ಕಾರ್ಗಿಲ್‌ನಲ್ಲಿ ಮಡಿದ ಸೈನಿಕರ ಶವಗಳನ್ನೇ ತಿರಸ್ಕರಿಸಿದ್ದು ನೀವು: ಪಾಕ್ ಯೋಧರಿಗೆ ಸಂಪ್ರದಾಯಬದ್ಧ ಅಂತ್ಯಕ್ರಿಯೆ ಮಾಡಿದ್ದು ನಾವು; ಉಪದೇಶ ಮಾಡುವ ನೈತಿಕತೆಯಿಲ್ಲ!

ಕಾರ್ಗಿಲ್ ಯುದ್ಧದಲ್ಲಿ ಮೃತಪಟ್ಟ ತಮ್ಮದೇ ಸೈನಿಕರ ಮೃತದೇಹಗಳನ್ನು ಸ್ವೀಕರಿಸದ ಪಾಕಿಸ್ತಾನವು, ಈಗ ಧರ್ಮ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಂತ್ಯಕ್ರಿಯೆಗಳ ಬಗ್ಗೆ ಉತ್ಸಾಹದಿಂದ ಮಾತನಾಡುವುದು ವಿಪರ್ಯಾಸದ ಸಂಗತಿಯಾಗಿದೆ.
 Bhavika Mangalanandan
ಭಾವಿಕಾ ಮಂಗಳಾನಂದನ್
Updated on: 

ನವದೆಹಲಿ: ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರ ಕುಮ್ಮಕ್ಕು ನೀಡುತ್ತಾ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಾನವ ಹಕ್ಕುಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮಾತನಾಡುತ್ತಿರುವ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಭಾರತ ತೀವ್ರ ತಪರಾಕಿ ಹಾಕಿದೆ.

ವಿಶೇಷ ಸಂದರ್ಭಗಳಲ್ಲಿ ಅಂತ್ಯಕ್ರಿಯೆಯ ಹಕ್ಕುಗಳಿಗೆ ಸಂಬಂಧಿಸಿದಂತೆ, ‘ಧರ್ಮ ಮತ್ತು ನಂಬಿಕೆಯ ಸ್ವಾತಂತ್ರ್ಯ’ ಕುರಿತ ವಿಶೇಷ ವರದಿಗಾರರೊಂದಿಗೆ ಸಂವಾದ ನಡೆಯಿತು. ವಿಶ್ವಸಂಸ್ಥೆಯಲ್ಲಿ ಭಾರತದ ಪ್ರಥಮ ಕಾರ್ಯದರ್ಶಿ ಭಾವಿಕಾ ಮಂಗಳಾನಂದನ್ ಅವರು ನೆರೆ ರಾಷ್ಟ್ರದ ನಕಲಿ ಕಾಳಜಿ ಹಾಗೂ ಇಬ್ಬಗೆಯ ನೀತಿಯನ್ನು ಕಟು ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಲ್ಲದೆ, ಜಾಗತಿಕ ದಕ್ಷಿಣದ ದೇಶಗಳ ವಿರುದ್ಧ ಮಾತ್ರ ಪಕ್ಷಪಾತ ಹೊಂದಿರುವ ವಿಶ್ವಸಂಸ್ಥೆಯ ವಲಸಿಗರ ಮಾನವ ಹಕ್ಕುಗಳ ವಿಶೇಷ ವರದಿಯ ವಿಧಾನವನ್ನು ಭಾರತ ಇದೇ ವೇಳೆ ಬಲವಾಗಿ ತಿರಸ್ಕರಿಸಿದೆ.

ಭಯೋತ್ಪಾದನೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಲ್ಪಸಂಖ್ಯಾತರ ಹಕ್ಕುಗಳಂತಹ ವಿಷಯಗಳಲ್ಲಿ ಪಾಕಿಸ್ತಾನವು ಅನುಸರಿಸುತ್ತಿರುವ ದ್ವಂದ್ವ ನಿಲುವು ಮತ್ತೊಮ್ಮೆ ಬಯಲಾಗಿದೆ. ಭಾರತದ ಜಮ್ಮು ಮತ್ತು ಕಾಶ್ಮೀರ ಹಾಗೂ ಆಂತರಿಕ ವಿಷಯಗಳ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕು ಪಾಕಿಸ್ತಾನಕ್ಕಿಲ್ಲ ಎಂಬುದನ್ನು, ಭಾರತವು ಅಂತರರಾಷ್ಟ್ರೀಯ ಸಮುದಾಯಕ್ಕೆ ಮತ್ತೊಮ್ಮೆ ಸ್ಪಷ್ಟ ಸಾಕ್ಷ್ಯಗಳೊಂದಿಗೆ ನೆನಪಿಸಿಕೊಟ್ಟಿದೆ.

