'20 ಮಾರುಕಟ್ಟೆ, ₹12,000 ಕೋಟಿ ವಹಿವಾಟಿಗೆ ಅಡ್ಡಿ': ನವೆಂಬರ್ 1ರ ರ‍್ಯಾಲಿ ಮುಂದೂಡಿಕೆಗೆ ಸೋನಿಯಾ ಗಾಂಧಿಗೆ CTI ಪತ್ರ!

ಈ ಕಾರ್ಯಕ್ರಮವನ್ನು ನವೆಂಬರ್ 10-11ರ ನಂತರಕ್ಕೆ ಮುಂದೂಡುವಂತೆ ಅಥವಾ ಅದನ್ನು ಬುರಾರಿ ಮೈದಾನಕ್ಕೆ ಸ್ಥಳಾಂತರಿಸುವಂತೆ ಕೋರಲಾಗಿದೆ.
CTI urges Sonia Gandhi to defer Nov 1 Congress rally until after Diwali
ಸೋನಿಯಾ ಗಾಂಧಿ
Updated on: 

ನವದೆಹಲಿ: ನವೆಂಬರ್ 1 ರಂದು ರಾಮ್‌ಲೀಲಾ ಮೈದಾನದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಲು ಉದ್ದೇಶಿಸಿರುವ ಬೃಹತ್ ರ‍್ಯಾಲಿಯನ್ನು ಮುಂದೂಡುವಂತೆ, ದೆಹಲಿಯ 'ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ' (CTI) ಶುಕ್ರವಾರ ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಕೋರಿದೆ. ಈ ರ‍್ಯಾಲಿಯು 20 ಮಾರುಕಟ್ಟೆಗಳಲ್ಲಿ 10,000 ರಿಂದ 12,000 ಕೋಟಿ ರೂಪಾಯಿ ಮೌಲ್ಯದ ವಹಿವಾಟಿಗೆ ಅಡ್ಡಿಯುಂಟುಮಾಡಬಹುದು ಎಂದು ಅದು ಎಚ್ಚರಿಸಿದೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಸ್ತಾಪಿಸಿರುವ ಈ ರ‍್ಯಾಲಿಯು, ಮಾರುಕಟ್ಟೆಗಳು ದೀಪಾವಳಿ ಹಬ್ಬದ ಶಾಪಿಂಗ್ ಸೀಸನ್‌ಗಾಗಿ ಸಿದ್ಧತೆ ನಡೆಸುತ್ತಿರುವ ನಿರ್ಣಾಯಕ ಸಮಯದಲ್ಲಿ ನಡೆಯುತ್ತಿದೆ ಎಂದು ವ್ಯಾಪಾರಿಗಳ ಸಂಘಟನೆ ತಿಳಿಸಿದೆ.

ಈ ಕಾರ್ಯಕ್ರಮವನ್ನು ನವೆಂಬರ್ 10-11ರ ನಂತರಕ್ಕೆ ಮುಂದೂಡುವಂತೆ ಅಥವಾ ಅದನ್ನು ಬುರಾರಿ ಮೈದಾನಕ್ಕೆ ಸ್ಥಳಾಂತರಿಸುವಂತೆ ಕೋರಲಾಗಿದೆ.

ಈ ರ‍್ಯಾಲಿಯಲ್ಲಿ ಸುಮಾರು 10 ಲಕ್ಷ ಜನರು ಸೇರುವ ನಿರೀಕ್ಷೆಯಿದೆ; ಇದು ರಾಮಲೀಲಾ ಮೈದಾನದ ಸುತ್ತಮುತ್ತಲಿನ ಜನನಿಬಿಡ ಮಾರುಕಟ್ಟೆ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಮತ್ತು ವಾಹನ ನಿಲುಗಡೆ ವ್ಯವಸ್ಥೆಗಳ ಬಗ್ಗೆ ಕಳವಳವನ್ನು ಉಂಟುಮಾಡಿದೆ.

ಸುಮಾರು 20 ಲಕ್ಷ ವ್ಯಾಪಾರಿಗಳ ಪರವಾಗಿ ತಾವು ಈ ಮನವಿ ಮಾಡುತ್ತಿರುವುದಾಗಿ ಸಿಟಿಐ (CTI) ತಿಳಿಸಿದೆ. ತಾವು ರ್ಯಾಲಿಯನ್ನು ವಿರೋಧಿಸುತ್ತಿಲ್ಲವಾದರೂ, ಹಬ್ಬದ ಸೀಸನ್‌ನಲ್ಲಿ ವ್ಯಾಪಾರ-ವಹಿವಾಟುಗಳ ಮೇಲೆ ಉಂಟಾಗಬಹುದಾದ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

'ನಾವು ರ‍್ಯಾಲಿಯನ್ನು ವಿರೋಧಿಸುತ್ತಿಲ್ಲ. ದೀಪಾವಳಿಯಂತಹ ಪ್ರಮುಖ ಹಬ್ಬದ ಸಮಯದಲ್ಲಿ ನಮ್ಮ ಜೀವನೋಪಾಯವನ್ನು ರಕ್ಷಿಸಿಕೊಳ್ಳಲು, ಕೈಮುಗಿದು ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಅಷ್ಟೇ' ಎಂದು ವ್ಯಾಪಾರಿ ಸಂಘಟನೆ ಹೇಳಿದೆ.

