

ಪುಣೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಭಾರತ, ಅದರ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಅವಮಾನಿಸುತ್ತಾರೆ. ಆದರೆ ಅಂತಹ ಟೀಕೆಗಳು ಅವರು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
'ನಿಮಗೆ ಮತ್ತೆ ಅಧಿಕಾರ ಬೇಕಿದ್ದರೆ ಮೊದಲು ನಿಮ್ಮ ವಿದೇಶ ಪ್ರವಾಸಗಳನ್ನು ನಿಲ್ಲಿಸಿ ಮತ್ತು ನಮ್ಮ ಹಳ್ಳಿಗಳಿಗೆ ಭೇಟಿ ನೀಡಲು ಆರಂಭಿಸಿ. ಆಗ, ಬಹುಶಃ, ನಿಮಗೆ ಅವಕಾಶ ಸಿಗಬಹುದು' ಎಂದು ಅಮಿತ್ ಶಾ ಅವರು ರಾಹುಲ್ ಗಾಂಧಿ ಅವರಿಗೆ ಸಲಹೆ ನೀಡಿದರು.
ಇಂದು ಪುಣೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ, ರಾಹುಲ್ ವಿದೇಶ ಪ್ರವಾಸಗಳು ಮತ್ತು ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಭಾರತ್ ಶೃಂಗಸಭೆ 2026 ಕುರಿತು ಆಕ್ರೋಶ ವ್ಯಕ್ತಪಡಿಸಿದರು.
ಇಡೀ ವಿಶ್ವವೇ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಕೊಂಡಾಡುತ್ತಿದ್ದರೆ, ರಾಹುಲ್ ಗಾಂಧಿ ನಿರಂತರವಾಗಿ ಮೋದಿ ಅವರನ್ನು ಮತ್ತು ದೇಶವನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ದೇಶ ಮತ್ತು ಅದರ ನಾಯಕತ್ವವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ತನ್ನ ಪುನರಾವರ್ತಿತ ಚುನಾವಣಾ ಸೋಲುಗಳಿಂದ ಹತಾಶೆಯನ್ನು ವ್ಯಕ್ತಪಡಿಸುತ್ತಿದೆ ಎಂದು ಶಾ ಆರೋಪಿಸಿದರು.
ನವೆಂಬರ್ 13 ಮತ್ತು 14 ರಂದು ಹೈದರಾಬಾದ್‌ನಲ್ಲಿ ನಡೆದ ಭಾರತ್ ಶೃಂಗಸಭೆಯ ವಿರುದ್ಧವೂ ವಾಗ್ದಾಳಿ ನಡೆಸಿದ ಅಮಿತ್ ಶಾ, ಕಾಂಗ್ರೆಸ್ ನೇತೃತ್ವದ ತೆಲಂಗಾಣ ಸರ್ಕಾರವು ಭಾರತ ಮತ್ತು ವಿದೇಶಗಳಿಂದ ಎಡಪಂಥೀಯ ಸಿದ್ಧಾಂತದ ಪ್ರತಿಪಾದಕರನ್ನು ಆಹ್ವಾನಿಸಿದೆ ಎಂದು ಹೇಳಿದರು.
"ಕಾಂಗ್ರೆಸ್‌ನ ಯುವರಾಜ (ಗಾಂಧಿ ಅವರನ್ನು ಉಲ್ಲೇಖಿಸಿ) 'ಭಾರತ್ ಶೃಂಗಸಭೆ' ಎಂಬ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಭಾರತ ವಿರೋಧಿ ಆಲೋಚನೆಗಳನ್ನು ಮಂಡಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ದೂಷಿಸಿದರು. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ದೂಷಿಸುವುದು ಅಧಿಕಾರಕ್ಕೆ ಬರಲು ಸಹಾಯ ಮಾಡುವುದಿಲ್ಲ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು" ಎಂದರು.
ಚುನಾವಣೆಯಲ್ಲಿ ಪಕ್ಷದ ಪ್ರದರ್ಶನದ ಬಗ್ಗೆ ನಿಮ್ಮ ನಾಯಕತ್ವವನ್ನು ಪ್ರಶ್ನಿಸುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಒತ್ತಾಯಿಸಿದ ಅಮಿತ್ ಶಾ, ನಿಮ್ಮ ಪಕ್ಷದ ಪ್ರಸ್ತುತ ರಾಜಕೀಯ ಧೋರಣೆಯು ಮುಂದಿನ 30 ವರ್ಷಗಳ ಕಾಲ ಅಧಿಕಾರದಿಂದ ದೂರವಿರಿಸಬಹುದು ಎಂದು ಎಚ್ಚರಿಸಿದರು.
"ಚುನಾವಣೆಯಲ್ಲಿ ಗೆಲುವು ಅಥವಾ ಸೋಲು ರಾಜಕೀಯ ಪಕ್ಷಗಳು ಮತ್ತು ಅವುಗಳ ನಾಯಕರ ಕಾರ್ಯಕ್ಷಮತೆಯ ಮೇಲೆ ಅವಲಂಬಿತವಾಗಿರುತ್ತದೆ. ಕಾಂಗ್ರೆಸ್‌ಗೆ 10 ವರ್ಷಗಳ ಕಾಲ (2004-14) ದೇಶವನ್ನು ಆಳುವ ಅವಕಾಶ ಸಿಕ್ಕಿತ್ತು. ಆದರೆ ಆ ಅವಧಿಯಲ್ಲಿ 12 ಲಕ್ಷ ಕೋಟಿ ರೂಪಾಯಿಳ ಭ್ರಷ್ಟಾಚಾರ ನಡೆಯಿತು. ಅಂತಿಮವಾಗಿ ಜನರು ಆ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಿ, ನರೇಂದ್ರ ಮೋದಿಯವರನ್ನು ಪ್ರಧಾನಿ ಹುದ್ದೆಗೆ ತಂದರು" ಎಂದು ಅವರು ಹೇಳಿದರು.