

ನಾಸಿಕ್: ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ದೇಶದ ಪ್ರಮುಖ ಟೆಕ್ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(TCS)ನಲ್ಲಿ ನಡೆದಿದೆ ಎನ್ನಲಾದ ಕಾರ್ಪೊರೇಟ್ ಲವ್ ಜಿಹಾದ್ ಮತ್ತು ಲೈಂಗಿಕ ಕಿರುಕುಳ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಅವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಶುಕ್ರವಾರ ಕೌಟುಂಬಿಕ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
ನಿದಾ ಖಾನ್ ಅವರ ಪತಿ ಮೊಯಿನ್ ಖಾನ್ ಅವರು ಈ ವರ್ಷದ ಆಗಸ್ಟ್ನಲ್ಲಿ ಪತ್ನಿಯಿಂದ ವಿಚ್ಛೇದನ ಕೋರಿ ನಾಸಿಕ್ನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ನ್ಯಾಯಾಲಯವು ನಿದಾ ಖಾನ್ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು.
ಮೊಯಿನ್ ಖಾನ್ ಕೂಡ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಪಿ. ಎಲ್. ಪಾಲ್ಸಿಂಗಂಕರ್ ಅವರ ಮುಂದೆ ಇದು ಹಾಜರಿದ್ದರು. ಕಡ್ಡಾಯ ಸಮಾಲೋಚನಾ ಪ್ರಕ್ರಿಯೆಯೊಂದಿಗೆ(counseling session) ಕಲಾಪಗಳು ಪ್ರಾರಂಭವಾದವು.
ಮುಂದಿನ ವಿಚಾರಣೆಯನ್ನು ನವೆಂಬರ್ 20ಕ್ಕೆ ನಿಗದಿಪಡಿಸಲಾಗಿದೆ ಎಂದು ಮೊಯಿನ್ ಖಾನ್ ಪರ ವಕೀಲ ನಿತಿನ್ ಪಂಡಿತ್ ಅವರು ತಿಳಿಸಿದ್ದಾರೆ.
ಗರ್ಭಿಣಿಯಾಗಿರುವ ನಿದಾ ಖಾನ್ ಅವರು TCS ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಪ್ರಕರಣವು, ಕಂಪನಿಯ ನಾಸಿಕ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಕೆಲ ಮಹಿಳಾ ಉದ್ಯೋಗಿಗಳಿಗೆ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹಾಕಿದ ಆರೋಪಕ್ಕೆ ಸಂಬಂಧಿಸಿದೆ.