‘ಇದಕ್ಕಿಂತ ಮುಂದೆ ಕೊಡು-ಕೊಳ್ಳುವಿಕೆ ತುಂಬಾ ಕಷ್ಟ’: ಭಾರತ-ಅಮೆರಿಕ ವ್ಯಾಪಾರ ಮಾತುಕತೆ ನಿರ್ದಿಷ್ಟ ಹಂತದಲ್ಲಿ ಸ್ಥಗಿತಗೊಂಡಿದೆ ಎಂದ ನಿರ್ಮಲಾ ಸೀತಾರಾಮನ್

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಆ ನಿರ್ದಿಷ್ಟ ಹಂತವನ್ನು ಮೀರಿ ಎರಡೂ ದೇಶಗಳು ಪರಸ್ಪರ ಹೆಚ್ಚಿನ ರಿಯಾಯಿತಿ ನೀಡುವುದು ಅಥವಾ ಪಡೆಯುವುದು ತುಂಬಾ, ತುಂಬಾ ಕಷ್ಟವಾಗಲಿದೆ ಎಂದು ಹೇಳಿದರು.
Finance Minister Nirmala Sitharaman(L), Union Commerce and Industry Minister Piyush Goyal with US Trade Representative Jamieson Greer
ನಿರ್ಮಲಾ ಸೀತಾರಾಮನ್, ಬಲ ಚಿತ್ರದಲ್ಲಿ ಪಿಯೂಷ್ ಗೋಯಲ್ ಮತ್ತು ಜೇಮಿಸನ್ ಗ್ರೀರ್
Updated on: 

ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಮಾತುಕತೆಗಳು ಒಂದು ಹಂತಕ್ಕೆ ಬಂದು ಸ್ಥಗಿತಗೊಂಡಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪ್ರಮುಖ ವಿಚಾರವೊಂದರಲ್ಲಿ ಎರಡೂ ದೇಶಗಳು ಮುಂದುವರಿಯಲು ಸಾಧ್ಯವಾಗದ ಸ್ಥಿತಿಗೆ ತಲುಪಿರುವುದನ್ನು ಅವರ ಹೇಳಿಕೆ ಸೂಚಿಸುತ್ತದೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಆ ನಿರ್ದಿಷ್ಟ ಹಂತವನ್ನು ಮೀರಿ ಎರಡೂ ದೇಶಗಳು ಪರಸ್ಪರ ಹೆಚ್ಚಿನ ರಿಯಾಯಿತಿ ನೀಡುವುದು ಅಥವಾ ಪಡೆಯುವುದು ತುಂಬಾ, ತುಂಬಾ ಕಷ್ಟವಾಗಲಿದೆ ಎಂದು ಹೇಳಿದರು.

ಮಾತುಕತೆ ಮುಂದುವರಿಸಲು ಎರಡೂ ಕಡೆಯವರಿಗೆ ಅವಕಾಶಗಳಿದ್ದರೆ, ಎರಡೂ ದೇಶಗಳು ಅದನ್ನು ಬಳಸಿಕೊಳ್ಳಲಿವೆ ಎಂದು ಹೇಳಿದರು.

ಕಳೆದ ವಾರ ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್, ಭಾರತದೊಂದಿಗಿನ ವ್ಯಾಪಾರ ಒಪ್ಪಂದದ ಕುರಿತು ತಕ್ಷಣಕ್ಕೆ ಏನಾದರೂ ಆಗಲಿದೆ ಎಂದು ತಾವು ಭಾವಿಸುವುದಿಲ್ಲ ಎಂದು ಹೇಳಿದ್ದರು. ಎರಡೂ ದೇಶಗಳು ಒಪ್ಪಂದಕ್ಕೆ ಅಡ್ಡಿಯಾಗಿರುವ ಎಲ್ಲಾ ಪ್ರಮುಖ ವಿಚಾರಗಳನ್ನು ಗುರುತಿಸಿವೆ ಎಂದೂ ತಿಳಿಸಿದ್ದರು.

ಕೆಲವು ದಿನಗಳ ಹಿಂದೆ ನಡೆದ ಜಿ20 ವ್ಯಾಪಾರ ಸಚಿವರ ಸಭೆಯ ಸಂದರ್ಭದಲ್ಲಿ ಗ್ರೀರ್ ಅವರು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿದ್ದರು. ಪರಸ್ಪರ ಲಾಭದಾಯಕ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಶೀಘ್ರವಾಗಿ ಅಂತಿಮಗೊಳಿಸುವ ಕುರಿತು ಇಬ್ಬರೂ ಫಲಪ್ರದ ಚರ್ಚೆ ನಡೆಸಿದ್ದಾರೆ ಎಂದು ಗ್ರೀರ್ ಹೇಳಿದ್ದರು.

ಭಾರತ ಮತ್ತು ಅಮೆರಿಕ ಕಳೆದ ವರ್ಷದ ಆರಂಭದಿಂದ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಸುತ್ತಿವೆ. ಆದರೆ ಅಮೆರಿಕದಿಂದ ಸುಂಕ ವಿಧಿಸುವ ನಿರಂತರ ಬೆದರಿಕೆಯ ಹಿನ್ನೆಲೆಯಲ್ಲಿ ಮಾತುಕತೆ ಹಲವು ಸವಾಲುಗಳನ್ನು ಎದುರಿಸಿದೆ.

ಉಭಯ ದೇಶಗಳ ನಡುವಿನ ವ್ಯಾಪಾರ ಸಮತೋಲನ ಭಾರತಕ್ಕೆ ಅನುಕೂಲಕರವಾಗಿದ್ದು, ವ್ಯಾಪಾರ ಕೊರತೆ ಅಮೆರಿಕದ ಪಾಲಿಗಿದೆ. ಈ ಅಸಮತೋಲನವನ್ನು ಕಡಿಮೆ ಮಾಡಲು ಅವರು ಬಯಸುತ್ತಾರೆ ಎಂದು ಹೇಳಿದರು.

ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಭಾರತವು ಇನ್ನಷ್ಟು ಉತ್ತಮ ಷರತ್ತುಗಳಿಗಾಗಿ ಪಟ್ಟು ಹಿಡಿದಿದೆ ಎಂಬ ವರದಿಗಳು ಈ ಹಿಂದೆ ಪ್ರಕಟವಾಗಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com