ನಿನ್ನ ಜಾತಿ ಯಾವುದು ಎಂದು ಕೇಳಿ ರೈತನಿಗೆ SC/ST ಕೇಸ್ ಬೆದರಿಕೆ: ಯುಪಿ ಅಧಿಕಾರಿಯ ವಿಡಿಯೋ ವೈರಲ್!

ಜಮೀನಿನ ಗಡಿ ಅಳೆಯಲು ಹೋದ ಕಂದಾಯ ಅಧಿಕಾರಿಯೊಬ್ಬರು ರೈತನ ಜಾತಿ ಕೇಳಿ, ಆತ ಮೇಲ್ಜಾತಿಯವನು ಎಂದು ತಿಳಿಯುತ್ತಿದ್ದಂತೆಯೇ ಆತನ ಮೇಲೆ ಎಸ್‌ಸಿ/ಎಸ್‌ಟಿ ಕೇಸ್ ದಾಖಲಿಸುವಂತೆ ಬೆದರಿಕೆ ಹಾಕಿರುವ ವಿಡಿಯೋವೊಂದು ಇದೀಗ ಇಂಟರ್‌ನೆಟ್‌ನಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಆ ಕುರಿತ ವರದಿ ಇಲ್ಲಿದೆ:
Viral Video: UP Revenue Official Threatens Farmer With SC/ST Act Case Over Land Dispute, Probe Ordered
ನಿನ್ನ ಜಾತಿ ಯಾವುದು ಎಂದು ಕೇಳಿ ರೈತನಿಗೆ SC/ST ಕೇಸ್ ಬೆದರಿಕೆOnline Desk
Updated on: 

ಹರ್ದೋಯ್ (ಉತ್ತರ ಪ್ರದೇಶ): ಸ್ವಾತಂತ್ರ್ಯ ಬಂದು 80 ವರ್ಷವಾದ್ರೂ ಭಾರತದಲ್ಲಿ ಜಾತಿ ಪದ್ದತಿ ಇನ್ನೂ ಜೀವಂತವಾಗಿದೆ. ಹಾಗಾಗಿ, ಸರ್ಕಾರ SC ಮತ್ತು ST ಸಮುದಾಯಗಳ ಮೇಲಿನ ದೌರ್ಜನ್ಯ, ಕಿರುಕುಳ ಹಾಗೂ ಸಾಮಾಜಿಕ ತಾರತಮ್ಯವನ್ನು ತಡೆಯಲು SC/ST (ದೌರ್ಜನ್ಯ ತಡೆ) ಕಾಯಿದೆಯನ್ನ ಜಾರಿಗೆ ತಂದಿತು. ಆದರೂ ಇನ್ನೂ ಎಷ್ಟೋ ಪ್ರದೇಶಗಳಲ್ಲಿ ದೌರ್ಜನ್ಯ ಸಾಮಾನ್ಯವಾಗಿದ್ದು, ಇದನ್ನ ತಡೆಯಲು ಸರ್ಕಾರಗಳು ಹಾಗೂ ವಿವಿಧ ಸಂಘಟನೆಗಳು ಕೆಲಸ ಮಾಡುತ್ತಿವೆ. ಮತ್ತೊಂದೆಡೆ, SC/ST (ದೌರ್ಜನ್ಯ ತಡೆ) ಕಾಯಿದೆಯ ದೂರಪಯೋಗದ ಕುರಿತು ಸಹ ವಿವಾದಗಳು ಇದೆ. ಅದಕ್ಕೆ ಸ್ಪಷ್ಟ ಉದಾಹರಣೆ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ನಡೆದಿರುವ ಘಟನೆ!

