

ಸೂರತ್: ಗುಜರಾತ್‌ನ ಸೂರತ್‌ನಲ್ಲಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವ ಚಿತ್ರವಿರುವ 500 ರೂಪಾಯಿ ಮುಖಬೆಲೆಯ ನೋಟನ್ನು ಆಕ್ಷೇಪಾರ್ಹ ರೀತಿಯಲ್ಲಿ ಬಳಸುವ 'ರೀಲ್'ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಕಂಟೆಂಟ್ ಕ್ರಿಯೇಟರ್ ಒಬ್ಬರನ್ನು ಸೋಮವಾರ ಬಂಧಿಸಲಾಗಿದೆ.
ಬಂಧಿತ ಮಹಿಳೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಪಾಲೋರ್ಸ್ ಹೊಂದಿರುವ 47 ವರ್ಷದ ಸಿಮ್ರಾನ್ ಪಟೇಲ್ ಎಂದು ಗುರುತಿಸಲಾಗಿದೆ.
ಸೂರತ್‌ನ ಅದಾಜನ್ ಪ್ರದೇಶದಲ್ಲಿ ವಾಸಿಸುತ್ತಿರುವ ಸಿಮ್ರನ್ ಅವರನ್ನು ಸೂರತ್ ಪೊಲೀಸರು ಬಂಧಿಸಿದ್ದು, ಗಾಂಧಿ ಜಯಂತಿಯ ಮುನ್ನಾದಿನವಾದ ಅಕ್ಟೋಬರ್ 1 ರಂದು ಮಧ್ಯಾಹ್ನ 1 ರಿಂದ ಸಂಜೆ 6 ರ ನಡುವೆ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೂರತ್ ಪೊಲೀಸರು ತಮ್ಮ 'ಎಕ್ಸ್' (X) ಖಾತೆಯ ಮೂಲಕ ಈ ಬಂಧನದ ಕುರಿತು ಮಾಹಿತಿ ನೀಡಿದ್ದು, ಇದರೊಂದಿಗೆ ಆ ಕಂಟೆಂಟ್ ಕ್ರಿಯೇಟರ್‌ಗೆ ಸಂಬಂಧಿಸಿದ 'ಮೊದಲು ಮತ್ತು ನಂತರ'ದ ದೃಶ್ಯಾವಳಿಗಳನ್ನು ಒಳಗೊಂಡ ವಿಡಿಯೋ ತುಣುಕನ್ನು ಸಹ ಹಂಚಿಕೊಂಡಿದ್ದಾರೆ; ಇದರಲ್ಲಿ ಮೊದಲ ದೃಶ್ಯವು ಅವರು ನೋಟನ್ನು ನಿರ್ವಹಿಸುತ್ತಿರುವುದನ್ನು ತೋರಿಸಿದರೆ, ಎರಡನೇ ದೃಶ್ಯವು ಅವರ ಕೈಗೆ ಕೋಳ ತೊಡಿಸಿದನ್ನು ತೋರಿಸಲಾಗಿದೆ.
ವಿಡಿಯೋದಲ್ಲಿ ಮಹಿಳೆ, ಮಹಾತ್ಮ ಗಾಂಧಿ ಭಾವಚಿತ್ರವಿರುವ 500 ರೂ. ಮುಖಬೆಲೆಯ ನೋಟನ್ನು ಆಕ್ಷೇಪಾರ್ಹ ರೀತಿಯಲ್ಲಿ ಬಳಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನೋಟಿನೊಂದಿಗೆ ಸೂಕ್ತವಲ್ಲದ ದೃಶ್ಯಗಳು ಮತ್ತು ಸನ್ನೆಗಳು ಇರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.