

ಥೇನಿ: ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ 17 ಕೈದಿಗಳು ಪರಾರಿಯಾಗಿದ್ದಾರೆ. ತಮಿಳುನಾಡಿನ ಥೇನಿ ಜಿಲ್ಲೆಯಲ್ಲಿರುವ ತೆಕ್ಕಂಪಟ್ಟಿ ಉಪ-ಜೈಲಿನಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಪರಾರಿಯಾದವರ ಪೈಕಿ ಒಬ್ಬನನ್ನು ಈಗಾಗಲೇ ಬಂಧಿಸಲಾಗಿದ್ದು, ಉಳಿದವರಿಗಾಗಿ ಪೊಲೀಸರು 17 ವಿಶೇಷ ತಂಡಗಳನ್ನು ನಿಯೋಜಿಸಿದ್ದಾರೆ.
ಈ ಕುರಿತು ಮಾತನಾಡಿದ ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ವಿಜಯೇಂದ್ರ ಬಿದರಿ, ಜೈಲಿನ ಹಿಂಭಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಮಧುರೈ ಮೂಲದ ಒಬ್ಬ ಕೈದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಪೊಲೀಸರ ಪ್ರಕಾರ, ಈ 17 ಕೈದಿಗಳನ್ನು ಒಂದೇ ಸೆಲ್ ನಲ್ಲಿ ಇರಿಸಲಾಗಿತ್ತು. ಕೈದಿಗಳಲ್ಲಿ ಒಬ್ಬನಿಗೆ ಹುಷಾರಿಲ್ಲ ಎಂಬ ಮಾಹಿತಿ ತಿಳಿದು ಜೈಲು ಸಿಬ್ಬಂದಿ ಕೊಠಡಿ ಪ್ರವೇಶಿಸಿದಾಗ ಈ ಕೈದಿಗಳು ಪರಾರಿಯಾಗಿದ್ದಾರೆ. ಪರಾರಿಯಾಗುವ ಮುನ್ನ ಕೈದಿಗಳು ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ.
ಕೈದಿಗಳು ತಾವು ಪರಾರಿಯಾಗುವ ಯೋಜನೆಯ ಭಾಗವಾಗಿ "ಫಿಟ್ಸ್ (ಮೂರ್ಛೆ ರೋಗ) ಬಂದಂತೆ ನಾಟಕ"ವಾಡಿದ್ದಾರೆ. ಈ ಘಟನೆಯಲ್ಲಿ ಥೇನಿ ಜಿಲ್ಲಾ ಜೈಲಿಗೆ ನಿಯೋಜಿತರಾಗಿದ್ದ ದರ್ಜೆ-2 (ಗ್ರೇಡ್-2) ಪೊಲೀಸ್ ಸಿಬ್ಬಂದಿ ತಂಗಪಾಂಡಿ ಅವರ ತಲೆಗೆ ಗಾಯವಾಗಿದ್ದು, ಅವರನ್ನು ಜಿ. ವಿಲಕ್ಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಜೈಲು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಬಿದರಿ ತಿಳಿಸಿದ್ದಾರೆ.
ಪರಾರಿಯಾದ ಉಳಿದ ಕೈದಿಗಳನ್ನು ಪತ್ತೆಹಚ್ಚಲು ಪೊಲೀಸರು ತೀವ್ರ ಕಾರ್ಯಾಚರಣೆ ಆರಂಭಿಸಿದ್ದಾರೆ. ನೆರೆಯ ಜಿಲ್ಲೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅಧಿಕಾರಿಗಳು ವಾಹನಗಳನ್ನು ತಪಾಸಣೆ ಮಾಡುತ್ತಿದ್ದು, ಕೈದಿಗಳು ಪರಾರಿಯಾಗಲು ಬಳಸಿಕೊಂಡಿರಬಹುದಾದ ಮಾರ್ಗಗಳ ಮೇಲೆ ನಿಗಾ ಇರಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ನೆರೆಯ ಜಿಲ್ಲೆಯ 16 ಕಡೆಗಳಲ್ಲಿ ತಪಾಸಣಾ ಕೇಂದ್ರಗಳನ್ನು (ಚೆಕ್ಪಾಯಿಂಟ್ಗಳು) ಸ್ಥಾಪಿಸಲಾಗಿದೆ ಎಂದು ದಿಂಡಿಗಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಯಕುಮಾರ್ ತಿಳಿಸಿದ್ದಾರೆ. ದಿಂಡಿಗಲ್-ಥೇನಿ ಹೆದ್ದಾರಿಯಲ್ಲಿ ವಾಹನ ತಪಾಸಣೆಯನ್ನು ಕೂಡ ತೀವ್ರಗೊಳಿಸಲಾಗಿದೆ.
ಮಧುರೈ, ದಿಂಡಿಗಲ್ ಮತ್ತು ಇಡುಕ್ಕಿ ಪೊಲೀಸರನ್ನು ಎಚ್ಚರಿಸಲಾಗಿದೆ. ಪರಾರಿಯಾದ ಕೈದಿಗಳನ್ನು ಗುರುತಿಸಲು ಮತ್ತು ಬಂಧಿಸಲು ಅನುಕೂಲವಾಗುವಂತೆ ಅವರ ಪೋಟೋಗಳನ್ನು ಅಧಿಕಾರಿಗಳಿಗೆ ಹಂಚಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಜೈಲಿನಿಂದ ಕೈದಿಗಳು ಪರಾರಿಯಾಗಿರುವುದು ರಾಜಕೀಯ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ಡಿಎಂಕೆ ರಾಜ್ಯಸಭಾ ಸಂಸದ ಪಿ. ವಿಲ್ಸನ್ ಅವರು ರಾಜ್ಯ ಸರ್ಕಾರದ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಯನ್ನು ಟೀಕಿಸಿದ್ದಾರೆ.
'ಎಕ್ಸ್' (X) ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಲ್ಸನ್, ಈ ಘಟನೆಯನ್ನು "ಅವಮಾನಕರ" ಎಂದು ಕರೆದಿದ್ದು, ಇದು ತಮಿಳುನಾಡಿನ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಈ ಘಟನೆಗೆ ನೈತಿಕ ಹೊಣೆ ಹೊರಬೇಕೆಂದು ಅವರು ಆಗ್ರಹಿಸಿದ್ದಾರೆ.
ತಮಿಳುನಾಡಿನ ಅತ್ಯಂತ ಸುರಕ್ಷಿತವೆಂದು ಪರಿಗಣಿಸಲ್ಪಟ್ಟ ಪುಝಲ್ (Puzhal) ಜೈಲಿನಿಂದ ಕಳೆದ ವಾರ ಇಬ್ಬರು ಕೈದಿಗಳು ಪರಾರಿಯಾದ ಘಟನೆಯನ್ನು ಉಲ್ಲೇಖಿಸಿರುವ ವಿಲ್ಸನ್, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