ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

ಕರ್ನಾಟಕ, ಆಂಧ್ರಪ್ರದೇಶ ಹಾಗೂ ರಾಜಸ್ಥಾನ ಸೇರಿದಂತೆ ಪ್ರಮುಖ ಈರುಳ್ಳಿ ಉತ್ಪಾದಕ ರಾಜ್ಯಗಳಿಂದ ತಾಜಾ ಖಾರಿಫ್‌ ಈರುಳ್ಳಿ ಮಾರುಕಟ್ಟೆಗೆ ಬರಲು ಆರಂಭಿಸಿದೆ.
Kharif crops in, onion prices should fall
ಈರುಳ್ಳಿ ದರ ಕುಸಿತ ಸಾಧ್ಯತೆ
Updated on: 

ನವದೆಹಲಿ: ಗಗನಕ್ಕೇರಿದ್ದ ಈರುಳ್ಳಿ ದರ ಕೊನೆಗೂ ಇಳಿಕೆಯಾಗುವ ಲಕ್ಷಣಗಳು ಕಾಣಿಸುತ್ತಿದ್ದು, ಖಾರಿಫ್ ಬೆಳೆ ಕಟಾವು ಹಂತಕ್ಕೆ ಬಂದಿರುವುದು ಗ್ರಾಹಕರಿಗೆ ತುಸು ನೆಮ್ಮದಿ ತಂದಿದೆ ಎನ್ನಲಾಗಿದೆ.

ಹೌದು.. ಖಾರಿಫ್‌ ಹಂಗಾಮಿನ ಈರುಳ್ಳಿ ಬೆಳೆ ಕಟಾವಿಗೆ ಬಂದಿದ್ದು, ಈಗಾಗಲೇ ಈರುಳ್ಳಿ ದಾಸ್ತಾನು ಮಾರುಕಟ್ಟೆಗೆ ಬರಲು ಆರಂಭಿಸಿದೆ. ಈ ಬೆಳವಣಿಗೆ ಈರುಳ್ಳಿ ದರ ಇಳಿಕೆಯಾಗುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಖಾರಿಫ್‌ ಹಂಗಾಮಿನ ಈರುಳ್ಳಿ ಮಾರುಕಟ್ಟೆಗೆ ಬರಲು ಆರಂಭಿಸಿರುವುದರಿಂದ ಚಿಲ್ಲರೆ ಈರುಳ್ಳಿ ಬೆಲೆ ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಬುಧವಾರ ತಿಳಿಸಿದೆ.

Kharif crops in, onion prices should fall
ಹಣದುಬ್ಬರ ಶೇ. 5.2; ಜನರಿಗೆ ಮತ್ತೊಂದು ಬೆಲೆ ಹಚ್ಚಳ ಶಾಕ್? ಆಹಾರ, ಇಂಧನ ಬೆಲೆ ಏರಿಕೆ!

ದಾಸ್ತಾನು ಹೆಚ್ಚಳ

ಖಾರಿಫ್‌ ಬೆಳೆ ಪೂರೈಕೆ ಹೆಚ್ಚಾಗುತ್ತಿರುವುದರ ಜತೆಗೆ ರಬಿ ಹಂಗಾಮಿನಲ್ಲಿ ಸಂಗ್ರಹಿಸಿರುವ ಈರುಳ್ಳಿ ದಾಸ್ತಾನು ಕೂಡ ಮಾರುಕಟ್ಟೆಯ ಬೇಡಿಕೆಯನ್ನು ಪೂರೈಸುತ್ತಿದೆ ಎಂದು ಸರ್ಕಾರ ಹೇಳಿದೆ.