ಹೌದು, ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ಭೂಮಿಯ ಅಳತೆ (ಪೆಮಾಯಿಶ್) ಮಾಡುವಾಗ ಕಂದಾಯ ಅಧಿಕಾರಿ (ಲೇಖಪಾಲ್) ಒಬ್ಬರು ರೈತರೊಬ್ಬರಿಗೆ SC/ST ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿರುವ 48 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಷ್ಟ್ರಮಟ್ಟದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯ ಬೆನ್ನಲ್ಲೇ ದೇಶದಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ದುರುಪಯೋಗವನ್ನು ತಡೆಯಲು ತಕ್ಷಣವೇ ಕಾನೂನು ಸುಧಾರಣೆ ತರಬೇಕೆಂಬ ಆಗ್ರಹಗಳು ಮತ್ತೆ ಮುಂಚೂಣಿಗೆ ಬಂದಿವೆ. ಆ ಕುರಿತ ವರದಿ ಇಲ್ಲಿದೆ:

ಏನಿದು ವಿವಾದ?

ಹರ್ದೋಯ್‌ನ ಸಖೌರಾ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ರಾಮ್‌ಸಾಗರ್ ಪಾಸಿ ಎಂಬುವವರ ಭೂಮಿಯ ಅಳತೆಗಾಗಿ ನಯಾಬ್ ತಹಶೀಲ್ದಾರ್ ನೇತೃತ್ವದ ಕಂದಾಯ ತಂಡ ಹೋಗಿತ್ತು. ಈ ವೇಳೆ ಅಲ್ಲಿ ಬಂದ ಗೌರವ್ ಪಾಂಡೆ ಎಂಬ ಬ್ರಾಹ್ಮಣ ಯುವಕ ಭೂಮಿಯ ಹಕ್ಕನ್ನು ಪ್ರತಿಪಾದಿಸಿ, ಸಂಪೂರ್ಣ ಅಳತೆ ಮಾಡುವಂತೆ ಕೋರಿದ್ದರು. ಅದರಂತೆ, ಜಮೀನಿನ ಗಡಿ ವಿವಾದವನ್ನು ಬಗೆಹರಿಸಲು ಕಂದಾಯ ಇಲಾಖೆಯ ಅಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿದ್ದಾಗ, ಕಂದಾಯ ಅಧಿಕಾರಿ ಆಲೋಕ್ ತ್ರಿಪಾಠಿ ಎನ್ನಲಾದ ವ್ಯಕ್ತಿ ರೈತನಿಗೆ "ನಿನ್ನ ಜಾತಿ ಯಾವುದು?" ಎಂದು ಪ್ರಶ್ನಿಸುತ್ತಾನೆ. ರೈತ ತಾನು 'ಪಾಂಡೆ' (ಮೇಲ್ಜಾತಿ) ಎಂದು ಉತ್ತರಿಸಿದಾಗ ಮತ್ತು ಎದುರು ಪಕ್ಷದವರು 'ಪಾಸಿ' (ಪರಿಶಿಷ್ಟ ಜಾತಿ) ಎಂದು ತಿಳಿದ ತಕ್ಷಣ, ಅಧಿಕಾರಿ ತನ್ನ ಸಹೋದ್ಯೋಗಿಗಳಿಗೆ "ಇವನ ಮೇಲೆ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಕೇಸ್ ಹಾಕಿ" ಎಂದು ಸೂಚನೆ ನೀಡುತ್ತಿರುವುದು ದಾಖಲಾಗಿದೆ.

