

ಅರ್ನಾಬ್ ಚಂಡಮಾರುತವು ಇಂದು ಮುಂಜಾನೆ ಆಂಧ್ರಪ್ರದೇಶದ ಯಾಣಂ ಮತ್ತು ನರಸಾಪುರ ಬಳಿ ಗಂಟೆಗೆ 125-135 ಕಿ.ಮೀ ವೇಗದ ತೀವ್ರ ಗಾಳಿಯೊಂದಿಗೆ ಕರಾವಳಿಯನ್ನು ದಾಟಿದ್ದು, ಆಂಧ್ರ ಹಾಗೂ ಒಡಿಶಾದಲ್ಲಿ ಭಾರಿ ಹಾನಿ ಉಂಟುಮಾಡಿದೆ. ಅದರಂತೆ, ಚಂಡಮಾರುತಕ್ಕೆ ಸಂಬಂಧಿಸಿದ ಘಟನೆಗಳಿಂದಾಗಿ ಆಂಧ್ರಪ್ರದೇಶದಲ್ಲಿ ಕನಿಷ್ಠ 6 ಜನರು ಸಾವನ್ನಪ್ಪಿದ್ದಾರೆ ಮತ್ತು ತೀವ್ರ ಮುನ್ನೆಚ್ಚರಿಕೆ ಕ್ರಮವಾಗಿ ಎರಡೂ ರಾಜ್ಯಗಳಿಂದ ಸುಮಾರು 1.8 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ಆಂಧ್ರಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತ
ಚಂಡಮಾರುತದ ತೀವ್ರತೆಗೆ ಆಂಧ್ರಪ್ರದೇಶದಲ್ಲಿ ಆರು ಜನರು ಬಲಿಯಾಗಿದ್ದಾರೆ. ಶ್ರೀಕಾಕುಳಂ ಸೇರಿದಂತೆ ಪ್ರಮುಖ ಕರಾವಳಿ ಜಿಲ್ಲೆಗಳಲ್ಲಿ ತೀವ್ರ ಹಾನಿ ವರದಿಯಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಜನರನ್ನು ರಕ್ಷಿಸಲು ಕೇವಲ ಆಂಧ್ರಪ್ರದೇಶ ಒಂದರಲ್ಲೇ 1 ಲಕ್ಷಕ್ಕೂ ಹೆಚ್ಚು ಜನರನ್ನು ಪರಿಹಾರ ಕೇಂದ್ರಗಳಿಗೆ ರವಾನಿಸಲಾಗಿದೆ. ಅದರಲ್ಲೂ, ಕೋನಸೀಮಾ ಒಂದರಲ್ಲೇ ಸುಮಾರು 6,000 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕಚ್ಚಿದ್ದು, ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಒಡಿಶಾದಲ್ಲೂ ಹೈ ಅಲರ್ಟ್
ಒಡಿಶಾದ ಪುರಿ, ಗಜಪತಿ, ಗಂಜಾಮ್, ರಾಯಗಢ, ಕೊರಾಪುಟ್ ಮತ್ತು ಮಾಲ್ಕಾನ್‌ನಗಿರಿ ಜಿಲ್ಲೆಗಳಲ್ಲಿ ತೀವ್ರ ಮಳೆಯಾಗುತ್ತಿದ್ದು, ಅದರಲ್ಲೂ, ಗಜಪತಿ ಜಿಲ್ಲೆಯ ಮಹೇಂದ್ರಗಢದಲ್ಲಿ ಅತಿ ಹೆಚ್ಚು ಅಂದರೆ 250 ಮಿ.ಮೀ ಮಳೆಯಾಗಿದೆ. ಮುನ್ನೆಚ್ಚರಿಕೆಯಾಗಿ ರಾಜ್ಯದ 30 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳನ್ನು ಮುಚ್ಚಲಾಗಿದೆ. ಒಡಿಶಾದಲ್ಲೂ ಸುಮಾರು 30 ರಿಂದ 48 ಸಾವಿರ ಜನರನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಭರದಿಂದ ಸಾಗುತ್ತಿದೆ.
ಮುಂದುವರೆದು, ಸುರಕ್ಷತೆಯ ದೃಷ್ಟಿಯಿಂದ ಪೂರ್ವ ಕರಾವಳಿ ಮಾರ್ಗದಲ್ಲಿ ಚಲಿಸುವ 50ಕ್ಕೂ ಹೆಚ್ಚು ರೈಲುಗಳ ಸಂಚಾರ ಹಾಗೂ 21 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಜೊತೆಗೆ, ಉಭಯ ರಾಜ್ಯಗಳಲ್ಲೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ನಿಯೋಜನೆಗೊಂಡಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.