ಕಚ್ (ಗುಜರಾತ್): ಗುಜರಾತ್‌ನ ಕಚ್ ಜಿಲ್ಲೆಯ ಭುಜ್-ಖಾವ್ಡಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ಟ್ರೇಲರ್ ಟ್ರಕ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆ ಕುರಿತ ವರಿ ಇಲ್ಲಿದೆ:
ಘಟನೆಯ ಹಿನ್ನೆಲೆ ಏನು?
ಮೃತರೆಲ್ಲರೂ ಉತ್ತರಾಖಂಡದ ಗರ್ವಾಲ್ ಮೂಲದವರಾಗಿದ್ದು, ಭುಜ್‌ನಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೇನಾ ಯೋಧರೊಬ್ಬರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರಾಗಿದ್ದಾರೆ. ರಣ್ ಆಫ್ ಕಚ್ ಪ್ರವಾಸ ಮುಗಿಸಿ ಶನಿವಾರ ರಾತ್ರಿ 9:30 ರಿಂದ 10 ಗಂಟೆಯ ಸುಮಾರಿಗೆ ಕಾರಿನಲ್ಲಿ ಭುಜ್‌ಗೆ ಹಿಂತಿರುಗುತ್ತಿದ್ದಾಗ, ವಿರುದ್ಧ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ಟ್ರೇಲರ್ ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಎರಡು ತುಂಡುಗಳಾಗಿದ್ದು, ನಜ್ಜುಗುಜ್ಜಾದ ವಾಹನದಿಂದ ಮೃತದೇಹಗಳನ್ನು ಹೊರತೆಗೆಯಲು ರಕ್ಷಣಾ ತಂಡಗಳಿಗೆ ಗಂಟೆಗಟ್ಟಲೆ ಸಮಯ ಹಿಡಿಯಿತು ಎನ್ನಲಾಗಿದೆ.
ಮುಂದುವರೆದು, ಅಪಘಾತದಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಮೃತರನ್ನು ಸೌರಭ್ ಸಿಂಗ್ ನೇಗಿ (30-32), ಅವರ ಪತ್ನಿ ಸವಿತಾ ಮತ್ತು ಅವರ 3 ತಿಂಗಳ ಮಗು ಸಿವಿಕಾ; ರಾಜೇಶ್ ಸಿಂಗ್ ರಾವತ್ (35) ಮತ್ತು ಅವರ 7 ವರ್ಷದ ಮಗಳು ರಕ್ಷಿತಾ; ರಿಂಕಿ ಗೋಸೈನ್ (30) ಮತ್ತು ಅವರ 4 ವರ್ಷದ ಮಗಳು ವಾಮಿಕಾ ಎಂದು ಗುರುತಿಸಲಾಗಿದೆ. ಇನ್ನು, ಘಟನೆ ನಡೆದ ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಭುಜ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸೇನಾ ಅಧಿಕಾರಿಗಳೂ ಆಸ್ಪತ್ರೆಗೆ ಭೇಟಿ ನೀಡಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿಯಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.