ಈರುಳ್ಳಿಯ ಲಭ್ಯತೆ ಹಾಗೂ ಬೆಲೆಗಳ ಮೇಲೆ ಕೇಂದ್ರ ಸರ್ಕಾರ ನಿರಂತರ ನಿಗಾ ವಹಿಸಿದೆ ಎಂದು ಆಹಾರ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕ, ಆಂಧ್ರಪ್ರದೇಶ ಹಾಗೂ ರಾಜಸ್ಥಾನ ಸೇರಿದಂತೆ ಪ್ರಮುಖ ಈರುಳ್ಳಿ ಉತ್ಪಾದಕ ರಾಜ್ಯಗಳಿಂದ ತಾಜಾ ಖಾರಿಫ್‌ ಈರುಳ್ಳಿ ಮಾರುಕಟ್ಟೆಗೆ ಬರಲು ಆರಂಭಿಸಿದೆ.

ಮತ್ತೊಂದೆಡೆ ಸಂಗ್ರಹಿಸಿಟ್ಟಿರುವ ರಬಿ ಹಂಗಾಮಿನ ದಾಸ್ತಾನುಗಳಿಂದಲೂ ಮಾರುಕಟ್ಟೆಯ ಬೇಡಿಕೆ ಪೂರೈಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ

ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಹೊರೆ ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ತನ್ನ ಬಫರ್‌ ದಾಸ್ತಾನಿನಿಂದ ಈರುಳ್ಳಿಯನ್ನು ರಿಯಾಯಿತಿ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಮುಂಬರುವ ದಿನಗಳಲ್ಲಿ ಖಾರಿಫ್‌ ಈರುಳ್ಳಿಯ ಪೂರೈಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಹಬ್ಬದ ಋತುವಿನ ಹಿನ್ನೆಲೆಯಲ್ಲಿ ಸರ್ಕಾರದ ವಿತರಣಾ ಪ್ರಯತ್ನಗಳನ್ನೂ ಬಲಪಡಿಸಲಾಗುತ್ತಿದೆ.

ಹೀಗಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಸಮರ್ಪಕವಾಗಿಯೇ ಮುಂದುವರಿಯಲಿದ್ದು, ಬೆಲೆಗಳು ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಆಹಾರ ಸಚಿವಾಲಯ ತಿಳಿಸಿದೆ.

ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಕೇಂದ್ರದ ಬೃಹತ್ ಕಾರ್ಯಾಚರಣೆ

ಹಬ್ಬದ ಋತುವಿನಲ್ಲಿ ಅಡುಗೆ ಖರ್ಚು ಹೆಚ್ಚಾಗದಂತೆ ತಡೆಯಲು ಕೇಂದ್ರ ಸರ್ಕಾರ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬೃಹತ್‌ ಪ್ರಮಾಣದಲ್ಲಿ ಮಾರುಕಟ್ಟೆ ಮಧ್ಯಪ್ರವೇಶ ಮಾಡಿದೆ. ಬೆಲೆ ಸ್ಥಿರೀಕರಣ ನಿಧಿಯ (PSF) ಅಡಿಯಲ್ಲಿ ಸಂಗ್ರಹಿಸಿರುವ ಬಫರ್‌ ದಾಸ್ತಾನಿನಿಂದ ಈರುಳ್ಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ.

ಈರುಳ್ಳಿ ಪೂರೈಕೆ ಸುಗಮಗೊಳಿಸಲು ವಿಶೇಷ ಸಾರಿಗೆ ವ್ಯವಸ್ಥೆ ಕೈಗೊಳ್ಳಲಾಗಿದ್ದು, 467 ಟ್ರಕ್‌ಗಳು ಹಾಗೂ ಹೊಸದಾಗಿ ಪರಿಚಯಿಸಲಾದ ‘ಕಂದಾ ಎಕ್ಸ್‌ಪ್ರೆಸ್‌’ ವಿಶೇಷ ರೈಲುಗಳ ಮೂಲಕ ಈರುಳ್ಳಿಯನ್ನು ಪ್ರಮುಖ ಬಳಕೆ ಕೇಂದ್ರಗಳಿಗೆ ಸಾಗಿಸಲಾಗುತ್ತಿದೆ. ಇದರಿಂದ ಹಲವು ಪ್ರಮುಖ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಸ್ಥಿರಗೊಳ್ಳಲು ಹಾಗೂ ಚಿಲ್ಲರೆ ದರ ಇಳಿಕೆಯಾಗಲು ನೆರವಾಗಿದೆ ಎಂದು ಸರ್ಕಾರ ತಿಳಿಸಿದೆ.

