

ನವದೆಹಲಿ: ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ. ಮೋದಿ ಒಬ್ಬ ಆತ್ಮೀಯ ಮತ್ತು ಕಾಳಜಿಯುಳ್ಳ ವ್ಯಕ್ತಿ ಎಂದು ಬಣ್ಣಿಸಿರುವ ಪಿತ್ರೋಡಾ, ತಮ್ಮಿಬ್ಬರ ನಡುವೆ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿದ್ದಾರೆ. ಪಿತ್ರೋಡಾ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಅವರಿಗೆ ಮತ್ತು ಅವರ ಪತ್ನಿ ಅಂಜನಾ ಅವರಿಗೆ ದೀಪಾವಳಿ ಶುಭಾಶಯಗಳನ್ನು ಕೋರಿದ್ದಾರೆ.
ಸುದ್ದಿ ಸಂಸ್ಥೆ ಐಎಎನ್ಎಸ್ (IANS) ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಪಿತ್ರೋಡಾ, ತಾವು ಮೋದಿಯನ್ನು ಒಬ್ಬ ವ್ಯಕ್ತಿಯಾಗಿ ಗೌರವಿಸುವುದಾಗಿ ಮತ್ತು ತಮ್ಮ ಪತ್ನಿಯೊಂದಿಗೆ ಅವರನ್ನು ಭೇಟಿಯಾಗಿರುವುದಾಗಿ ತಿಳಿಸಿದರು.
"ಅವರು ನನ್ನ ಗುಜರಾತಿ ಸ್ನೇಹಿತರು. ಒಬ್ಬ ವ್ಯಕ್ತಿಯಾಗಿ ನಾನು ಅವರನ್ನು ಗೌರವಿಸುತ್ತೇನೆ. ನನ್ನ ಪತ್ನಿ ಮತ್ತು ನಾನು ಅವರನ್ನು ಭೇಟಿಯಾಗಿದ್ದೇವೆ. ವೈಯಕ್ತಿಕ ಮಟ್ಟದಲ್ಲಿ ಅವರು ಅತ್ಯಂತ ಆತ್ಮೀಯರು, ದಯಾಳುಗಳು, ಪ್ರೀತಿಪಾತ್ರರು ಮತ್ತು ಕಾಳಜಿಯುಳ್ಳವರು. ಅವರು ನಿಸ್ಸಂದೇಹವಾಗಿ ಒಬ್ಬ ಉತ್ತಮ ವಾಗ್ಮಿ ಮತ್ತು ಅತ್ಯಂತ ಕಠಿಣ ಪರಿಶ್ರಮಿ ವ್ಯಕ್ತಿ. ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ನಮಗೆ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿದ್ದಾರೆ.
'ಮೋದಿ ವಿರುದ್ಧ ನನಗೆ ಯಾವುದೇ ಅಸಮಾಧಾನ ಇಲ್ಲ: ಮೋದಿ ಅವರ ವಿರುದ್ಧ ತಮಗೆ ಯಾವುದೇ ವೈಯಕ್ತಿಕ ಅಸಮಾಧಾನಗಳಿಲ್ಲ ಎಂದು ಹೇಳಿದ ಪಿತ್ರೋಡಾ, ಪ್ರಧಾನಿಯವರು ತೋರಿದ ಪ್ರೀತಿ ಮತ್ತು ವಾತ್ಸಲ್ಯವನ್ನು ಶ್ಲಾಘಿಸಿದ್ದಾರೆ."ಒಬ್ಬ ಗುಜರಾತಿ ನಾಯಕರಾಗಿ, ಸ್ನೇಹಿತರಾಗಿ ಅಥವಾ ಹಿತೈಷಿಯಾಗಿ, ಮೋದಿ ವಿರುದ್ಧ ನನಗೆ ಯಾವುದೇ ಅಸಮಾಧಾನ ಇಲ್ಲ. ಅವರು ನನ್ನ ಮೇಲೆ ಅಪಾರ ಪ್ರೀತಿ ತೋರಿದ್ದಾರೆ, ಅದನ್ನು ನಾನು ಗೌರವಿಸುತ್ತೇನೆ. ಇದೇ ರೀತಿ, ನಾನು ಗುಜರಾತ್ನಲ್ಲಿರುವ ಅವರ ಮನೆಗೆ ಹಲವು ಬಾರಿ ಭೇಟಿ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಪಿತ್ರೋಡಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಸ್ಯಾಮ್ ಭಾಯ್ ಮತ್ತು ಅಂಜನಾ ಬೆನ್ ಅವರಿಗೆ ದೀಪಾವಳಿ ಶುಭಾಶಯಗಳು. ಮುಂಬರುವ ವರ್ಷವು ಸಂತೋಷ ಮತ್ತು ಆರೋಗ್ಯದಿಂದ ಕೂಡಿರಲಿ ಎಂದು ಪ್ರಾರ್ಥಿಸುತ್ತೇನೆ. ಜೈ ಜಗನ್ನಾಥ ಎಂದು ಪ್ರಧಾನಿ ಬರೆದುಕೊಂಡಿದ್ದಾರೆ. ಪಿತ್ರೋಡಾ ಅವರು ಹಲವು ಸಂದರ್ಭಗಳಲ್ಲಿ ಮೋದಿಯವರನ್ನು ಟೀಕಿಸಿದ್ದಾರೆ. ಇದು ರಾಜಕೀಯ ವಾಗ್ವಾದಗಳಿಗೆ ಎಡೆಮಾಡಿಕೊಟ್ಟಿತ್ತು.
ಭಾರತದ ಪೂರ್ವ ಭಾಗದ ಜನರು ಚೀನಿಯರಂತೆ ಕಾಣುತ್ತಾರೆ, ಪಶ್ಚಿಮ ಭಾಗದವರು ಅರಬ್ಬರಂತೆ ಕಾಣುತ್ತಾರೆ, ಉತ್ತರ ಭಾಗದವರು ಬಹುಶಃ ಬಿಳಿಯರಂತೆ ಕಾಣುತ್ತಾರೆ ಮತ್ತು ದಕ್ಷಿಣ ಭಾಗದವರು ಆಫ್ರಿಕನ್ನರಂತೆ ಕಾಣುತ್ತಾರೆ" ಎಂದು ಅವರು ಹೇಳಿದ್ದರು. ಈ ಹೇಳಿಕೆಗೆ ಮೋದಿ ತೀವ್ರವಾಗಿ ಪ್ರತಿಕ್ರಿಯಿಸುತ್ತಾ, "ನನಗೆ ತುಂಬಾ ಕೋಪ ಬಂದಿದೆ. ಸಂಬಂಧಿಕರೊಬ್ಬರು ಅಂತಹ ಅವಮಾನಕರ ಮಾತುಗಳನ್ನು ಆಡಿದ್ದಾರೆ, ಅದು ನನ್ನನ್ನು ಕೆರಳಿಸಿದೆ. ಸಂವಿಧಾನವನ್ನು ಅತ್ಯುನ್ನತ ಗೌರವದಿಂದ ಕಾಣುವವರೇ, ದೇಶದ ಜನರ ಚರ್ಮದ ಬಣ್ಣವನ್ನುಅವಮಾನಿಸುತ್ತಿದ್ದಾರೆ ಎಂದು ಹೇಳಿದ್ದರು.