ಟೈಗರ್ ಶ್ರಾಫ್ ಕಾರಿನ ಮೇಲೆ ಫೈರಿಂಗ್: ಸೋಷಿಯಲ್ ಮೀಡಿಯಾದಲ್ಲಿ ದಾಳಿ ಹೊಣೆ ಹೊತ್ತ ಬಿಷ್ಣೋಯ್ ಗ್ಯಾಂಗ್; Video

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಪ್ರತಿನಿಧಿಯೆಂದು ಹೇಳಿಕೊಂಡ ವ್ಯಕ್ತಿ ಕರೆ ಮಾಡಿರುವ ಆಡಿಯೊ ರೆಕಾರ್ಡಿಂಗ್ ಬಹಿರಂಗವಾಗಿದೆ. ನಟ ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮುಂದುವರಿಸಿದ್ದರಿಂದ ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಲಾಗಿದೆ ಎಂದು ಕರೆ ಮಾಡಿದ ವ್ಯಕ್ತಿ ಆರೋಪಿಸಿದ್ದಾನೆ.
Maharashtra Dy CM Eknath Shinde visited Tiger Shriff house and enquired his health
ಗಾಯಾಳು ಟೈಗರ್ ಶ್ರಾಫ್ ನ್ನು ನಿವಾಸದಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಮಹಾರಾಷ್ಟ್ಪ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ
Updated on: 

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಎಸ್‌ಯುವಿ ಕಾರಿನ ಮೇಲೆ ಬೈಕ್‌ನಲ್ಲಿ ಬಂದ ಮೂವರು ಅಪರಿಚಿತರು ನಿನ್ನೆ ಭಾನುವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ. ಮುಂಬೈನ ಜುಹು ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ ನಟ ಅಪಾಯದಿಂದ ಪಾರಾಗಿದ್ದು, ಅವರ ಕಾರು ಚಾಲಕ ಹಾಗೂ ಪಕ್ಕದಲ್ಲಿದ್ದ ಆಟೋರಿಕ್ಷಾ ಚಾಲಕ ಗಾಯಗೊಂಡಿದ್ದಾರೆ.

ಪುಷ್ಪಾ ಪಾರ್ಕ್ ಸಮೀಪದ ಜೆವಿಪಿಡಿ ಮೈದಾನದಲ್ಲಿ ಫುಟ್‌ಬಾಲ್ ಆಡಲು ಟೈಗರ್ ಶ್ರಾಫ್ ತೆರಳಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅವರ ವಾಹನದ ಸಮೀಪ ಬಂದು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಗುಂಡಿನ ದಾಳಿ ನಡೆದಾಗ ದುಷ್ಕರ್ಮಿಗಳು ಎಸ್‌ಯುವಿಯಿಂದ ಸುಮಾರು 100 ಮೀಟರ್ ದೂರದಲ್ಲಿದ್ದರು ಎಂದು ವರದಿಯಾಗಿದೆ.

ಈ ಘಟನೆಯಲ್ಲಿ ನಟನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಆದರೆ, ಅವರ ಕಾರು ಚಾಲಕ ಫಿರ್ದೌಸ್ ಅವರ ಎಡಗೈಗೆ ಗಾಯವಾಗಿದೆ. ಆಟೋರಿಕ್ಷಾ ಚಾಲಕರೊಬ್ಬರೂ ಗಾಯಗೊಂಡಿದ್ದು, ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

Maharashtra Dy CM Eknath Shinde visited Tiger Shriff house and enquired his health
ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಹಲವರಿಗೆ ಗಾಯ; ನಟ ಪ್ರಾಣಾಪಾಯದಿಂದ ಪಾರು, Video

ಬಿಷ್ಣೊಯ್ ಗ್ಯಾಂಗ್ ನಿಂದ ದಾಳಿ?

ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಕಾರಿನಲ್ಲಿ ಟೈಗರ್ ಶ್ರಾಫ್ ಕುಳಿತಿರುವುದು, ದಾಳಿಯ ನಂತರ ಫೋಟೋ-ವಿಡಿಯೊ ಕಾಣಿಸುತ್ತಿದೆ , ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಪ್ರತಿನಿಧಿಯೆಂದು ಹೇಳಿಕೊಂಡ ವ್ಯಕ್ತಿ ಕರೆ ಮಾಡಿರುವ ಆಡಿಯೊ ರೆಕಾರ್ಡಿಂಗ್ ಕೂಡ ಬಹಿರಂಗವಾಗಿದೆ. ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ನಟ ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮುಂದುವರಿಸಿದ್ದರಿಂದ ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಲಾಗಿದೆ ಎಂದು ಕರೆ ಮಾಡಿದ ವ್ಯಕ್ತಿ ಆರೋಪಿಸಿದ್ದಾನೆ. ಆದರೆ, ಈ ಹೇಳಿಕೆಯನ್ನು ಪೊಲೀಸರು ಸ್ವತಂತ್ರವಾಗಿ ದೃಢಪಡಿಸಿಲ್ಲ.

ಘಟನೆಯ ತನಿಖೆಗಾಗಿ ಮುಂಬೈ ಪೊಲೀಸರು 12 ವಿಶೇಷ ತಂಡಗಳನ್ನು ರಚಿಸಿದ್ದಾರೆ. ಮುಂಬೈ ಅಪರಾಧ ವಿಭಾಗ ಹಾಗೂ ಸ್ಥಳೀಯ ಪೊಲೀಸರ ಸಿಬ್ಬಂದಿ ಈ ತಂಡಗಳಲ್ಲಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಿಧಿವಿಜ್ಞಾನ ತಂಡವು ಘಟನಾ ಸ್ಥಳ ಹಾಗೂ ನಟನ ವಾಹನವನ್ನು ಪರಿಶೀಲಿಸಿ, ಗುಂಡಿನ ದಾಳಿಗೆ ಸಂಬಂಧಿಸಿದ ಬ್ಯಾಲಿಸ್ಟಿಕ್ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಟೈಗರ್ ಶ್ರಾಫ್ ಅವರ ತಂದೆ, ನಟ ಜಾಕಿ ಶ್ರಾಫ್, ತಮ್ಮ ಪುತ್ರ ಸುರಕ್ಷಿತವಾಗಿದ್ದಾರೆ ಎಂದು ದೃಢಪಡಿಸಿದ್ದಾರೆ. ಅಲ್ಲದೆ, ಪೊಲೀಸರೊಂದಿಗೆ ಸಹಕರಿಸುತ್ತಿದ್ದು, ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಗೃಹ ಖಾತೆಯನ್ನೂ ಹೊಂದಿರುವ ದೇವೇಂದ್ರ ಫಡ್ನವೀಸ್ ಅವರು ಮುಂಬೈ ಪೊಲೀಸ್ ಆಯುಕ್ತ ದೇವೇನ್ ಭಾರತಿ ಅವರೊಂದಿಗೆ ಮಾತನಾಡಿ, ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಟೈಗರ್ ಶ್ರಾಫ್ ಅವರೊಂದಿಗೂ ಮಾತನಾಡಿದ ಫಡ್ನವೀಸ್, ಆರೋಪಿಗಳನ್ನು ಪತ್ತೆಹಚ್ಚುವ ಭರವಸೆ ನೀಡಿದ್ದಾರೆ.

ನಾವೆಲ್ಲರೂ ನಿಮ್ಮೊಂದಿಗಿದ್ದೇವೆ. ಆರೋಪಿಗಳನ್ನು ಶೀಘ್ರದಲ್ಲೇ ಪತ್ತೆಹಚ್ಚುತ್ತೇವೆ. ಚಿಂತಿಸಬೇಡಿ ಎಂದು ಫಡ್ನವೀಸ್ ನಟನಿಗೆ ತಿಳಿಸಿದ್ದಾರೆ.