CTI urges Sonia Gandhi to defer Nov 1 Congress rally until after Diwali
'ಲಾಠಿಗಳಿಗೆ ಹೆದರಬೇಡಿ': 'ಇಂಡಿಯಾ' ಮೈತ್ರಿಕೂಟದ 'ದೆಹಲಿ ಚಲೋ' ಮಾರ್ಚ್‌ನಲ್ಲಿ ಪಾಲ್ಗೊಳ್ಳುವಂತೆ ರಾಹುಲ್ ಗಾಂಧಿ ಕರೆ

ಪಾರ್ಕಿಂಗ್ ಮತ್ತು ಸಂಚಾರ ದಟ್ಟಣೆ ಸಮಸ್ಯೆ

ಈ ಬೃಹತ್ ಸಮಾವೇಶದಿಂದ ಉದ್ಭವಿಸಬಹುದಾದ ಹಲವಾರು ಸಂಭಾವ್ಯ ಸಮಸ್ಯೆಗಳನ್ನು ಸಿಟಿಐ (CTI) ಎತ್ತಿ ತೋರಿಸಿದ್ದು, ರ್ಯಾಲಿಯಲ್ಲಿ ಭಾಗವಹಿಸುವವರನ್ನು ಕರೆತರುವ ನಿರೀಕ್ಷಿತ 15,000 ರಿಂದ 20,000 ವಾಹನಗಳಿಗೆ ರಾಮ್‌ಲೀಲಾ ಮೈದಾನದಲ್ಲಿ ಸೂಕ್ತ ಪಾರ್ಕಿಂಗ್ ಸೌಲಭ್ಯವಿಲ್ಲ. ಅಷ್ಟೇ ಅಲ್ಲದೆ, ಈ ಮೈದಾನದಲ್ಲಿ 200 ದೊಡ್ಡ ಬಸ್‌ಗಳನ್ನು ನಿಲ್ಲಿಸಲು ಕೂಡ ಜಾಗವಿಲ್ಲ ಎಂದು ಅದು ಹೇಳಿದೆ.

ರಾಮ್‌ಲೀಲಾ ಮೈದಾನದ 5 ಕಿಮೀ ವ್ಯಾಪ್ತಿಯಲ್ಲಿ 20 ಪ್ರಮುಖ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಿವೆ. ಈ ಮಾರುಕಟ್ಟೆಗಳಲ್ಲಿ ಪ್ರತಿದಿನ ಒಟ್ಟು 10,000 ರಿಂದ 12,000 ಕೋಟಿ ರೂಪಾಯಿ ಮೌಲ್ಯದ ವಹಿವಾಟು ನಡೆಯುತ್ತದೆ ಎಂದು ವ್ಯಾಪಾರಿ ಸಂಘ ಗಮನಸೆಳೆದಿದೆ.

ರ್ಯಾಲಿಯ ಸಂದರ್ಭದಲ್ಲಿ ವಿಧಿಸಲಾಗುವ ಸಂಚಾರ ನಿರ್ಬಂಧಗಳು ಮತ್ತು ಉಂಟಾಗುವ ದಟ್ಟಣೆಯು ವ್ಯಾಪಾರಿಗಳು, ಗ್ರಾಹಕರು ಹಾಗೂ ಸರಕುಗಳ ಓಡಾಟದ ಮೇಲೆ ಪರಿಣಾಮ ಬೀರಬಹುದು. ದೀಪಾವಳಿ ಹಿನ್ನೆಲೆಯಲ್ಲಿ ಅಂಗಡಿಗಳಲ್ಲಿ ಚಟುವಟಿಕೆಗಳು ಹೆಚ್ಚಾಗಿರುವ ಈ ಸಮಯದಲ್ಲಿ, ಇಂತಹ ನಿರ್ಬಂಧಗಳು ವ್ಯಾಪಾರ-ವಹಿವಾಟಿಗೆ ಅಡ್ಡಿಯುಂಟುಮಾಡಬಹುದು ಎಂದು ಅದು ಎಚ್ಚರಿಸಿದೆ.

ವ್ಯಾಪಾರಿಗಳ ಆತಂಕಗಳನ್ನು ಪರಿಗಣಿಸುವಂತೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಉಂಟಾಗುವ ಅಡಚಣೆಯನ್ನು ಕಡಿಮೆ ಮಾಡಲು, ರ್ಯಾಲಿಯನ್ನು ನವೆಂಬರ್ 10-11ರ ನಂತರಕ್ಕೆ ಮರುನಿಗದಿಪಡಿಸುವಂತೆ ಅಥವಾ ಅದನ್ನು ಬುರಾರಿ ