ಅಂಬೇಡ್ಕರ್ ಬಗ್ಗೆ ತಪ್ಪು-ತಪ್ಪು ಹೇಳಿಕೆ ನೀಡಬೇಡಿ, ಕ್ಷಮೆಯಾಚಿಸಿ’: Abhijeet Dipkeಗೆ ರಾಮದಾಸ್ ಅಠಾವಳೆ ಖಡಕ್ ವಾರ್ನಿಂಗ್!

ಶನಿವಾರ ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಠಾವಳೆ, ದಿಪ್ಕೆ ಇಂತಹ ಹೇಳಿಕೆಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (RPI) ವತಿಯಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Ramdas Athawale warns Abhijeet Dipke
ಅಭಿಜಿತ್ ದಿಪ್ಕೆ ಮತ್ತು ರಾಮದಾಸ್ ಅಠಾವಳೆ
Updated on: 

ಮುಂಬೈ: ಡಾ. ಬಿ.ಆರ್. ಅಂಬೇಡ್ಕರ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎನ್ನಲಾದ ‘ಕಾಕ್‌ರೋಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭಿಜಿತ್ ದಿಪ್ಕೆ ವಿರುದ್ಧ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಠಾವಳೆ, ದಿಪ್ಕೆ ಇಂತಹ ಹೇಳಿಕೆಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (RPI) ವತಿಯಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಡಾ. ಬಿ.ಆರ್. ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆಗೆ ದಿಪ್ಕೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಂಬೇಡ್ಕರ್ ಬಗ್ಗೆ ಹೇಳಿಕೆಗೆ ಅಠಾವಳೆ ಆಕ್ಷೇಪ

ಜವಾಹರಲಾಲ್ ನೆಹರು ಅವರು ಅಂಬೇಡ್ಕರ್ ಅವರನ್ನು ಮುನ್ನೆಲೆಗೆ ತಂದರು ಎಂಬರ್ಥದ ಹೇಳಿಕೆಯನ್ನು ದಿಪ್ಕೆ ನೀಡಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಅಠಾವಳೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

“ಅಭಿಜಿತ್ ದಿಪ್ಕೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ ತಪ್ಪು ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಬಗ್ಗೆಯೂ ಅತ್ಯಂತ ಆಕ್ಷೇಪಾರ್ಹ ಮತ್ತು ಅಗೌರವದ ಹೇಳಿಕೆಗಳನ್ನು ನೀಡಿದ್ದಾರೆ. ಅವರು ಇಂತಹ ಹೇಳಿಕೆಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಆರ್‌ಪಿಐ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ” ಎಂದು ಅಠಾವಳೆ ಹೇಳಿದ್ದಾರೆ.

ಅಂಬೇಡ್ಕರ್ ಅವರು ಭಾರತದ ಸಂವಿಧಾನ ರಚನೆ ಸೇರಿದಂತೆ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಕೊಡುಗೆಯನ್ನು ಕಡೆಗಣಿಸುವ ರೀತಿಯಲ್ಲಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಅಠಾವಳೆ ಹೇಳಿದ್ದಾರೆ.

ದಿಪ್ಕೆ ಅವರಿಗೆ ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ಬೆಂಬಲವಿದೆ. ಆ ಬೆಂಬಲವನ್ನು ಸಾರ್ವಜನಿಕ ಸಮಸ್ಯೆಗಳನ್ನು ಎತ್ತಿಹಿಡಿಯಲು ಬಳಸಬೇಕು ಹೊರತು ಪ್ರಮುಖ ವ್ಯಕ್ತಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ವಿರುದ್ಧ ಅನಗತ್ಯ ಹೇಳಿಕೆಗಳನ್ನು ನೀಡಲು ಬಳಸಬಾರದು ಎಂದು ಅಠಾವಳೆ ಸಲಹೆ ನೀಡಿದ್ದಾರೆ.

Ramdas Athawale warns Abhijeet Dipke
'ನಿಮಗೆ ಚಹಾ ಮಾರುವಂತೆ ನಾವು ಕೇಳಿದ್ದೆವಾ': ಪ್ರಧಾನಿ ಮೋದಿ ವಿರುದ್ಧ ಅಭಿಜೀತ್ ದೀಪ್ಕೆ ತೀವ್ರ ವಾಗ್ದಾಳಿ; Video

ಮೋದಿ, ಫಡ್ನವೀಸ್ ಬಗ್ಗೆಯೂ ಹೇಳಿಕೆಗೆ ವಿರೋಧ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಸಮರ್ಥಿಸಿಕೊಂಡ ಅಠಾವಳೆ, ಮೋದಿ ಅವರು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.

'ಮಹಾರಾಷ್ಟ್ರದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿರುವ ದಿಪ್ಕೆ, ರಾಜ್ಯದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿಯನ್ನೂ ಗಮನಿಸಬೇಕು. ಚುನಾಯಿತ ನಾಯಕರ ವಿರುದ್ಧ ಅಗೌರವದ ಹೇಳಿಕೆಗಳನ್ನು ನೀಡುವುದನ್ನು ಅವರು ನಿಲ್ಲಿಸಬೇಕು. ರಾಜಕೀಯ ನಾಯಕರನ್ನು ಟೀಕಿಸುವುದು ಪ್ರಜಾಪ್ರಭುತ್ವದಲ್ಲಿ ಸಹಜ. ಆದರೆ ಜವಾಬ್ದಾರಿಯುತ ಸಾರ್ವಜನಿಕ ಚರ್ಚೆಯ ಎಲ್ಲೆ ಮೀರಬಾರದು' ಎಂದು ಅವರು ಹೇಳಿದ್ದಾರೆ.

ಆಗಸ್ಟ್‌ನಲ್ಲೂ ನಡೆದಿತ್ತು ವಾಕ್ಸಮರ

ಅಠಾವಳೆ ಮತ್ತು ದಿಪ್ಕೆ ನಡುವಿನ ವಾಕ್ಸಮರ ಇದೇ ಮೊದಲಲ್ಲ. ಆಗಸ್ಟ್ 17ರಂದು ಅಠಾವಳೆ ಅವರು ದಿಪ್ಕೆಯನ್ನು ತಮ್ಮ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ)ಗೆ ಸೇರುವಂತೆ ಆಹ್ವಾನಿಸಿದ್ದರು. ದಿಪ್ಕೆ ಅಂಬೇಡ್ಕರ್‌ವಾದಿ ಹಾಗೂ ಯುವ ನಾಯಕನಾಗಿದ್ದು, ಅವರು ತಮ್ಮ ಪಕ್ಷಕ್ಕೆ ಸೇರಿದರೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸನ್ನು ಈಡೇರಿಸಲು ಹೆಚ್ಚು ಕೆಲಸ ಮಾಡಬಹುದು ಎಂದು ಅಠಾವಳೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ದಿಪ್ಕೆ, ಅಠಾವಳೆ ಅವರ ನಿಲುವಿನ ಬದಲಾವಣೆಯನ್ನು ಪ್ರಶ್ನಿಸಿದ್ದರು.

‘ಸ್ಕೂಲ್ ಠೀಕ್ ಕರೋ’ ಅಭಿಯಾನ

ಇತ್ತ ಅಭಿಜಿತ್ ದಿಪ್ಕೆ ಮಹಾರಾಷ್ಟ್ರದ ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ‘ಸ್ಕೂಲ್ ಠೀಕ್ ಕರೋ’ ಅಭಿಯಾನ ನಡೆಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿನ ಸಮಸ್ಯೆಗಳನ್ನು ತೋರಿಸುವ ವಿಡಿಯೋಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಜಿಲ್ಲಾ ಪಂಚಾಯತ್ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ತರಗತಿ ಕೊಠಡಿಯಲ್ಲೇ ಮದ್ಯ ಸೇವಿಸಿ ಮಲಗಿದ್ದರು ಎಂದು ಆರೋಪಿಸಲಾದ ವಿಡಿಯೋವನ್ನು ದಿಪ್ಕೆ ಹಂಚಿಕೊಂಡ ಬಳಿಕ, ಮಹಾರಾಷ್ಟ್ರದ ಅಧಿಕಾರಿಗಳು ಶಿಕ್ಷಕರೊಬ್ಬರನ್ನು ಅಮಾನತುಗೊಳಿಸಿದ್ದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದಿರುವ ಬಗ್ಗೆಯೂ ದಿಪ್ಕೆ ಸರ್ಕಾರವನ್ನು ಟೀಕಿಸಿದ್ದಾರೆ. ಮಕ್ಕಳು ಶಾಲೆಗೆ ತೆರಳಲು ಹಲವು ಕಿಲೋಮೀಟರ್ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ ಎಂದು ಅವರು ಆರೋಪಿಸಿದ್ದಾರೆ.

ಶಿಕ್ಷಣ ಇಲಾಖೆಯ ಅಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲೇ ಓದಿಸುವುದನ್ನು ಕಡ್ಡಾಯಗೊಳಿಸಬೇಕು ಹಾಗೂ ಸಚಿವರು ಮತ್ತು ರಾಜಕಾರಣಿಗಳು ಕನಿಷ್ಠ ಒಂದು ದಿನವಾದರೂ ತಮ್ಮ ಮಕ್ಕಳನ್ನು ಗ್ರಾಮೀಣ ಸರ್ಕಾರಿ ಶಾಲೆಗೆ ಕಳುಹಿಸಿ ಅಲ್ಲಿನ ಸಮಸ್ಯೆಗಳನ್ನು ಅರಿಯಬೇಕು ಎಂದು ದಿಪ್ಕೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com