ಈ ಗುಂಡಿನ ದಾಳಿ ಪ್ರತಿಪಕ್ಷ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಸಾರ್ವಜನಿಕರ ಸುರಕ್ಷತೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಶಿವಸೇನೆ, ಕಾಂಗ್ರೆಸ್, ಎನ್ ಸಿಪಿ ಇತ್ತೀಚಿನ ದಿನಗಳಲ್ಲಿ ರಾಜಕೀಯ ಮುಖಂಡರು ಹಾಗೂ ಚಿತ್ರರಂಗದ ಸದಸ್ಯರ ಮೇಲೆ ನಡೆದ ದಾಳಿಗಳು ಮತ್ತು ಅವರಿಗೆ ಬಂದಿರುವ ಬೆದರಿಕೆಗಳನ್ನು ಪ್ರಸ್ತಾಪಿಸಿದ್ದಾರೆ.

ಕಾಂಗ್ರೆಸ್ ನಾಯಕ ಸಚಿನ್ ಸಾವಂತ್ ಅವರು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ದೇವೇಂದ್ರ ಫಡ್ನವೀಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರ ಹತ್ಯೆ, ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿ ಹಾಗೂ ನಟರು ಮತ್ತು ಚಲನಚಿತ್ರ ನಿರ್ಮಾಪಕರಿಗೆ ಬಂದಿರುವ ಬೆದರಿಕೆಗಳನ್ನು ಉಲ್ಲೇಖಿಸಿದ ಅವರು, ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವ ಸರ್ಕಾರದ ಸಾಮರ್ಥ್ಯದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ ಎಂದು ಹೇಳಿದ್ದಾರೆ.

ಮುಂಬೈ ಕಾಂಗ್ರೆಸ್ ಅಧ್ಯಕ್ಷೆ ವರ್ಷಾ ಗಾಯಕ್ವಾಡ್, ರಾಜ್ಯಕ್ಕೆ ಪ್ರತ್ಯೇಕ ಗೃಹ ಸಚಿವರನ್ನು ನೇಮಿಸುವಂತೆ ಆಗ್ರಹಿಸಿದ್ದಾರೆ. ಮುಂಬೈನ ಕಾನೂನು ಮತ್ತು ಸುವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ. ಪೊಲೀಸರ ಮೇಲೆ ಸಾರ್ವಜನಿಕರಿಗೆ ಇನ್ನೂ ಗೌರವ ಮತ್ತು ವಿಶ್ವಾಸವಿದೆಯೇ ಎಂದು ಪ್ರಶ್ನಿಸಿದ ಅವರು, ನಟರು ಮತ್ತು ರಾಜಕೀಯ ನಾಯಕರು ಸುರಕ್ಷಿತವಾಗಿಲ್ಲದಿರುವಾಗ ಸಾಮಾನ್ಯ ನಾಗರಿಕರ ಸುರಕ್ಷತೆಯ ಗತಿಯೇನು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಎನ್‌ಸಿಪಿ (SP) ಶಾಸಕ ರೋಹಿತ್ ಪವಾರ್, ಥಾಣೆಯಲ್ಲಿ ಶಿವಸೇನೆ (UBT) ನಾಯಕ ಪ್ರದೀಪ್ ಪೂರ್ಣೇಕರ್ ಹತ್ಯೆ ಹಾಗೂ ಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿ ಜುಹು ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯನ್ನು ಉಲ್ಲೇಖಿಸಿದ್ದಾರೆ. ಇಂತಹ ಘಟನೆಗಳು ಮುಂಬೈನಲ್ಲಿ ಹೂಡಿಕೆದಾರರ ವಿಶ್ವಾಸದ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ ಅವರು, ಗೃಹ ಖಾತೆಯನ್ನು ಸಮರ್ಥ ಸಚಿವರಿಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಎನ್‌ಸಿಪಿ ವಿಧಾನ ಪರಿಷತ್ ಸದಸ್ಯ ಜೀಶನ್ ಸಿದ್ದಿಕಿ ಕೂಡ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ. ತಮ್ಮ ತಂದೆಯ ಹತ್ಯೆಯಾಗಿ ಎರಡು ವರ್ಷ ಕಳೆದರೂ ತಮ್ಮ ಕುಟುಂಬಕ್ಕೆ ಇನ್ನೂ ನ್ಯಾಯ ದೊರೆತಿಲ್ಲ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದ್ದು, ಯಾರಿಗೂ ಸುರಕ್ಷತೆ ಇಲ್ಲ ಎಂದು ಆರೋಪಿಸಿದ ಅವರು, ಟೈಗರ್ ಶ್ರಾಫ್ ಅವರ ವಾಹನದ ಮೇಲೆ ನಡೆದ ಗುಂಡಿನ ದಾಳಿ ಹಾಗೂ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ನಡೆದ ಘಟನೆಯನ್ನು ಪ್ರಸ್ತಾಪಿಸಿದ್ದಾರೆ.

