ವೋಟ್ ಬ್ಯಾಂಕ್‌ಗೋಸ್ಕರ ಹಣೆ ಮೇಲೆ ಕುಂಕುಮ, ವಿಭೂತಿ ಬೇಡ: ದೇವಾಲಯಗಳಿಗೆ ಅನ್ಯಧರ್ಮೀಯರ ಪ್ರವೇಶಕ್ಕೆ ಹೈಕೋರ್ಟ್ ಕಠಿಣ ನಿಯಮ

ಕೇವಲ ವೋಟಿಗಾಗಿ ಹಣೆಯ ಮೇಲೆ ದೊಡ್ಡದಾಗಿ ಕುಂಕುಮ, ವಿಭೂತಿ ಧರಿಸಿ ದೇವಸ್ಥಾನಗಳಿಗೆ ಭೇಟಿ ನೀಡುವ ರಾಜಕಾರಣಿಗಳಿಗೆ ಹೈಕೋರ್ಟ್ ಬಿಗ್‌ಶಾಕ್‌ ನೀಡಿದೆ. ದೇವರ ಹೆಸರಿನಲ್ಲಿ ರಾಜಕೀಯ ಪ್ರದರ್ಶನ ಇನ್ಮುಂದೆ ನಡೆಯುವುದಿಲ್ಲ ಎಂದ ನ್ಯಾಯಾಲಯ, ಹಿಂದೂಯೇತರರು ದೇವಾಲಯ ಪ್ರವೇಶಿಸುವ ಕುರಿತು ಮಹತ್ವದ ಆದೇಶ ನೀಡಿದೆ.
Madras High Court Mandates Written Pledge For Non Hindus Entering Agamic Temples, Slams Vote Bank Politics
ವೋಟ್ ಬ್ಯಾಂಕ್‌ಗೋಸ್ಕರ ಹಣೆ ಮೇಲೆ ಕುಂಕುಮ, ವಿಭೂತಿ ಬೇಡOnline Desk
Updated on: 

ಮಧುರೈ (ತಮಿಳುನಾಡು): ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ತಮಿಳುನಾಡಿನ ಆಗಮಿಕ ದೇವಾಲಯಗಳ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಒಂದು ಪ್ರಮುಖ ತೀರ್ಪು ನೀಡಿದ್ದು, ಧಾರ್ಮಿಕ ಚಿಹ್ನೆಗಳನ್ನು ಧರಿಸಿರುವ ಹಿಂದೂಯೇತರರು ದೇವರಿಗೆ ಗೌರವ ಸಲ್ಲಿಸುವ ಲಿಖಿತ ಘೋಷಣೆಯನ್ನು ನೀಡದೆ ದೇವಾಲಯದ ಆವರಣವನ್ನು ಪ್ರವೇಶಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ದೇವಾಲಯದ ಆವರಣದಲ್ಲಿ ರಾಜಕೀಯ ಪ್ರದರ್ಶನ, ಓಲೈಕೆ ರಾಜಕಾರಣ ಮತ್ತು ಕೇವಲ ವೋಟ್ ಬ್ಯಾಂಕ್‌ಗಾಗಿ ಭಕ್ತಿ ಪ್ರದರ್ಶಿಸುವುದರ ವಿರುದ್ಧ ಕಠಿಣ ಎಚ್ಚರಿಕೆ ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ವೋಟ್ ಬ್ಯಾಂಕ್‌ಗಾಗಿ ಹಣೆ ಮೇಲೆ ದೊಡ್ಡದಾಗಿ ಕುಂಕುಮ/ವಿಭೂತಿ

ಮಧುರೈನ ಕೆ. ತಂಗಂ ವೆಂಕಟೇಶ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ಪಿ. ಮುರುಗನ್ ಅವರನ್ನೊಳಗೊಂಡ ಮಧುರೈ ಪೀಠವು, ತಮಿಳುನಾಡು ದೇವಾಲಯ ಪ್ರವೇಶ ಅಧಿಕೃತ ಕಾಯ್ದೆ, 1947 ರ ಅಡಿಯಲ್ಲಿ, ಧಾರ್ಮಿಕ ಚಿಹ್ನೆಗಳನ್ನು ಧರಿಸಿರುವ ಯಾವುದೇ ಹಿಂದೂಯೇತರ ವ್ಯಕ್ತಿ ಆಗಮಿಕ ದೇವಾಲಯಗಳನ್ನು ಪ್ರವೇಶಿಸಬೇಕಾದರೆ, ತಮಗೆ ಆ ದೇವರ ಮೇಲೆ ನಂಬಿಕೆ ಮತ್ತು ಗೌರವ ಇದೆ ಎಂಬುದನ್ನು ದೃಢೀಕರಿಸುವ ಲಿಖಿತ ಮುಚ್ಚಳಿಕೆಯನ್ನು ನಿಗದಿತ ನಮೂನೆಯಲ್ಲಿ ನೀಡಬೇಕು. ಅಂತಹ ಒಪ್ಪಿಗೆ ನೀಡದಿದ್ದರೆ ದೇವಾಲಯದ ಆವರಣದ ಒಳಗೂ ಬಿಡಬಾರದು ಎಂದು ಹೇಳಿದೆ.

