

ಬ್ರಹ್ಮಪುರ (ಒಡಿಶಾ): ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಅಕ್ವಾನ್ ಚಂಡಮಾರುತದ ಭೀಕರ ಪರಿಣಾಮ ಆಂಧ್ರಪ್ರದೇಶದ ಕಾಕಿನಾಡದ ಸುಮಾರು 80 ಮೀನುಗಾರರು ತಮ್ಮ 10 ಯಾಂತ್ರಿಕೃತ ದೋಣಿಗಳೊಂದಿಗೆ ಆಶ್ರಯ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ವಾನ್ ಚಂಡಮಾರುತದಿಂದ ಉಂಟಾದ ಸಮುದ್ರ ಪ್ರಕ್ಷುಬ್ಧತೆಯಿಂದಾಗಿ ಮೀನುಗಾರರು ಮನೆಗೆ ಮರಳಲು ಸಾಧ್ಯವಾಗುತ್ತಿಲ್ಲ. ಹವಾಮಾನ ಹದಗೆಟ್ಟಾಗ ಮೀನುಗಾರರು ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಪರಿಣಾಮ ಆರ್ಯಪಲ್ಲಿಯಲ್ಲಿರುವ ಮೀನು ಲ್ಯಾಂಡಿಂಗ್ ಕೇಂದ್ರದಲ್ಲಿ ಆಶ್ರಯ ಪಡೆಯಬೇಕಾಯಿತು ಎಂದು ಸಹಾಯಕ ಮೀನುಗಾರಿಕೆ ಅಧಿಕಾರಿ (ಸಾಗರ) ದೇವಿದತ್ ಮೊಹಂತಿ ಹೇಳಿದರು. ಗಂಜಾಂ ಜಿಲ್ಲಾಡಳಿತವು ಜೆಟ್ಟಿಯಲ್ಲಿ ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದೆ ಎಂದರು.
ಮೀನುಗಾರರು ತಮ್ಮ ದೋಣಿಗಳಲ್ಲಿ ಆಹಾರ ಮತ್ತು ನೀರಿನ ಸರಬರಾಜುಗಳನ್ನು ಹೊಂದಿದ್ದಾರೆ. ತಮ್ಮದೇ ಆದ ಆಹಾರವನ್ನು ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಮೊಹಂತಿ ಹೇಳಿದರು. ಸಮುದ್ರ ಪರಿಸ್ಥಿತಿ ಸುಧಾರಿಸಿದ ನಂತರ ಅವರು ಆಂಧ್ರಪ್ರದೇಶಕ್ಕೆ ಹಿಂತಿರುಗುತ್ತಾರೆ. ಜಿಲ್ಲಾಡಳಿತದ ಸೂಚನೆಗಳನ್ನು ಅನುಸರಿಸಿ, ಗಂಜಾಂ ಜಿಲ್ಲೆಯ ಎಲ್ಲಾ ಮೀನುಗಾರರು ಸೋಮವಾರ ಮಧ್ಯಾಹ್ನದ ವೇಳೆಗೆ ಸಮುದ್ರದಿಂದ ಹಿಂತಿರುಗಿದ್ದರು ಎಂದು ಮೊಹಾಂತಿ ಹೇಳಿದರು.
ಭಾರತೀಯ ಹವಾಮಾನ ಇಲಾಖೆ (IMD) ಚಂಡಮಾರುತದಿಂದಾಗಿ ಸಮುದ್ರದ ಪರಿಸ್ಥಿತಿ ಪ್ರಕ್ಷುಬ್ಧ ಅಥವಾ ತುಂಬಾ ಪ್ರಕ್ಷುಬ್ಧವಾಗಿರುತ್ತದೆ ಎಂದು ಮುನ್ಸೂಚನೆ ನೀಡಿದೆ. ನವೆಂಬರ್ 21ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಇದಕ್ಕೂ ಮೊದಲು, ಅಕ್ಟೋಬರ್ 28ರಂದು ಕರಾವಳಿಯನ್ನು ಅಪ್ಪಳಿಸಿದ ಅರ್ನಾಬ್ ಚಂಡಮಾರುತದ ಸಮಯದಲ್ಲಿ, ಆಂಧ್ರಪ್ರದೇಶ ಮತ್ತು ಪಾರಾದೀಪ್‌ನ 170ಕ್ಕೂ ಹೆಚ್ಚು ಮೀನುಗಾರರು ಗೋಪಾಲ್‌ಪುರ ಬಂದರು ಮತ್ತು ಆರ್ಯಪಲ್ಲಿಯಲ್ಲಿರುವ ಮೀನುಗಾರಿಕಾ ಜೆಟ್ಟಿಯಲ್ಲಿ ಆಶ್ರಯ ಪಡೆದಿದ್ದರು.