

ಕೊಚ್ಚಿ: ಕೆಲಸ ನೀಡುತ್ತೇವೆ ಎಂದು ಮಹಿಳೆಯೊಬ್ಬರನ್ನು ಕರೆಸಿಕೊಂಡು ಆಕೆಗೆ ಮತ್ತಿನ ಔಷಧ ನೀಡಿ ಸಾಮೂಹಿಕ ಅತ್ಯಾಚಾರ ಮಾಡಿರುವ ಭೀಕರ ಘಟನೆ ಕೇರಳದಲ್ಲಿ ವರದಿಯಾಗಿದೆ.
ಕೇರಳದ ಕೊಚ್ಚಿಯ ಕಳಮಶ್ಶೇರಿಯಲ್ಲಿ ಈ ಘಟನೆ ನಡೆದಿದ್ದು, ಸ್ಪಾ ಮ್ಯಾನೇಜರ್ ಹುದ್ದೆಯ ಉದ್ಯೋಗ ನೀಡುವುದಾಗಿ ಆಮಿಷವೊಡ್ಡಿ ಮಹಿಳೆಯೊಬ್ಬರನ್ನು ಕರೆಸಿಕೊಂಡು ಮತ್ತಿನ ಔಷಧ ನೀಡಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಅಕ್ಟೋಬರ್ 2ರಂದು ಈ ಘಟನೆ ನಡೆದಿದ್ದು, ಮಹಿಳೆಯನ್ನು ಕೆಲಸದ ಆಮಿಷವೊಡ್ಡಿ ಕಳಮಶ್ಶೇರಿಗೆ ಕರೆಸಿಕೊಂಡ ಬಳಿಕ ಆಕೆಗೆ ಡ್ರಗ್ಸ್ ನೀಡಿ ನಾಲ್ವರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.
ಇನ್ನೂ ಭಯಾನಕ ಎಂದರೆ ಆರೋಪಿಗಳು ಕೃತ್ಯದ ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ ಎಂಬ ಆರೋಪವೂ ಇದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಜ್ ಮತ್ತು ಜಿತು ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೊಬ್ಬ ಮಹಿಳೆಯೂ ಪ್ರಕರಣದಲ್ಲಿ ಆರೋಪಿಯಾಗಿರುವ ಸಾಧ್ಯತೆ ಇದೆ. ಆಕೆಯ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಮಹಿಳೆ ತನ್ನ ಪತಿಗೆ ಮಾಹಿತಿ ನೀಡಿದ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಸಂತ್ರಸ್ತೆ ಕೊಚ್ಚಿಯ ಆಸ್ಪತ್ರೆಯೊಂದರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಘಟನೆ ನಡೆದ ಸಂಪೂರ್ಣ ಸರಣಿ ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.