

ಜೈಪುರ (ರಾಜಸ್ಥಾನ): ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಭಾರಿ ರಾಜಕೀಯ ಸಚಲನ ಉಂಟಾಗಿದ್ದು, ಮಾಜಿ ಸಚಿವ ಹಾಗೂ ಭರತ್‌ಪುರ ರಾಜಮನೆತನದ ಮಹಾರಾಜ ವಿಶ್ವೇಂದ್ರ ಸಿಂಗ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡುವ ಮುನ್ನ, "ಇಂತಹ ವಾತಾವರಣದಲ್ಲಿ ಉಸಿರುಗಟ್ಟಿ ಬದುಕುವ ಬದಲು, ಆತ್ಮಗೌರವದೊಂದಿಗೆ ಸಾಯುವುದೇ ಲೇಸು" ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಉಸಿರುಗಟ್ಟಿ ಬದುಕುವುದಕ್ಕಿಂತ ಸಾಯುವುದೇ ಲೇಸು
ರಾಜೀನಾಮೆ ನೀಡುವ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕ ಪತ್ರ ಹಂಚಿಕೊಂಡಿರುವ ವಿಶ್ವೇಂದ್ರ ಸಿಂಗ್ ಅವರು, ಪಕ್ಷದೊಳಗಿನ ಸದ್ಯದ ಪರಿಸ್ಥಿತಿಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. "ಇಂತಹ ವಾತಾವರಣದಲ್ಲಿ ಉಸಿರುಗಟ್ಟಿ ಬದುಕುವ ಬದಲು, ಆತ್ಮಗೌರವದೊಂದಿಗೆ ಸಾಯುವುದೇ ಲೇಸು. ನನ್ನ ಪೂರ್ವಜರು ಎಂದಿಗೂ ಇಂತಹ ಪರಿಸ್ಥಿತಿಗಳೊಂದಿಗೆ ರಾಜಿ ಮಾಡಿಕೊಂಡಿರಲಿಲ್ಲ. ಅವರ ಹಾದಿಯಲ್ಲೇ ನಡೆದು ನಾನು ಕಾಂಗ್ರೆಸ್‌ಗೆ ಗುಡ್‌ಬೈ ಹೇಳುತ್ತಿದ್ದೇನೆ" ಎಂದು ಅವರು ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ.
ಹಾಗಾದ್ರೆ, ರಾಜೀನಾಮೆಗೆ ಕಾರಣವೇನು?
ಇತ್ತೀಚೆಗೆ ನಡೆದ ರಾಜಸ್ಥಾನದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭರತ್‌ಪುರ ಮತ್ತು ಡಿಗ್ ಜಿಲ್ಲೆಗಳಲ್ಲಿ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ, ನಾಯಕರ ಆಪ್ತರಿಗೆ ಟಿಕೆಟ್ ಹಂಚಿಕೆ ಮಾಡಲಾಗಿತ್ತು. ಇದರಿಂದ ಪಕ್ಷ ಭಾರಿ ಹಿನ್ನಡೆ ಅನುಭವಿಸಿತು ಎಂದು ವಿಶ್ವೇಂದ್ರ ಸಿಂಗ್ ಆರೋಪಿಸಿದ್ದರು. ಈ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವೇಂದ್ರ ಸಿಂಗ್ ಅವರು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಅವರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿ, ಅವರ ರಾಜೀನಾಮೆಗೆ ಆಗ್ರಹಿಸಿದ್ದರು. ಜೊತೆಗೆ ದೋತಾಸ್ರಾ ಅವರು ಶಿಕ್ಷಣ ಸಚಿವರಾಗಿದ್ದಾಗ ನಡೆದಿದೆ ಎನ್ನಲಾದ ರೀಟ್ ಪರೀಕ್ಷಾ ಹಗರಣ ಹಾಗೂ ಅವರ ಕುಟುಂಬದವರಿಗೆ ಆರ್‌ಎಎಸ್ ಹುದ್ದೆಗಳ ನೇಮಕಾತಿಯಲ್ಲಿ ಅನುಕೂಲ ಮಾಡಿಕೊಟ್ಟಿರುವ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು.
ಮುಂದುವರೆದು, ರಾಜ್ಯ ನಾಯಕತ್ವದ ವಿರುದ್ಧ ತೀವ್ರವಾಗಿ ಮಾತನಾಡಿದ್ದಕ್ಕಾಗಿ ರಾಜಸ್ಥಾನ ಕಾಂಗ್ರೆಸ್ ಘಟಕವು ವಿಶ್ವೇಂದ್ರ ಸಿಂಗ್ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಹೈಕಮಾಂಡ್‌ಗೆ ಶಿಫಾರಸು ಮಾಡಿತ್ತು. ಆದರೆ, ಪಕ್ಷ ತನ್ನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಮುನ್ನವೇ ಅವರು ತಾವಾಗಿಯೇ ರಾಜೀನಾಮೆ ಪ್ರಕಟಿಸಿದ್ದಾರೆ. ಮತ್ತೊಂದೆಡೆ, ವಿಶ್ವೇಂದ್ರ ಸಿಂಗ್ ಅವರ ಆರೋಪಗಳನ್ನು ತಳ್ಳಿಹಾಕಿರುವ ಪಿಸಿಸಿ ಅಧ್ಯಕ್ಷ ದೋತಾಸ್ರಾ, ಇವೆಲ್ಲವೂ ಬಿಜೆಪಿಯ ಟೂಲ್‌ಕಿಟ್ ಮತ್ತು ಪಕ್ಷದಲ್ಲಿ ಬಿರುಕು ಮೂಡಿಸಲು ಮಾಡುತ್ತಿರುವ ಪ್ರಚಾರ ಎಂದು ಹೇಳಿದ್ದಾರೆ.
ಬಿಜೆಪಿ ಸೇರುವ ಸಾಧ್ಯತೆ?
ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಸಂಪುಟದಲ್ಲಿ ಸಚಿವರಾಗಿದ್ದ ವಿಶ್ವೇಂದ್ರ ಸಿಂಗ್ ಅವರು ಈ ಹಿಂದೆ 2020 ರಲ್ಲಿ ಸಚಿನ್ ಪೈಲಟ್ ಅವರ ಬಂಡಾಯದ ಸಮಯದಲ್ಲೂ ಕಾಂಗ್ರೆಸ್‌ನಿಂದ ಅಮಾನತುಗೊಂಡಿದ್ದರು. ಈಗ ಅವರು ಸಂಪೂರ್ಣವಾಗಿ ಪಕ್ಷ ತೊರೆದಿರುವುದರಿಂದ ಅವರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳು ರಾಜಸ್ಥಾನದ ರಾಜಕೀಯ ವಲಯದಲ್ಲಿ ದಟ್ಟವಾಗಿವೆ.