ರಾಜ್ಯದ ಗುಪ್ತಚರ ವ್ಯವಸ್ಥೆಯ ವೈಫಲ್ಯವನ್ನೂ ಜೀಶನ್ ಸಿದ್ದಿಕಿ ಆರೋಪಿಸಿದ್ದಾರೆ. ಹೆಚ್ಚಿನ ಭದ್ರತೆ ಒದಗಿಸುವಂತೆ ತಾವು ಮಾಡಿದ್ದ ಮನವಿಯಿಂದ ಶೇ.1ರಷ್ಟೂ ಸುಧಾರಣೆ ಆಗಿಲ್ಲ ಎಂದು ದೂರಿದ ಅವರು, ಈ ವಿಚಾರದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.

ಎನ್‌ಸಿಪಿ (SP) ಲೋಕಸಭಾ ಸದಸ್ಯೆ ಸುಪ್ರಿಯಾ ಸುಳೆ, ಗುಂಡಿನ ದಾಳಿಯನ್ನು ಆಘಾತಕಾರಿ ಎಂದು ಬಣ್ಣಿಸಿದ್ದಾರೆ. ಅಪರಾಧಿ ಗ್ಯಾಂಗ್‌ಗಳು ಹಾಡಹಗಲೇ ಕಾರ್ಯಾಚರಿಸುತ್ತಿರುವಂತೆ ಕಾಣುತ್ತಿದೆ, ಮಹಾರಾಷ್ಟ್ರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದನ್ನು ಕೇಂದ್ರ ಸರ್ಕಾರದ ಅಂಕಿಅಂಶಗಳು ತೋರಿಸುತ್ತವೆ ಎಂದು ಉಲ್ಲೇಖಿಸಿದ ಅವರು, ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಇದು ಕೇವಲ ಆರೋಪವಲ್ಲ; ಆಡಳಿತಾರೂಢ ಪಕ್ಷ ಒಪ್ಪಿಕೊಂಡು ಕ್ರಮ ಕೈಗೊಳ್ಳಬೇಕಾದ ಕಟು ವಾಸ್ತವ ಎಂದು ಸುಪ್ರಿಯಾ ಸುಳೆ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಬರಗಾಲ, ರೈತರ ಆತ್ಮಹತ್ಯೆಗಳು, ನಿರುದ್ಯೋಗ ಹಾಗೂ ಆರ್ಥಿಕ ಸಂಕಷ್ಟಗಳೂ ಹೆಚ್ಚುತ್ತಿವೆ ಎಂದು ಪ್ರಸ್ತಾಪಿಸಿದ ಅವರು, ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಬಗ್ಗೆ ರಾಜ್ಯ ಸರ್ಕಾರ ತುರ್ತಾಗಿ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com