನ ಪ್ರಯಾಣವನ್ನು ಪುನರಾರಂಭಿಸಲಿದೆ ಎಂದು ಇಂಡಿಗೋ ತಿಳಿಸಿದೆ.
ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ. ಅವರಿಗೆ ಉಪಾಹಾರ ಮತ್ತು ಪಾನೀಯಗಳನ್ನು ಒದಗಿಸುವುದು ಹಾಗೂ ನಿರಂತರವಾಗಿ ಮಾಹಿತಿ ನೀಡುವ ಮೂಲಕ ತೊಂದರೆ ಕಡಿಮೆ ಮಾಡಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ.
ಪ್ರಯಾಣಿಕರು, ವಿಮಾನದ ಸಿಬ್ಬಂದಿ ಮತ್ತು ವಿಮಾನದ ಸುರಕ್ಷತೆಯೇ ಸಂಸ್ಥೆಯ ಮೊದಲ ಆದ್ಯತೆಯಾಗಿದೆ ಎಂದು ಇಂಡಿಗೋ ಸ್ಪಷ್ಟಪಡಿಸಿದೆ.