ಖಾರಿಫ್‌ ಈರುಳ್ಳಿ ಬೆಳೆ ಪ್ರದೇಶ ಶೇ.5ರಷ್ಟು ಹೆಚ್ಚಳ

ಈ ಬಾರಿ ಖಾರಿಫ್‌ ಈರುಳ್ಳಿ ಬೆಳೆಯ ಪರಿಸ್ಥಿತಿ ಆಶಾದಾಯಕವಾಗಿದೆ. ದೇಶಾದ್ಯಂತ ಖಾರಿಫ್‌ ಈರುಳ್ಳಿ ಬೆಳೆಯುವ ಪ್ರದೇಶ ಕಳೆದ ವರ್ಷದ ಉತ್ತಮ ಮಟ್ಟಕ್ಕಿಂತಲೂ ಸುಮಾರು ಶೇ.5ರಷ್ಟು ಹೆಚ್ಚಾಗಿದೆ ಎಂದು ಸರ್ಕಾರ ತಿಳಿಸಿದೆ. ಪ್ರಮುಖ ಉತ್ಪಾದನಾ ಪ್ರದೇಶಗಳಲ್ಲಿ ಬೆಳೆ ಪರಿಸ್ಥಿತಿ ಅನುಕೂಲಕರವಾಗಿದ್ದು, ಕೊಯ್ಲು ಅವಧಿಯಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮಳೆಯ ಮುನ್ಸೂಚನೆಯೂ ಬೆಳೆ ಪರವಾಗಿ ಇದೆ.

Kharif crops in, onion prices should fall
ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ ಏರಿಕೆ?

ಮಂಡಿ ದರ ಶೇ.13ರಷ್ಟು ಇಳಿಕೆ

ಈರುಳ್ಳಿ ಪೂರೈಕೆ ಹೆಚ್ಚುತ್ತಿರುವ ಪರಿಣಾಮ ಮಂಡಿ ದರಗಳಲ್ಲೂ ಇಳಿಕೆ ಕಂಡುಬರುತ್ತಿದೆ. ಮಹಾರಾಷ್ಟ್ರದಲ್ಲಿ ಈರುಳ್ಳಿಯ ಸರಾಸರಿ ಮಂಡಿ ಬೆಲೆ ಸೆಪ್ಟೆಂಬರ್‌ 16ರಂದು ಕ್ವಿಂಟಲ್‌ಗೆ ಸುಮಾರು ₹4,030 ಇದ್ದರೆ, ಅಕ್ಟೋಬರ್‌ 3ರಂದು ₹3,475ಕ್ಕೆ ಇಳಿಕೆಯಾಗಿದೆ. ಅಂದರೆ ಸುಮಾರು ಶೇ.13ರಷ್ಟು ಕುಸಿತ ಕಂಡುಬಂದಿದೆ. ಪ್ರಮುಖ ಈರುಳ್ಳಿ ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬರುತ್ತಿರುವುದು ಪೂರೈಕೆ ಪರಿಸ್ಥಿತಿ ಸುಧಾರಿಸಿರುವುದನ್ನು ಸೂಚಿಸುತ್ತದೆ ಎಂದು ಸರ್ಕಾರ ತಿಳಿಸಿದೆ.

126 ನಗರಗಳಲ್ಲಿ ಈರುಳ್ಳಿ ಬೆಲೆ ಇಳಿಕೆ

ಚಿಲ್ಲರೆ ಮಾರುಕಟ್ಟೆಯಲ್ಲೂ ಈರುಳ್ಳಿ ಬೆಲೆ ಇಳಿಕೆಯ ಪ್ರವೃತ್ತಿ ಮುಂದುವರಿದಿದೆ. ಕಳೆದ ಎರಡು ವಾರಗಳಲ್ಲಿ 126 ನಗರಗಳಲ್ಲಿ ಈರುಳ್ಳಿ ಬೆಲೆ ಕೆಜಿಗೆ ₹1ರಿಂದ ₹21ರವರೆಗೆ ಕಡಿಮೆಯಾಗಿದೆ ಎಂದು ಸರ್ಕಾರ ತಿಳಿಸಿದೆ.

