

ನವದೆಹಲಿ: ಮರಣದಂಡನೆ ಶಿಕ್ಷೆ ಅತ್ಯಂತ ಕ್ರೂರವಾದದ್ದು ಆ ಶಿಕ್ಷೆಯನ್ನೇ ರದ್ದುಗೊಳಿಸಬೇಕೆಂಬ ಕೂಗು ವ್ಯಾಪಕವಾಗತೊಡಗಿದೆ. ಈ ಸಂಬಂಧ ವಿಶ್ವಸಂಸ್ಥೆಯಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಭಾರತದ ನಡೆ ಅಚ್ಚರಿ ಮೂಡಿಸಿದೆ.
ಮರಣದಂಡನೆಯ ಬಳಕೆಯ ಮೇಲೆ ತಡೆ (ಮೊರಟೋರಿಯಂ) ಹೇರುವಂತೆ ರಾಷ್ಟ್ರಗಳಿಗೆ ಕರೆ ನೀಡುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) ನಿರ್ಣಯದ ಕರಡಿನ ವಿರುದ್ಧ ಭಾರತ ಮತ ಚಲಾಯಿಸಿದೆ.
ಮೆಕ್ಸಿಕೋ ಮಂಡಿಸಿದ 'ಮರಣದಂಡನೆಯ ಬಳಕೆಯ ಮೇಲೆ ತಡೆ' ಕುರಿತ ಈ ನಿರ್ಣಯವನ್ನು, 193 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಶುಕ್ರವಾರ ಮತದಾನದ ಮೂಲಕ ಅಂಗೀಕರಿಸಿತು. ಈ ನಿರ್ಣಯದ ಪರವಾಗಿ 133 ದೇಶಗಳು ಮತ ಚಲಾಯಿಸಿದರೆ, 33 ದೇಶಗಳು ವಿರೋಧಿಸಿದವು ಮತ್ತು 16 ದೇಶಗಳು ಮತದಾನದಿಂದ ದೂರ ಉಳಿದವು.
ಬಹ್ರೇನ್, ಚೀನಾ, ಈಜಿಪ್ಟ್, ಇರಾನ್, ಇರಾಕ್, ಜಪಾನ್, ಕುವೈತ್, ಮಾಲ್ಡೀವ್ಸ್, ಓಮನ್, ಪಾಕಿಸ್ತಾನ, ಕತಾರ್, ಸೌದಿ ಅರೇಬಿಯಾ ಮತ್ತು ಅಮೆರಿಕದೊಂದಿಗೆ ಭಾರತವೂ ಈ ನಿರ್ಣಯದ ವಿರುದ್ಧ ಮತ ಚಲಾಯಿಸಿತು.
ಮರಣದಂಡನೆ ಶಿಕ್ಷೆಯ ನಿರಂತರ ಬಳಕೆಯ ಬಗ್ಗೆ ಈ ನಿರ್ಣಯ ತೀವ್ರ ಕಳವಳ ವ್ಯಕ್ತಪಡಿಸಿತು. ಅದೇ ಸಮಯದಲ್ಲಿ, ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಸೂಕ್ತ ದಂಡನೆಗಳನ್ನು ನಿರ್ಧರಿಸುವುದು ಸೇರಿದಂತೆ, ತಮ್ಮದೇ ಆದ ಕಾನೂನು ವ್ಯವಸ್ಥೆಗಳನ್ನು ರೂಪಿಸಿಕೊಳ್ಳುವ ಎಲ್ಲ ದೇಶಗಳ ಹಕ್ಕನ್ನು ಪುನರುಚ್ಚರಿಸಿತು.
ಮರಣದಂಡನೆಯನ್ನು ರದ್ದುಗೊಳಿಸುವ ಗುರಿಯೊಂದಿಗೆ, ಮರಣದಂಡನೆ ಜಾರಿಗೊಳಿಸುವುದನ್ನು ತಡೆಹಿಡಿಯುವಂತೆ (ಮೊರಟೋರಿಯಂ) ಈ ನಿರ್ಣಯ ಎಲ್ಲಾ ರಾಷ್ಟ್ರಗಳಿಗೆ ಕರೆ ನೀಡಿತು. ಅಲ್ಲದೆ, ಈಗಾಗಲೇ ಮರಣದಂಡನೆಯನ್ನು ರದ್ದುಗೊಳಿಸಿರುವ ರಾಷ್ಟ್ರಗಳು ಅದನ್ನು ಮರುಪರಿಚಯಿಸದಂತೆಯೂ ಮನವಿ ಮಾಡಿದೆ.
ಮರಣದಂಡನೆಯ ಬಳಕೆಯನ್ನು ಸೀಮಿತಗೊಳಿಸುವ ಜಾಗತಿಕ ಪ್ರವೃತ್ತಿಯಿದ್ದರೂ, 2025ರಲ್ಲಿ ಮರಣದಂಡನೆ ಜಾರಿಗೊಳಿಸಿದ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿರುವುದರ ಬಗ್ಗೆ ನಿರ್ಣಯವು ತೀವ್ರ ಕಳವಳ ವ್ಯಕ್ತಪಡಿಸಿತು.
ಮರಣದಂಡನೆಯ ಬಳಕೆಯನ್ನು ಹಂತ ಹಂತವಾಗಿ ಸೀಮಿತಗೊಳಿಸುವಂತೆ ಹಾಗೂ 18 ವರ್ಷದೊಳಗಿನ ವ್ಯಕ್ತಿಗಳು ಎಸಗಿದ ಅಪರಾಧಗಳಿಗೆ ಅಥವಾ ಅಪರಾಧ ನಡೆದ ಸಮಯದಲ್ಲಿ ಅವರ ವಯಸ್ಸು 18 ವರ್ಷಕ್ಕಿಂತ ಹೆಚ್ಚಿತ್ತೇ ಎಂದು ನಿಖರವಾಗಿ ನಿರ್ಧರಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಮರಣದಂಡನೆ ವಿಧಿಸದಂತೆ ಈ ನಿರ್ಣಯ ಎಲ್ಲಾ ರಾಷ್ಟ್ರಗಳಿಗೆ ಕರೆ ನೀಡಿತು.
ಅಲ್ಲದೆ, ಗರ್ಭಿಣಿಯರು, ಮಾನಸಿಕ ಅಥವಾ ಬೌದ್ಧಿಕ ನ್ಯೂನತೆ ಹೊಂದಿರುವವರು ಹಾಗೂ ವಯಸ್ಸಾದವರ ಮೇಲೆ ಮರಣದಂಡನೆ ವಿಧಿಸುವುದನ್ನು ನಿರ್ಬಂಧಿಸುವಂತೆಯೂ; ಮರಣದಂಡನೆಯನ್ನು ಕಡ್ಡಾಯವಾಗಿ ವಿಧಿಸಬೇಕೆಂಬ ನಿಯಮವನ್ನು ತೆಗೆದುಹಾಕುವ ಮೂಲಕ, ಮರಣದಂಡನೆ ವಿಧಿಸಬಹುದಾದ ಅಪರಾಧಗಳ ಸಂಖ್ಯೆಯನ್ನು ಕಡಿಮೆ ಮಾಡುವಂತೆಯೂ ಈ ನಿರ್ಣಯ ಒತ್ತಾಯಿಸಿದೆ.