'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರವಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಕೇಂದ್ರ ಸಚಿವ ಸುರೇಶ್‌ ಗೋಪಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Suresh Gopi tells Rahul Gandhi
ಕೇಂದ್ರ ಸಚಿವ ಸುರೇಶ್ ಗೋಪಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
Updated on: 

ತಿರುವನಂತಪುರಂ: ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಕುರಿತು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿರುವಂತೆಯೇ ಇದಕ್ಕೆ ತಿರುಗೇಟು ನೀಡಿರುವ ಕೇರಳ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಸುರೇಶ್ ಗೋಪಿ, 'SIR ಉಪಯೋಗಗಳ ಕುರಿತು ಚೆನ್ನಿತ್ತಲರನ್ನು ಕೇಳಿ' ಎಂದು ಹೇಳಿದ್ದಾರೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರವಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಕೇಂದ್ರ ಸಚಿವ ಸುರೇಶ್‌ ಗೋಪಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

SIRನಿಂದ ಆಗಿರುವ ಲಾಭಗಳ ಬಗ್ಗೆ ತಮ್ಮದೇ ಪಕ್ಷದ ಹಿರಿಯ ನಾಯಕ ರಮೇಶ್‌ ಚೆನ್ನಿತ್ತಲಾ ಅವರನ್ನೇ ರಾಹುಲ್‌ ಗಾಂಧಿ ಕೇಳಬೇಕು ಎಂದು ಅವರು ವ್ಯಂಗ್ಯವಾಡಿದ್ದಾರೆ.

ಮಂಗಳವಾರ ಕೊಚ್ಚಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್‌ ಗೋಪಿ, 'ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಲು SIR ಅತ್ಯಗತ್ಯ' ಎಂದು ಪ್ರತಿಪಾದಿಸಿದರು.

"SIRನಿಂದ ಏನೆಲ್ಲ ಲಾಭವಾಗಿದೆ ಎಂಬುದನ್ನು ರಮೇಶ್‌ ಚೆನ್ನಿತ್ತಲಾ ಅವರನ್ನೇ ಕೇಳಬೇಕು. ಅದರ ಬಗ್ಗೆ ಒಂದು ಪುಸ್ತಕವನ್ನೇ ತಯಾರಿಸಿ ರಾಹುಲ್‌ ಗಾಂಧಿಗೆ ಕಳುಹಿಸಬೇಕು. SIR ಅನಿವಾರ್ಯ, ಅದು ನಡೆಯಲೇಬೇಕು. ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಕೂಡ ಇದರ ಬಗ್ಗೆ ಮಾತನಾಡಿದ್ದಾರೆ. ಇಲ್ಲಿ ಸತ್ತವರ ಹೆಸರಿನಲ್ಲೂ ಮತ ಚಲಾಯಿಸಿದ ಘಟನೆಗಳಿವೆ" ಎಂದು ಸುರೇಶ್‌ ಗೋಪಿ ಹೇಳಿದರು.

Suresh Gopi tells Rahul Gandhi
ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

'ನಕಲಿ ಮತದಾನ ತಡೆಯಲು SIR ಅಗತ್ಯ'

ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸುವುದು ಅತ್ಯಗತ್ಯ. ನಕಲಿ ಹಾಗೂ ಅಕ್ರಮ ಮತದಾನವನ್ನು ತಡೆಯಲು ದೇಶಾದ್ಯಂತ ಚುನಾವಣಾ ಪಟ್ಟಿಗಳ ಪರಿಷ್ಕರಣೆ ನಡೆಯಬೇಕು ಎಂದು ಕೇಂದ್ರ ಸಚಿವ ಒತ್ತಿ ಹೇಳಿದರು.

