

ಗುವಾಹಟಿ (ಅಸ್ಸಾಂ): ಅಸ್ಸಾಂನ ಗುವಾಹಟಿಯ ಲಚಿತ್ ನಗರದ (ಬೋರಾ ಸರ್ವಿಸ್ ಪ್ರದೇಶ) ಹೋಟೆಲ್ ಬಿಲಾಸ್ ಇನ್‌ನಲ್ಲಿ ಸೋಮವಾರ ರಾತ್ರಿ ಭೀಕರ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 6 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಆಸ್ತಿ ವಿವಾದವೇ ಈ ಘಟನೆಗೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಆ ಕುರಿತ ವರದಿ ಇಲ್ಲಿದೆ:
ಘಟನೆಯ ಹಿನ್ನೆಲೆ:
ಸುಮಾರು ಒಂದು ವರ್ಷದ ಹಿಂದೆ ಈ ಹೋಟೆಲ್ ಅನ್ನು ಘನಕಾಂತ ಗೊಗೊಯ್ ಎಂಬಾತನಿಗೆ ಗುತ್ತಿಗೆಗೆ (ಲೀಸ್) ನೀಡಲಾಗಿತ್ತು. ಹೋಟೆಲ್ ಮಾಲೀಕರು ಮತ್ತು ಗುತ್ತಿಗೆದಾರನ ನಡುವೆ ಉಂಟಾಗಿದ್ದ ಆಸ್ತಿ ಹಾಗೂ ಗುತ್ತಿಗೆ ಒಪ್ಪಂದದ ತೀವ್ರ ವಿವಾದವೇ ಈ ರಕ್ತಪಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ವಿಷಯವಾಗಿ ಹೊಟೇಲ್‌ನಲ್ಲಿ ನಡೆದ ದಾಳಿಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅದರಂತೆ, ಮೃತರಲ್ಲಿ ಹೋಟೆಲ್ ಮಾಲೀಕರಾದ ಹೆಲೆನಾ ಭಾರಾಲಿ, ಅವರ ಪುತ್ರ ದೇವರ್ಶಿ ಕಶ್ಯಪ್, ಚಾಲಕ ಹಾಗೂ ಇತರರಾದ ನಾರಾಯಣ್ ದಾಸ್ ಮತ್ತು ಸತ್ಯೇಂದ್ರ ಪಥಕ್ ಸೇರಿದ್ದಾರೆ. ಅದರಲ್ಲೂ, ಮೃತರಲ್ಲಿ ನಾಲ್ವರು ಒಂದೇ ಕುಟುಂಬದವರಾಗಿದ್ದಾರೆ ಎಂದು ತಿಳಿದುಬಂದಿದೆ.
ಮುಂದುವರೆದು, ಗುವಾಹಟಿ ಪೊಲೀಸ್ ಆಯುಕ್ತ ಪಾರ್ಥ ಸಾರಥಿ ಮಹಂತ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಮುಖ್ಯ ಆರೋಪಿ ಘನಕಾಂತ ಗೊಗೊಯ್ ಮತ್ತು ಮತ್ತೊಬ್ಬ ಶಂಕಿತನನ್ನು ಬಂಧಿಸಿದ್ದಾರೆ. ಇದರೊಂದಿಗೆ ದಾಳಿಗೆ ಬಳಸಲಾಗಿದ್ದ .32 ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೂ ಗಾಯಗೊಂಡವರನ್ನು ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (GMCH) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯು ಗುವಾಹಟಿಯಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದು, ಅಸ್ಸಾಂ ಸರ್ಕಾರ ಮತ್ತು ಕಾನೂನು ಸುವ್ಯವಸ್ಥೆಯ ವಿರುದ್ಧ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ಈ ಘಟನೆಯ ಬೆನ್ನಲ್ಲೇ, ಅಸ್ಸಾಂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಂಸದ ಗೌರವ್ ಗೊಗೊಯ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿ, ಈ ಘಟನೆಯು ಗುವಾಹಟಿಯಲ್ಲಿ ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದು, ಮುಖ್ಯಮಂತ್ರಿ ಹಾಗೂ ಗೃಹ ಸಚಿವರಾದ ಹಿಮಂತ ಬಿಸ್ವಾ ಶರ್ಮಾ ಅವರು ಇದರ ಹೊಣೆ ಹೊರಬೇಕು ಎಂದು ಆಗ್ರಹಿಸಿದ್ದಾರೆ.