ಅದರಲ್ಲೂ, ಕೆಲವು ಹಿಂದೂಯೇತರ ರಾಜಕೀಯ ನಾಯಕರು ಕೇವಲ ರಾಜಕೀಯ ಲಾಭಕ್ಕಾಗಿ ಮತ್ತು ವೋಟ್ ಬ್ಯಾಂಕ್‌ಗಾಗಿ ಹಣೆ ಮೇಲೆ ದೊಡ್ಡದಾಗಿ ಧಾರ್ಮಿಕ ಚಿಹ್ನೆಗಳನ್ನು (ಕುಂಕುಮ/ವಿಭೂತಿ) ಧರಿಸಿ ದೇವಾಲಯಗಳಿಗೆ ಭೇಟಿ ನೀಡುವುದನ್ನು ನ್ಯಾಯಾಲಯವು "ರಾಜಕೀಯ ಚಮಚಾಗಿರಿ ಮತ್ತು ಪ್ರದರ್ಶನ" ಎಂದು ಕಟುವಾಗಿ ಟೀಕಿಸಿದೆ. ಇಂತಹ ಪ್ರದರ್ಶನಗಳ ಹಿಂದಿರುವ ವೋಟ್ ಬ್ಯಾಂಕ್ ರಾಜಕಾರಣದ ಉದ್ದೇಶ ಸ್ಪಷ್ಟವಾಗಿದೆ. ಆದರೆ, ಇಂತಹ ಪ್ರದರ್ಶನಗಳಿಗೆ ದೇವಾಲಯದ ಶತಮಾನಗಳ ಇತಿಹಾಸವಿರುವ ಸಂಪ್ರದಾಯ ಮತ್ತು ಪದ್ಧತಿಗಳು ಬಲಿಯಾಗಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಅದರಂತೆ, ವಿಚಾರಣೆ ವೇಳೆ, ಕೇವಲ ರಾಜಕೀಯ ಪ್ರಭಾವ ಬಳಸಿ ದೇವಾಲಯದ ಪದ್ಧತಿಗಳನ್ನು ಉಲ್ಲಂಘಿಸಿದ ಕೆಲವು ಇತ್ತೀಚಿನ ಘಟನೆಗಳನ್ನು ನ್ಯಾಯಾಲಯ ಸ್ವತಃ ಉಲ್ಲೇಖಿಸಿದೆ. ಅವು,

  • ಶಾಸಕ ಬದ್ರುದ್ದೀನ್ ಮುಸ್ತಫಾ ಪ್ರಕರಣ: ಟಿವಿಕೆ ಪಕ್ಷದ ಶಾಸಕ ಬದ್ರುದ್ದೀನ್ ಮುಸ್ತಫಾ ಅವರು ಮಧುರೈ ಮೀನಾಕ್ಷಿ ಅಮ್ಮನ್ ದೇವಾಲಯದ ಕುಂಭಾಭಿಷೇಕದ ಸಂದರ್ಭದಲ್ಲಿ, ಸೌಲಭ್ಯಗಳನ್ನು ಪರಿಶೀಲಿಸುತ್ತೇನೆ ಎಂಬ ನೆಪದಲ್ಲಿ ದೇವಾಲಯದ ಗೋಪುರವನ್ನು ಏರಿದ್ದನ್ನು ಕೋರ್ಟ್ ಪ್ರಶ್ನಿಸಿದೆ. ಒಂದು ಕಡೆ "ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು" ಎಂದು ಬಹಿರಂಗವಾಗಿ ಘೋಷಿಸುವ ನಾಯಕರೇ, ಮತ್ತೊಂದೆಡೆ ಪವಿತ್ರ ಧಾರ್ಮಿಕ ಕಾರ್ಯಕ್ರಮದ ವೇಳೆ ಗೋಪುರ ಏರುವುದು ಅತ್ಯಂತ ವ್ಯಂಗ್ಯದ ಸಂಗತಿ ಎಂದು ನ್ಯಾಯಾಧೀಶರು ಆಕ್ರೋಶ ವ್ಯಕ್ತಪಡಿಸಿದರು.

  • ಸಚಿವರ ನಿಯಮ ಉಲ್ಲಂಘನೆ: ಕ್ರಿಶ್ಚಿಯನ್ ಧರ್ಮದವರಾದ ತಮಿಳುನಾಡಿನ ಸಚಿವರೊಬ್ಬರು ಹಿಂದೂಯೇತರರಿಗೆ ಅನ್ವಯವಾಗುವ ಯಾವುದೇ ಮುಚ್ಚಳಿಕೆಯನ್ನು ನೀಡದೆಯೇ ತಿರುಚೆಂದೂರು ದೇವಾಲಯವನ್ನು ಪ್ರವೇಶಿಸಿದ್ದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ.