ಕೇರಳದ ಕಾಂಗ್ರೆಸ್‌ ನಾಯಕರೇ ಈ ಹಿಂದೆ SIRನಿಂದ ಮತದಾರರ ಪಟ್ಟಿಯಲ್ಲಿದ್ದ ನಕಲಿ, ನಕಲು ಹಾಗೂ ಮೃತರ ಹೆಸರಿನ ನಮೂದುಗಳನ್ನು ತೆಗೆದುಹಾಕಲು ಸಹಾಯವಾಗಿದೆ ಎಂದು ಹೇಳಿದ್ದರು. ಇದನ್ನೇ ಮುಂದಿಟ್ಟುಕೊಂಡು ಸುರೇಶ್‌ ಗೋಪಿ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚೆನ್ನಿತ್ತಲಾ ಹೇಳಿಕೆಯನ್ನು ಅಸ್ತ್ರ ಮಾಡಿಕೊಂಡ ಬಿಜೆಪಿ

ರಮೇಶ್‌ ಚೆನ್ನಿತ್ತಲಾ ಸೇರಿದಂತೆ ಕೇರಳದ ಕೆಲವು ಕಾಂಗ್ರೆಸ್‌ ನಾಯಕರು ಈ ಹಿಂದೆ SIR ಪ್ರಕ್ರಿಯೆಯಿಂದ ಮತದಾರರ ಪಟ್ಟಿಯಲ್ಲಿನ ನಕಲಿ, ನಕಲು ಹಾಗೂ ಮೃತರ ಹೆಸರಿನ ನಮೂದುಗಳನ್ನು ತೆಗೆದುಹಾಕಲು ಸಾಧ್ಯವಾಗಿದೆ ಎಂದು ಹೇಳಿದ್ದರು.

ಇದರಿಂದ ಚುನಾವಣಾ ಅಕ್ರಮಗಳನ್ನು ತಡೆಯಲು ಸಹಾಯವಾಗಿದ್ದು, ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ UDFಗೂ ಇದರಿಂದ ಪ್ರಯೋಜನವಾಗಿದೆ ಎಂದು ಚೆನ್ನಿತ್ತಲಾ ಅಭಿಪ್ರಾಯಪಟ್ಟಿದ್ದರು ಎನ್ನಲಾಗಿದೆ.

ಇದೇ ಹೇಳಿಕೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್‌ನ ರಾಜ್ಯ ಹಾಗೂ ಕೇಂದ್ರ ನಾಯಕತ್ವದ ನಿಲುವುಗಳಲ್ಲಿ ವ್ಯತ್ಯಾಸವಿದೆ ಎಂದು ಆರೋಪಿಸುತ್ತಿದ್ದಾರೆ.

ಒಂದೆಡೆ ಕೇರಳದ ಹಿರಿಯ ಕಾಂಗ್ರೆಸ್‌ ನಾಯಕರು SIRನಿಂದ ಮತದಾರರ ಪಟ್ಟಿ ಶುದ್ಧೀಕರಣಕ್ಕೆ ಹಾಗೂ ನಕಲಿ ಮತದಾನ ತಡೆಗೆ ಅನುಕೂಲವಾಗಿದೆ ಎಂದು ಹೇಳಿದ್ದರೆ, ಮತ್ತೊಂದೆಡೆ ರಾಹುಲ್‌ ಗಾಂಧಿ ರಾಷ್ಟ್ರೀಯ ಮಟ್ಟದಲ್ಲಿ SIR ಪ್ರಕ್ರಿಯೆಯನ್ನು ವಿರೋಧಿಸುತ್ತಿದ್ದಾರೆ ಎಂಬುದನ್ನು ಬಿಜೆಪಿ ನಾಯಕರು ಪ್ರಸ್ತಾಪಿಸುತ್ತಿದ್ದಾರೆ.

SIR ಕುರಿತು ರಾಜಕೀಯ ವಾಕ್ಸಮರ ಮುಂದುವರಿದಿದ್ದು, ಚುನಾವಣಾ ಆಯೋಗದ ಕ್ರಮ ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆ ವಿಚಾರ ಇದೀಗ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com