 Bhavika Mangalanandan
ಸೌದಿಗೆ ಕೈಕೊಟ್ಟು ಹೊಸ ಮೈತ್ರಿ ಕಟ್ಟಿದ ಪಾಕಿಸ್ತಾನ! ಟರ್ಕಿ, ಕತಾರ್, ಇಂಡೋನೇಷ್ಯಾ ಜೊತೆ Badr ಒಪ್ಪಂದ: ಭಾರತಕ್ಕಿದೆಯಾ ಕಂಟಕ?

1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಮೃತಪಟ್ಟ ತಮ್ಮ ಸೈನಿಕರ ಮೃತದೇಹಗಳನ್ನು ಸ್ವೀಕರಿಸಲು ಪಾಕಿಸ್ತಾನ ನಿರಾಕರಿಸಿದ್ದ ಸಂಗತಿಯನ್ನು ಅವರು ಉಲ್ಲೇಖಿಸಿದರು. ಕಾರ್ಗಿಲ್ ಯುದ್ಧದಲ್ಲಿ ಮೃತಪಟ್ಟ ತಮ್ಮದೇ ಸೈನಿಕರ ಮೃತದೇಹಗಳನ್ನು ಸ್ವೀಕರಿಸದ ಪಾಕಿಸ್ತಾನವು, ಈಗ ಧರ್ಮ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಂತ್ಯಕ್ರಿಯೆಗಳ ಬಗ್ಗೆ ಉತ್ಸಾಹದಿಂದ ಮಾತನಾಡುವುದು ವಿಪರ್ಯಾಸದ ಸಂಗತಿಯಾಗಿದೆ.

ಅವರಿಗೆ ನಾನು ನೆನಪಿಸಲು ಬಯಸುತ್ತೇನೆ - ಭಾರತೀಯ ಸೇನೆಯು ಪಾಕಿಸ್ತಾನದ ಅನೇಕ ಸೈನಿಕರಿಗೆ ಮಿಲಿಟರಿ ಗೌರವಗಳನ್ನು ನೀಡಿ, ಇಸ್ಲಾಮಿಕ್ ಸಂಪ್ರದಾಯಗಳ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಿತ್ತು, ಎಂದು ಮಂಗಳಾನಂದನ್ ಹೇಳಿದರು.

ಭಾರತದ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಳಿತ ಪ್ರದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಪಾಕಿಸ್ತಾನವು ಅತಿಯಾದ ಆಸಕ್ತಿ ವಹಿಸುತ್ತಿದೆ. ಆದರೆ, ವಾಸ್ತವವಾಗಿ ಅದು ತನ್ನ ಅಕ್ರಮ ವಶದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಭಾಗಗಳಲ್ಲಿ (ಉದಾಹರಣೆಗೆ ರಾವಲಕೋಟ್) ನಡೆಯುತ್ತಿರುವ ಬೆಳವಣಿಗೆಗಳತ್ತ ಗಮನ ಹರಿಸಬೇಕು.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಕುಸಿಯುತ್ತಿದೆ ಮತ್ತು ಅವರ ಹಕ್ಕುಗಳನ್ನು ನಿರಂತರವಾಗಿ ಉಲ್ಲಂಘಿಸಲಾಗುತ್ತಿದೆ. ತಮ್ಮದೇ ದೇಶದ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲಾಗದ ಪಾಕಿಸ್ತಾನಕ್ಕೆ, ಭಾರತಕ್ಕೆ ಉಪದೇಶ ನೀಡುವ ಯಾವುದೇ ನೈತಿಕ ನೆಲೆ ಇಲ್ಲ," ಎಂದು ಅವರು ಹೇಳಿದರು.

ಪಾಕಿಸ್ತಾನದಲ್ಲಿ ಹಿಂದೂ, ಕ್ರಿಶ್ಚಿಯನ್, ಸಿಖ್ ಸೇರಿದಂತೆ ಅಲ್ಪಸಂಖ್ಯಾತರ ಸಂಖ್ಯೆ ದಿನೇ ದಿನೆ ಕ್ಷೀಣಿಸುತ್ತಿದೆ. ಅವರ ಮೂಲಭೂತ ಹಕ್ಕುಗಳನ್ನು ನಿರಂತರವಾಗಿ ದಮನಿಸಲಾಗುತ್ತಿದೆ. ತನ್ನ ದೇಶದ ಅಲ್ಪಸಂಖ್ಯಾತರ ಸುರಕ್ಷತೆಯನ್ನೇ ಖಚಿತಪಡಿಸಿಕೊಳ್ಳಲು ಯೋಗ್ಯತೆಯಿಲ್ಲದ ರಾಷ್ಟ್ರವೊಂದು, ಭಾರತದಂತಹ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ಮಾನವ ಹಕ್ಕುಗಳ ಕುರಿತು ಉಪನ್ಯಾಸ ನೀಡುವ ಯಾವುದೇ ಹಕ್ಕನ್ನು ಹೊಂದಿಲ್ಲ ಎಂದು ಮಂಗಳಾನಂದನ್ ಗುಡುಗಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com