

ಇಸ್ಲಾಮಾಬಾದ್: ಪಾಕಿಸ್ತಾನದ ಭದ್ರತಾ ಪಡೆಗಳು ಬಲೂಚಿಸ್ತಾನ ಮತ್ತು ಖೈಬರ್ ಪಖ್ತುಂಕ್ವಾ ಪ್ರಾಂತ್ಯಗಳಲ್ಲಿ ನಡೆಸಿದ ಗುಪ್ತಚರ ಆಧಾರಿತ ಕಾರ್ಯಾಚರಣೆಗಳಲ್ಲಿ ಕನಿಷ್ಠ 74 ಭಯೋತ್ಪಾದಕರನ್ನು ಹತ್ಯೆ ಮಾಡಿವೆ ಎಂದು ಪಾಕಿಸ್ತಾನ ಸೇನೆ ಶುಕ್ರವಾರ ತಿಳಿಸಿದೆ.
ನವೆಂಬರ್ 3 ರಿಂದ ಬಲೂಚಿಸ್ತಾನದ ಕ್ವೆಟ್ಟಾ ಜಿಲ್ಲೆಯ ಕುರ್ರಮ್ ಪ್ರದೇಶದಲ್ಲಿ ಹಾಗೂ ಖೈಬರ್ ಪಖ್ತುಂಕ್ವಾದ ಮಿರ್ ಅಲಿ ಮತ್ತು ಒರಾಕ್‌ಜಾಯ್ ಪ್ರದೇಶಗಳಲ್ಲಿ ಈ ಕಾರ್ಯಾಚರಣೆಗಳನ್ನು ನಡೆಸಲಾಗಿದೆ ಎಂದು ಸೇನೆಯ ಮಾಧ್ಯಮ ವಿಭಾಗವಾದ 'ಇಂಟರ್-ಸರ್ವಿಸಸ್ ಪಬ್ಲಿಕ್ ರಿಲೇಷನ್ಸ್' (ISPR) ಪ್ರಕಟಣೆಯಲ್ಲಿ ತಿಳಿಸಿದೆ.
ಈ ಗುಪ್ತಚರ ಆಧಾರಿತ ಕಾರ್ಯಾಚರಣೆಗಳ ವೇಳೆ, ಭಯೋತ್ಪಾದಕರ ಹಲವು ಅಡಗುತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಯಿತು. ಸರಣಿ ಸಂಘರ್ಷಗಳಲ್ಲಿ 'ತೆಹ್ರೀಕ್-ಎ-ತಾಲಿದಾನ್' ಸಂಘಟನೆಯ 31 ಭಯೋತ್ಪಾದಕರು ಹತರಾಗಿದ್ದಾರೆ. ಅಲ್ಲದೆ, ಅವರಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆ ತಿಳಿಸಿದೆ.
ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ, ಕಳೆದ 48 ಗಂಟೆಗಳಲ್ಲಿ ಮಿರ್ ಅಲಿಯಲ್ಲಿ 35 ಮತ್ತು ಒರಾಕ್‌ಜಾಯ್ ಪ್ರದೇಶದಲ್ಲಿ 8 ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ಸೇನೆ ಹೇಳಿದೆ.
"ಭಯೋತ್ಪಾದಕ ಬೆದರಿಕೆಗಳನ್ನು ಹೋಗಲಾಡಿಸಲು ಮತ್ತು ಭಯೋತ್ಪಾದಕ ಜಾಲಗಳನ್ನು ಧ್ವಂಸಗೊಳಿಸುವ ದೃಢ ನಿರ್ಧಾರದೊಂದಿಗೆ, ಭದ್ರತಾ ಪಡೆಗಳು ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ಸರಣಿ ಗುಪ್ತಚರ ಆಧಾರಿತ ಕಾರ್ಯಾಚರಣೆಗಳನ್ನು ನಡೆಸುತ್ತಿವೆ" ಎಂದು ತಿಳಿಸಿದೆ.
2021ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ, ಪಾಕಿಸ್ತಾನದಲ್ಲಿ, ವಿಶೇಷವಾಗಿ ಖೈಬರ್ ಪಖ್ತುಂಕ್ವಾ (KP) ಮತ್ತು ಬಲೂಚಿಸ್ತಾನ ಪ್ರಾಂತ್ಯಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳು ತೀವ್ರಗೊಂಡಿವೆ.