  • ಅಧಿಕಾರಿಗಳ ಮೌನಕ್ಕೆ ಅಸಮಾಧಾನ: ತಿರುವಣ್ಣಾಮಲೈ ಅರುಣಾಚಲೇಶ್ವರರ್ ದೇವಾಲಯದಲ್ಲಿ ಧಾರ್ಮಿಕ ಟೋಪಿ ಧರಿಸಿದ ಕೆಲವು ವ್ಯಕ್ತಿಗಳು ಭಕ್ತರ ತೀವ್ರ ಪ್ರತಿಭಟನೆಯ ನಡುವೆಯೂ ಬಲವಂತವಾಗಿ ನುಗ್ಗಿದಾಗ, ಮುಜರಾಯಿ ಇಲಾಖೆಯ ಸಿಬ್ಬಂದಿ ಮೂಕಪ್ರೇಕ್ಷಕರಾಗಿ ನಿಂತಿದ್ದ ವಿಡಿಯೋವನ್ನು ಉಲ್ಲೇಖಿಸಿದ ಕೋರ್ಟ್, ಅಧಿಕಾರಿಗಳ ನಿರ್ಲಕ್ಷ್ಯವನ್ನು ತರಾಟೆಗೆ ತೆಗೆದುಕೊಂಡಿದೆ.

Madras High Court Mandates Written Pledge For Non Hindus Entering Agamic Temples, Slams Vote Bank Politics
ಸಿಎಂ ವಿಜಯ್‌ಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್: TVK ಸೇರಿದ್ದ 6 AIADMK ಶಾಸಕರ ವಿರುದ್ಧದ ಅರ್ಜಿ ವಜಾ!

ಈ ಮೂಲಕ ರಾಜಕೀಯ ನಾಯಕರು ಅಥವಾ ಸಚಿವರು ಎಂಬ ಕಾರಣಕ್ಕೆ ದೇವಾಲಯದ ನಿಯಮಗಳಿಂದ ಯಾರಿಗೂ ವಿನಾಯಿತಿ ನೀಡಲು ಸಾಧ್ಯವಿಲ್ಲ. ಕಾನೂನು ಎಲ್ಲರಿಗೂ ಒಂದೇ ಎಂದು ಪೀಠ ತಿಳಿಸಿದೆ. ಏತನ್ಮಧ್ಯೆ, ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಮೀನಾಕ್ಷಿ ದೇವಾಲಯಕ್ಕೆ ಭೇಟಿ ನೀಡಿದಾಗ, ನಿಯಮದಂತೆ ಹಿಂದೂಯೇತರರ ಮುಚ್ಚಳಿಕೆಗೆ ಸಹಿ ಹಾಕಿ, ದೇವರಿಗೆ ಗೌರವ ಸಲ್ಲಿಸಿ ಪ್ರವೇಶಿಸಿದ್ದರು. ಇದನ್ನು ಶ್ಲಾಘಿಸಿದ ಕೋರ್ಟ್, ಯಾರನ್ನೂ ಮತಾಂತರವಾಗಲು ಕೇಳುತ್ತಿಲ್ಲ, ಕೇವಲ ದೇವರ ಮೇಲಿನ ಭಕ್ತಿ ಮತ್ತು ನಿಯಮಗಳಿಗೆ ಗೌರವ ನೀಡಲು ಕೇಳಲಾಗುತ್ತಿದೆ; ಇದನ್ನು ರಾಜಕೀಯ ನಾಯಕರು ಕೂಡ ಪಾಲಿಸಬೇಕು ಎಂದು ಹೇಳಿದೆ.

ಆಗಮಿಕ ದೇವಾಲಯಗಳಿಗೆ ಮಾತ್ರ ಅನ್ವಯ

ಈ ನಿಯಮವು ಕೇವಲ ಆಗಮ ನಿಯಮಗಳ ಪ್ರಕಾರ ಪೂಜೆ ಮತ್ತು ವಿಧಿವಿಧಾನಗಳು ನಡೆಯುವ ದೇವಾಲಯಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಎಲ್ಲಾ ಧರ್ಮದ ಭಕ್ತರು ಭೇಟಿ ನೀಡುವ ಶಬರಿಮಲೆ ಅಯ್ಯಪ್ಪ ಅಥವಾ ಶಿರಡಿ ಸಾಯಿಬಾಬಾ ಮಂದಿರಗಳಂತಹ ಸ್ಥಳಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಒಟ್ಟಾರೆಯಾಗಿ, ರಾಜಕೀಯ ಪ್ರದರ್ಶನಗಳನ್ನು ಬದಿಗಿಟ್ಟು, ಯಾವುದೇ ಧರ್ಮದವರಾಗಿದ್ದರೂ ಆಗಮಿಕ ದೇವಾಲಯಗಳನ್ನು ಪ್ರವೇಶಿಸುವಾಗ ಅಲ್ಲಿನ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು ಎಂದು ಮದ್ರಾಸ್ ಹೈಕೋರ್ಟ್ ಆದೇಶದಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com