

ಪಾಲ್ಘರ್: ಕಾರು ಖರೀದಿಸಲು ಹಣ ಕೊಡದ್ದಕ್ಕೆ ಆಕ್ರೋಶಗೊಂಡ ಮಗನೊಬ್ಬ, ಎಲೆಕ್ಟ್ರಿಕ್ ಗ್ರೈಂಡರ್ ನಿಂದ ತನ್ನ ತಂದೆ ಕತ್ತು ಸೀಳಿ ಕೊಂದಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ನಗರದಲ್ಲಿ ನಡೆದಿದೆ.
55 ವರ್ಷದ ಮೋಹನ್ಲಾಲ್ ಪರ್ಮಾರ್ ಮೃತ ವ್ಯಕ್ತಿಯಾಗಿದ್ದಾರೆ. ತನ್ನ ತಂದೆಯನ್ನೇ ಹತ್ಯೆ ಮಾಡಿದ ಆರೋಪದ ಮೇರೆಗೆ 28 ವರ್ಷದ ಮುಕೇಶ್ ಪರ್ಮಾರ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಮುಂಬೈನಲ್ಲಿ ಆಸ್ತಿಯೊಂದನ್ನು ಮಾರಾಟ ಮಾಡಿದ ಹಣದ ಹಂಚಿಕೆ ಹಾಗೂ ಸಾಲ ತೀರಿಸಿ, ಕಾರು ಖರೀದಿಸಲು ಮಗ ಹಣಕ್ಕೆ ಪಟ್ಟು ಹಿಡಿದಿದ್ದರಿಂದ ಮೋಹನ್ಲಾಲ್ ಪರ್ಮಾರ್ ಮತ್ತು ಮುಕೇಶ್ ಪರ್ಮಾರ್ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪಾಲ್ಘರ್ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ದೇಶಮುಖ್ ತಿಳಿಸಿದ್ದಾರೆ.
ಮೃತ ವ್ಯಕ್ತಿ ಮುಂಬೈನ ದಾದರ್ ಪ್ರದೇಶದಲ್ಲಿ ಪಾತ್ರೆ ಅಂಗಡಿಯನ್ನು ನಡೆಸುತ್ತಿದ್ದರು. ಭಾನುವಾರ ಮಧ್ಯಾಹ್ನ ತಂದೆಯೊಂದಿಗೆ ತೀವ್ರ ವಾಗ್ವಾದ ನಡೆಸಿದ ನಂತರ ಮನೆಯಿಂದ ಹೊರಗೆ ಹೋಗಿದ್ದ ಮುಕೇಶ್ ಹಾರ್ಡ್ವೇರ್ ಅಂಗಡಿಯೊಂದರಿಂದ ಟೈಲ್ಸ್ ಕತ್ತರಿಸಲು ಬಳಸುವ ಹೊಸ ಎಲೆಕ್ಟ್ರಿಕ್ ಗ್ರೈಂಡರ್ ಖರೀದಿಸಿದ್ದಾನೆ.
ಮನೆಗೆ ಹಿಂತಿರುಗಿದ ನಂತರ ಆ ಯಂತ್ರವನ್ನು ಬಳಸಿ ತನ್ನ ತಂದೆಯ ಕುತ್ತಿಗೆಯನ್ನು ಬರ್ಬರವಾಗಿ ಸೀಳಿದ್ದಾನೆ. ಇದರಿಂದ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಿದ್ದ.
ಮೃತರ ಕಿರಿಯ ಮಗ ತನ್ನ ತಂದೆಗೆ ಪದೇ ಪದೇ ಕರೆ ಮಾಡಿದರೂ ಸಂಪರ್ಕ ಸಿಗದಿದ್ದಾಗ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಆತ ತನ್ನ ಪರಿಚಯಸ್ಥರೊಬ್ಬರನ್ನು ಅಪಾರ್ಟ್ ಮೆಂಟ್ ಗೆ ಕಳುಹಿಸಿ ಪರಿಶೀಲಿಸಲು ಹೇಳಿದ್ದರು. ಅಲ್ಲಿಗೆ ಹೋದ ಆ ವ್ಯಕ್ತಿಗೆ ಮೋಹನ್ಲಾಲ್ ಪರ್ಮಾರ್ ಅವರ ಕುತ್ತಿಗೆಗೆ ತೀವ್ರ ಗಾಯಗಳಾಗಿ, ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದರು. ಕೂಡಲೇ ಅವರು ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದರುಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಒಂದು ಗಂಟೆಯೊಳಗೆ ಮುಕೇಶ್ ಪರ್ಮಾರ್ನ ಜಾಡು ಹಿಡಿದು, ನೆರೆಯ ಗುಜರಾತ್ನ ಭರೂಚ್ನಲ್ಲಿ ಆತನನ್ನು ಬಂಧಿಸಿದ್ದಾರೆ.ಸೋಮವಾರ ಆರೋಪಿಯನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.