

ಚೆನ್ನೈ: ಶಿಕ್ಷಕಿ ಹೇಳಿದ ಮಾತು ಕೇಳದೆ ಚೇಷ್ಟೆ ಮಾಡುತ್ತಿದ್ದ ಎಂಬ ಕಾರಣಕ್ಕೆ ಮೂರು ವರ್ಷದ ಪ್ರಿ-ಕೆಜಿ ವಿದ್ಯಾರ್ಥಿಯ ಕೈಗಳನ್ನು ಕಟ್ಟಿ, ವಿನೈಲ್ ಹಾಳೆಯಲ್ಲಿ ಸುತ್ತಿ ತರಗತಿಯಲ್ಲೇ ಇರಿಸಿದ ಅಮಾನವೀಯ ಘಟನೆ ತಮಿಳುನಾಡಿನ ತಿರುವಾರೂರು ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆಯ ಸಿಸಿಟಿವಿ ದೃಶ್ಯಗಳು ಹೊರಬಂದಿದ್ದು, ಬಾಲಕನಿಗೆ ಹಿಂಸೆ ನೀಡಿದ ಆರೋಪದ ಮೇಲೆ ಶಿಕ್ಷಕಿ ಮತ್ತು ಮಹಿಳಾ ಅಟೆಂಡರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತಮಿಳುನಾಡಿನ ತಿರುವಾರೂರು ಜಿಲ್ಲೆಯ ತಿರುತ್ತುರೈಪೂಂಡಿಯ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಗಳಲ್ಲಿ ಬಾಲಕನ ಕೈಗಳನ್ನು ಕಟ್ಟಿ ಹಾಕಿರುವುದು, ಆತ ಬಿಡಿಸಿಕೊಳ್ಳಲು ಒದ್ದಾಡುತ್ತಿರುವುದು ಕಂಡುಬಂದಿದೆ.
ಮತ್ತೊಂದು ದೃಶ್ಯದಲ್ಲಿ ಕೈಗೆ ಕಟ್ಟಿದ್ದ ಹಗ್ಗವನ್ನು ಬಾಯಿಯಿಂದ ಕಚ್ಚಿ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ. ಇನ್ನೊಂದು ದೃಶ್ಯದಲ್ಲಿ ಮಗು ನೋವಿನಿಂದ ಅಥವಾ ಅಸಹಾಯಕತೆಯಿಂದ ಕಿರುಚುತ್ತಿರುವುದು ದಾಖಲಾಗಿದೆ. ಈ ವೇಳೆ ತರಗತಿಯಲ್ಲಿ ಇತರ ಮಕ್ಕಳು ಮತ್ತು ಮಹಿಳೆಯೊಬ್ಬರು ಕುಳಿತಿರುವುದು ಕಂಡುಬಂದಿದೆ.
ಚೇಷ್ಟೆ ಮಾಡುತ್ತಿದ್ದ ಎಂದು ಕೈಕಟ್ಟಿ ಹಿಂಸೆ
ಪೊಲೀಸರ ಪ್ರಕಾರ, ಬಾಲಕ ಶಿಕ್ಷಕಿ ಹೇಳಿದ ಮಾತು ಕೇಳದೆ ಚೇಷ್ಟೆ ಮಾಡುತ್ತಿದ್ದ ಎಂಬ ಕಾರಣಕ್ಕೆ ಮಹಿಳಾ ಅಟೆಂಡರ್ ಆತನನ್ನು ವಿನೈಲ್ ಹಾಳೆಯಲ್ಲಿ ಸುತ್ತಿ, ಕೈಗಳನ್ನು ಕಟ್ಟಿ ಹಾಕಿದ್ದಾಳೆ ಎನ್ನಲಾಗಿದೆ.
"ಈ ಕೃತ್ಯಕ್ಕೆ ಅಟೆಂಡರ್ ಕಾರಣ. ಶಿಕ್ಷಕಿ ಎಲ್ಲವನ್ನೂ ನೋಡುತ್ತಿದ್ದರೂ ಸುಮ್ಮನಿದ್ದರು. ಮಗು ಶಿಕ್ಷಕಿ ಮಾತು ಕೇಳದೆ ಚೇಷ್ಟೆ ಮಾಡುತ್ತಿದ್ದ ಎಂಬ ಕಾರಣಕ್ಕೆ ಹೀಗೆ ಮಾಡಿದ್ದಾರೆ. ಹಾಳೆಯಲ್ಲಿ ಸುತ್ತುವಾಗ ಮಗು ಕೆಳಗೆ ಬಿದ್ದಿರಬಹುದು. ಇದರಿಂದ ಕಣ್ಣಿನ ಬಳಿಯಲ್ಲಿ ಗಾಯವಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯ ಪರಿಶೀಲಿಸಿ ದೂರು ನೀಡಿದ ತಂದೆ
ಶಾಲೆಯಿಂದ ಮನೆಗೆ ಬಂದ ಬಾಲಕನ ಮೈಮೇಲೆ ಗಾಯಗಳಿದ್ದವು. ಈ ಬಗ್ಗೆ ತಂದೆ ವಿಚಾರಿಸಿದಾಗ, ಶಿಕ್ಷಕಿ ಮತ್ತು ಮಹಿಳಾ ಅಟೆಂಡರ್ ಹೊಡೆದಿದ್ದಾರೆ ಎಂದು ಮಗು ತಿಳಿಸಿದೆ. ಇದರಿಂದ ಆತಂಕಗೊಂಡ ತಂದೆ ಶಾಲೆಗೆ ತೆರಳಿ ತರಗತಿಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.
ನಂತರ ತಮ್ಮ ಮೊಬೈಲ್‌ನಲ್ಲಿ ಸಿಸಿಟಿವಿ ದೃಶ್ಯಗಳನ್ನು ದಾಖಲಿಸಿಕೊಂಡು ತಿರುತ್ತುರೈಪೂಂಡಿ ಪೊಲೀಸ್ ಠಾಣೆಗೆ ತೆರಳಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಈ ಸಂಬಂಧ ಪೊಲೀಸರು ಶಿಕ್ಷಕಿ ಮತ್ತು ಮಹಿಳಾ ಅಟೆಂಡರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿ ಇಬ್ಬರು ಸಿಬ್ಬಂದಿಯನ್ನೂ ಕೆಲಸದಿಂದ ವಜಾಗೊಳಿಸಿದೆ ಎಂದು ವರದಿಯಾಗಿದೆ.