ಇನ್ನು, ವಿಡಿಯೋ ವೈರಲ್ ಆದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಲೇಖಪಾಲ್ ಅಲೋಕ್ ತ್ರಿಪಾಠಿ, ತಾವು ಯಾರಿಗೂ ಬೆದರಿಕೆ ಹಾಕಿಲ್ಲ ಎಂದು ಆರೋಪ ನಿರಾಕರಿಸಿದ್ದು, "ಅಲ್ಲಿ ಪರಿಶಿಷ್ಟ ಜಾತಿಯ ಜಮೀನುದಾರನಿಗೆ ಜೀವ ಬೆದರಿಕೆ ಹಾಕಲಾಗುತ್ತಿತ್ತು. ನಾವು ಕೇವಲ ಎರಡೂ ಪಕ್ಷಗಳ ನಡುವೆ ಸಂಧಾನ ಮಾಡಲು ಯತ್ನಿಸುತ್ತಿದ್ದೆವು" ಎಂದು ಹೇಳಿಕೊಂಡಿದ್ದಾರೆ. ಜೊತೆಗೆ, ವಿಡಿಯೋ ಭಾರಿ ವಿವಾದ ಸೃಷ್ಟಿಸುತ್ತಿದ್ದಂತೆ ಹರ್ದೋಯ್ ಜಿಲ್ಲಾಡಳಿತವು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಎಸ್‌ಡಿಎಂ ಮಯಂಕ್ ಕುಂಡು ಅವರು ಅಧಿಕಾರಿಯ ಈ ನಡೆಯನ್ನು ತಪ್ಪು ಎಂದು ಖಂಡಿಸಿದ್ದು, ತಹಶೀಲ್ದಾರ್ ಸಚಿನ್ ಶುಕ್ಲಾ ಅವರಿಗೆ 2 ದಿನಗಳಲ್ಲಿ ಸಮಗ್ರ ತನಿಖಾ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ. ಅದರಂತೆ, ವರದಿ ಬಂದ ಬಳಿಕ ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Viral Video: UP Revenue Official Threatens Farmer With SC/ST Act Case Over Land Dispute, Probe Ordered
'ನಿಮಗೆ ಚಹಾ ಮಾರುವಂತೆ ನಾವು ಕೇಳಿದ್ದೆವಾ': ಪ್ರಧಾನಿ ಮೋದಿ ವಿರುದ್ಧ ಅಭಿಜೀತ್ ದೀಪ್ಕೆ ತೀವ್ರ ವಾಗ್ದಾಳಿ; Video

ಏತನ್ಮಧ್ಯೆ, ವಿಡಿಯೋ ವೈರಲ್ ಆಗುತ್ತಿದ್ದಂತೆ, ವೈಯಕ್ತಿಕ ಅಥವಾ ಭೂಮಿ ವಿವಾದಗಳಂತಹ ಸಾಮಾನ್ಯ ಪ್ರಕರಣಗಳಲ್ಲಿ ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ಒಂದು ಅಸ್ತ್ರವಾಗಿ ಬಳಸಿ ಜನರನ್ನು ಸಿಲುಕಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದರೊಂದಿಗೆ, ಕಾನೂನು ತಜ್ಞರು ಮತ್ತು ಸಂಘಟನೆಗಳು ಈ ಕಾಯ್ದೆಯ ದುರುಪಯೋಗವನ್ನು ತಡೆಯಲು ಪ್ರಾಥಮಿಕ ತನಿಖೆ ಕಡ್ಡಾಯಗೊಳಿಸಬೇಕು ಮತ್ತು ಕಟ್ಟುನಿಟ್ಟಿನ ಸಾಕ್ಷ್ಯಾಧಾರಗಳ ಪರಿಶೀಲನೆ ನಡೆಸುವಂತಹ ಸಾಂಸ್ಥಿಕ ಸುಧಾರಣೆಗಳನ್ನು ತರಬೇಕು ಎಂದು ಆಗ್ರಹಿಸುತ್ತಿದ್ದು, ಇಂತಹ ಸುಳ್ಳು ಪ್ರಕರಣಗಳಿಂದ ಅಮಾಯಕರು ಬಲಿಯಾಗುವುದನ್ನು ತಡೆದು, ತಪ್ಪು ದೂರು ನೀಡುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ಕಾನೂನಿನಲ್ಲಿ ತಿದ್ದುಪಡಿ ತರಬೇಕು ಎಂಬ ಚರ್ಚೆಗಳು ರಾಷ್ಟ್ರಮಟ್ಟದಲ್ಲಿ ತೀವ್ರಗೊಂಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com