

ಮಧೇಪುರಾ: ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಭದ್ರತೆಗೆ ನಿಯೋಜಿಸಿದ್ದ ಸಿಆರ್ ಪಿಎಫ್ ಯೋಧನನ್ನು ಸಂಸದನೋರ್ವ ಹೊರದಬ್ಬಿದ ಘಟನೆ ನಡೆದಿದೆ.
ಬಿಹಾರದ ಮಧೇಪುರಾ ಜಿಲ್ಲೆಯಲ್ಲಿ ನಡೆದ ಖುರ್ಡಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಹೊಸ ವಿವಾದವೊಂದು ಸೃಷ್ಟಿಯಾಗಿದೆ.
ಪೂರ್ಣಿಯಾದ ಪಕ್ಷೇತರ ಸಂಸದ ಪಪ್ಪು ಯಾದವ್ ಅವರು ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ತಳ್ಳಿ ವೇದಿಕೆಯಿಂದ ಕೆಳಗಿಳಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಘಟನೆಗೆ ಸಂಬಂಧಿಸಿದಂತೆ ಸಂಸದರ ವರ್ತನೆಯ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
ವರದಿಗಳ ಪ್ರಕಾರ, ಸಂಸದರ ಭದ್ರತೆಗೆ ನಿಯೋಜಿಸಲಾಗಿದ್ದ ಈ ಸಿಬ್ಬಂದಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಅಥವಾ ಬಿಹಾರ ವಿಶೇಷ ಸಶಸ್ತ್ರ ಪೊಲೀಸ್ ಪಡೆಯ (ಬಿಎಸ್‌ಎಪಿ) ಸದಸ್ಯರಾಗಿರಬಹುದು ಎಂದು ಹೇಳಲಾಗಿದೆ. ಆದರೆ, ಸಿಬ್ಬಂದಿಯ ನಿಖರ ಗುರುತು ದೃಢಪಟ್ಟಿಲ್ಲ.
ಖುರ್ಡಾ ಮಹೋತ್ಸವದ ವೇದಿಕೆಯಲ್ಲಿ ನಡೆದದ್ದೇನು?
ಪಪ್ಪು ಯಾದವ್ ಅವರ ತವರು ಜಿಲ್ಲೆಯಾದ ಮಧೇಪುರಾದ ಖುರ್ಡಾದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡ ಖುರ್ಡಾ ಮಹೋತ್ಸವ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ಸಂಸದರ ರಕ್ಷಣೆಯ ಕರ್ತವ್ಯ ನಿರ್ವಹಿಸುತ್ತಿದ್ದರು.
ಕಾರ್ಯಕ್ರಮದ ಮಧ್ಯೆ ವೇದಿಕೆಯಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ಕಂಡು ಪಪ್ಪು ಯಾದವ್ ಅಸಮಾಧಾನಗೊಂಡಿದ್ದು, ಬಳಿಕ ಸಂಪೂರ್ಣ ಸಮವಸ್ತ್ರದಲ್ಲಿದ್ದ ಸಿಬ್ಬಂದಿಯನ್ನು ಕೈಯಿಂದ ತಳ್ಳಿ ವೇದಿಕೆಯಿಂದ ಕೆಳಗಿಳಿಯುವಂತೆ ಮಾಡಿದ್ದಾರೆ. ಈ ದೃಶ್ಯವನ್ನು ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಲವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ.
ಸಿಬ್ಬಂದಿ ಕೆಳಗಿಳಿದ ಬೆನ್ನಲ್ಲೇ ಖೇಸಾರಿ ಲಾಲ್ ಯಾದವ್ ಎಂಟ್ರಿ
ವೈರಲ್ ವಿಡಿಯೊದಲ್ಲಿ, ಸಂಸದರಿಂದ ತಳ್ಳಲ್ಪಟ್ಟ ಬಳಿಕ ಭದ್ರತಾ ಸಿಬ್ಬಂದಿ ಯಾವುದೇ ವಾಗ್ವಾದಕ್ಕೆ ಇಳಿಯದೆ ಶಿಸ್ತಿನಿಂದ ವೇದಿಕೆಯಿಂದ ಕೆಳಗಿಳಿಯುವುದನ್ನು ಕಾಣಬಹುದು. ಸಿಬ್ಬಂದಿ ವೇದಿಕೆಯಿಂದ ಕೆಳಗಿಳಿದ ತಕ್ಷಣವೇ ಭೋಜ್‌ಪುರಿ ಗಾಯಕ ಹಾಗೂ ನಟ ಖೇಸಾರಿ ಲಾಲ್ ಯಾದವ್ ವೇದಿಕೆಗೆ ಪ್ರವೇಶಿಸುವ ದೃಶ್ಯವೂ ವಿಡಿಯೊದಲ್ಲಿದೆ. ಈ ಘಟನೆಯ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಸಂಸದರ ವರ್ತನೆಗೆ ಸಾರ್ವಜನಿಕರ ಆಕ್ರೋಶ
ವಿಡಿಯೊ ವೈರಲ್ ಆಗುತ್ತಿದ್ದಂತೆ ಅನೇಕರು ಭದ್ರತಾ ಸಿಬ್ಬಂದಿಯ ಬೆಂಬಲಕ್ಕೆ ನಿಂತಿದ್ದಾರೆ. ಕರ್ತವ್ಯ ನಿರ್ವಹಿಸುತ್ತಿದ್ದ ಸಮವಸ್ತ್ರಧಾರಿ ಸಿಬ್ಬಂದಿಯನ್ನು ಸಾರ್ವಜನಿಕ ವೇದಿಕೆಯಲ್ಲಿ ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಹಲವರು ಟೀಕಿಸಿದ್ದಾರೆ.
ಜನಪ್ರತಿನಿಧಿಗಳ ಸಾರ್ವಜನಿಕ ವರ್ತನೆ ಹಾಗೂ ಭದ್ರತಾ ಸಿಬ್ಬಂದಿಯ ಗೌರವದ ಕುರಿತು ಈ ಘಟನೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ನಾಯಕರ ಸುರಕ್ಷತೆಗಾಗಿ ನಿಯೋಜನೆಗೊಂಡಿರುವ ಸಿಬ್ಬಂದಿಯೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿವೆ.