ನಾ ಕೊಡೆ ನೀ ಬೀಡೆಯಾಂತದ ಉತ್ತರ ಪ್ರದೇಶ ಸೀಟು ಹಂಚಿಕೆ! 200 ಸೀಟುಗಳಿಗೆ ಕಾಂಗ್ರೆಸ್ ಡಿಮ್ಯಾಂಡ್, 70ಕ್ಕೆ ಕಟ್ಟಿಹಾಕಲು ಎಸ್‌ಪಿ ಮಾಸ್ಟರ್ ಪ್ಲ್ಯಾನ್

ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ರಣತಂತ್ರ ಹೆಣೆಯುತ್ತಿದ್ದರೆ, ಅತ್ತ ಇಂಡಿ ಮೈತ್ರಿಕೂಟದಲ್ಲಿ ಸೀಟು ಹಂಚಿಕೆಯ ಕಿತ್ತಾಟ ತೀವ್ರಗೊಂಡಿದೆ. ಆ ಕುರಿತ ವರದಿ ಇಲ್ಲಿದೆ:
UP Assembly Polls: Congress Demands Up To 200 Seats, Samajwadi Party Reluctant To Offer More Than 70
200 ಸೀಟುಗಳಿಗೆ ಕಾಂಗ್ರೆಸ್ ಡಿಮ್ಯಾಂಡ್, 70ಕ್ಕೆ ಕಟ್ಟಿಹಾಕಲು ಎಸ್‌ಪಿ ಮಾಸ್ಟರ್ ಪ್ಲ್ಯಾನ್Online Desk
Updated on: 

ಲಖನೌ (ಉತ್ತರ ಪ್ರದೇಶ): ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಒಂದೆಡೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಾಯಕತ್ವದಲ್ಲೇ ಭಾರತೀಯ ಜನತಾ ಪಾರ್ಟಿ ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯಲು ಭಾರಿ ಸಿದ್ಧತೆ ನಡೆಸುತ್ತಿದೆ. ಮತ್ತೊಂದೆಡೆ, ಇಂಡಿ ಮೈತ್ರಿಕೂಟದ ಪಾಲುದಾರರಾದ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವೆ ಸೀಟು ಹಂಚಿಕೆ ಕಸರತ್ತು ಆರಂಭವಾಗಿದ್ದು, ಕಾಂಗ್ರೆಸ್‌ 175 ರಿಂದ 200 ಸ್ಥಾನಗಳಿಗೆ ಬೇಡಿಕೆ ಇಟ್ಟಿರೆ, ಸುಮಾರು 60 ರಿಂದ 70 ಸ್ಥಾನಗಳನ್ನು ನೀಡುವ ಬಗ್ಗೆ ಸಮಾಜವಾದಿ ಪಕ್ಷ ಚಿಂತನೆ ನಡೆಸುತ್ತಿದೆ. ಆ ಕುರಿತ ವರದಿ ಇಲ್ಲಿದೆ:

200 ಸೀಟ್‌ಗೆ ಕಾಂಗ್ರೆಸ್‌ ಡಿಮ್ಯಾಂಡ್‌; 70 ಸ್ಥಾನ ನೀಡುವ ಬಗ್ಗೆ ಎಸ್‌ಪಿ ಚಿಂತನೆ

ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಒಟ್ಟು 403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ ಈಗಾಗಲೇ 175 ರಿಂದ 200 ಕ್ಷೇತ್ರಗಳ ಆರಂಭಿಕ ಪಟ್ಟಿಯನ್ನು ಸಮಾಜವಾದಿ ಪಕ್ಷಕ್ಕೆ ಸಲ್ಲಿಸಿದೆ. ತಮ್ಮ ಇತ್ತೀಚಿನ ಒಟ್ಟಾರೆ ಪ್ರಭಾವದ ಆಧಾರದ ಮೇಲೆ ತಮಗೆ ಮೈತ್ರಿಕೂಟದಲ್ಲಿ ಸಮಾನ ಗೌರವ ಹಾಗೂ ದೊಡ್ಡ ಪಾಲು ಸಿಗಬೇಕು ಎಂದು ಕಾಂಗ್ರೆಸ್ ನಾಯಕರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನ ಈ ಭಾರಿ ಬೇಡಿಕೆಗೆ ಸಮಾಜವಾದಿ ಪಕ್ಷದ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಇಷ್ಟೊಂದು ಸ್ಥಾನಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿಲ್ಲ ಎಂದು ಭಾವಿಸಿರುವ ಎಸ್‌ಪಿ, ಕೇವಲ 60 ರಿಂದ 70 ಸ್ಥಾನಗಳನ್ನು ಮಾತ್ರ ಕಾಂಗ್ರೆಸ್‌ಗೆ ಬಿಟ್ಟುಕೊಡಲು ಚಿಂತನೆ ನಡೆಸಿದೆ. ಅದರಲ್ಲೂ, 2022ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ 399 ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ 2 ಸ್ಥಾನಗಳನ್ನು ಗೆದ್ದಿತ್ತು. ಆದರೆ, 2024ರ ಲೋಕಸಭೆ ಚುನಾವಣೆಯಲ್ಲಿ ಎಸ್‌ಪಿ ಜೊತೆಗಿನ ಮೈತ್ರಿಯಲ್ಲಿ ಕಾಂಗ್ರೆಸ್ 6 ಸಂಸತ್ ಸ್ಥಾನಗಳನ್ನು ಗೆದ್ದುಕೊಂಡರೆ, ಸಮಾಜವಾದಿ ಪಕ್ಷವು ಭರ್ಜರಿ 37 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಈ ಲೋಕಸಭೆ ಚುನಾವಣೆಯ ಸುಧಾರಿತ ಪ್ರದರ್ಶನವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹೆಚ್ಚಿನ ಸೀಟುಗಳಿಗಾಗಿ ಪಟ್ಟು ಹಿಡಿದಿದೆ.

UP Assembly Polls: Congress Demands Up To 200 Seats, Samajwadi Party Reluctant To Offer More Than 70
ಗಾಂಧಿ ಕುಟುಂಬದಲ್ಲಿ ಆಂತರಿಕ ಕಲಹ? ಪ್ರಿಯಾಂಕಾ ಮಗನ ಫೋಟೋ ಪ್ರದರ್ಶನಕ್ಕೆ ಬಿಕಾನೇರ್ ಹೌಸ್ ಕತ್ತರಿ: ರಾಹುಲ್ ಮೌನ ಪ್ರಶ್ನಿಸಿದ ಬಿಜೆಪಿ

ಗೆಲ್ಲುವ ಸಾಮರ್ಥ್ಯವೇ ಮಾನದಂಡ

ಕಾಂಗ್ರೆಸ್‌ನ ಈ ದೊಡ್ಡ ಬೇಡಿಕೆಯ ಬಗ್ಗೆ ಸಮಾಜವಾದಿ ಪಕ್ಷದ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಂತೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, "ಚುನಾವಣೆಯಲ್ಲಿ ಕೇವಲ ಸೀಟುಗಳ ಸಂಖ್ಯೆ ಮುಖ್ಯವಲ್ಲ, ಅಭ್ಯರ್ಥಿಯ ಗೆಲ್ಲುವ ಸಾಮರ್ಥ್ಯವೇ ಸೀಟು ಹಂಚಿಕೆಗೆ ಪ್ರಮುಖ ಮಾನದಂಡ" ಎಂದು ಸ್ಪಷ್ಟಪಡಿಸಿದ್ದಾರೆ. ಏತನ್ಮಧ್ಯೆ, ಕಾಂಗ್ರೆಸ್ ಪರವಾಗಿ ಸೀಟು ಹಂಚಿಕೆ ಮಾತುಕತೆಯ ಜವಾಬ್ದಾರಿಯನ್ನು ಪ್ರಿಯಾಂಕಾ ಗಾಂಧಿ ವಾದ್ರಾ ವಹಿಸಿಕೊಂಡಿದ್ದು, ರಾಜ್ಯ ನಾಯಕರೊಂದಿಗೆ ಸಭೆ ನಡೆಸಿ ನವೆಂಬರ್ ಮಧ್ಯಭಾಗದೊಳಗೆ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ಬಯಸಿದ್ದಾರೆ. ಹಾಗಾಗಿ, ಸೀಟು ಹಂಚಿಕೆಯಲ್ಲಿ ಇಷ್ಟೆಲ್ಲಾ ಚರ್ಚೆಗಳು ನಡೆಯುತ್ತಿದ್ದರೂ, ಅಂತಿಮವಾಗಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದೇ ಉಭಯ ಪಕ್ಷಗಳ ಜಂಟಿ ಗುರಿಯಾಗಿದೆ. ಹೀಗಾಗಿ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ನಾಯಕರು ಒಟ್ಟಾಗಿ ಕುಳಿತು ಸೌರ್ಹಾದ್ಯುತವಾಗಿ ಮಾತುಕತೆ ಮೂಲಕ ನವೆಂಬರ್ ವೇಳೆಗೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com