ತಮಿಳುನಾಡು, ಮಧ್ಯಪ್ರದೇಶ, ಉತ್ತರ ಪ್ರದೇಶ, ಕರ್ನಾಟಕ, ಒಡಿಶಾ, ಆಂಧ್ರಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವು ಪ್ರಮುಖ ಬಳಕೆದಾರ ರಾಜ್ಯಗಳಲ್ಲಿ ಈರುಳ್ಳಿ ಬೆಲೆ ಇಳಿಕೆಯಾಗಿದೆ.

ದೇಶದ ವಿವಿಧ ಭೌಗೋಳಿಕ ಪ್ರದೇಶಗಳಲ್ಲೂ ಬೆಲೆ ಇಳಿಕೆಯಾಗಿರುವುದರಿಂದ, ಇದು ನಿರ್ದಿಷ್ಟ ಮಂಡಿ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ. ದೇಶಾದ್ಯಂತ ಈರುಳ್ಳಿ ಪೂರೈಕೆ ಸುಧಾರಿಸುತ್ತಿರುವುದನ್ನು ಇದು ಸೂಚಿಸುತ್ತದೆ ಎಂದು ಸರ್ಕಾರ ಹೇಳಿದೆ.

Kharif crops in, onion prices should fall
ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ: ವಾಣಿಜ್ಯ ಸಿಲಿಂಡರ್ ಬೆಲೆ 62.50 ರೂ ಹೆಚ್ಚಳ; ವಿಮಾನ ಇಂಧನವೂ ದುಬಾರಿ..!

8 ‘ಕಂದಾ ಎಕ್ಸ್‌ಪ್ರೆಸ್‌’, 467 ಟ್ರಕ್‌ಗಳ ಮೂಲಕ 2 ಲಕ್ಷ ಕ್ವಿಂಟಲ್‌ ಪೂರೈಕೆ

ಬಳಕೆ ಕೇಂದ್ರಗಳಿಗೆ ಈರುಳ್ಳಿ ಪೂರೈಕೆಯನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸರ್ಕಾರ ಬಫರ್‌ ದಾಸ್ತಾನಿನಿಂದ ಈರುಳ್ಳಿಯನ್ನು ಬಿಡುಗಡೆ ಮಾಡುತ್ತಿದೆ. ಈ ವರೆಗೆ 8 ‘ಕಂದಾ ಎಕ್ಸ್‌ಪ್ರೆಸ್‌’ ವಿಶೇಷ ರೈಲುಗಳು ಹಾಗೂ 467 ಟ್ರಕ್‌ಗಳ ಮೂಲಕ 2 ಲಕ್ಷ ಕ್ವಿಂಟಲ್‌ಗೂ ಅಧಿಕ ಈರುಳ್ಳಿಯನ್ನು 123 ನಗರಗಳಿಗೆ ರವಾನಿಸಲಾಗಿದೆ.

ಹೆಚ್ಚು ಈರುಳ್ಳಿ ಬಳಕೆಯಾಗುವ ಮಾರುಕಟ್ಟೆಗಳಿಗೆ ನಿರಂತರ ಪೂರೈಕೆ ಖಚಿತಪಡಿಸಿಕೊಳ್ಳಲು ಇನ್ನಷ್ಟು ರೈಲು ರೇಕ್‌ಗಳನ್ನು ನಿಯೋಜಿಸುವ ಯೋಜನೆಯೂ ಇದೆ. ಮುಂಬರುವ ಹಬ್ಬದ ಋತುವಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಈರುಳ್ಳಿಯ ವೇಗವಾದ, ಪರಿಣಾಮಕಾರಿ ಹಾಗೂ ನಿರಂತರ ವಿತರಣೆಗೆ ಈ ಕ್ರಮಗಳನ್ನು ಮತ್ತಷ್ಟು ಚುರುಕುಗೊಳಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com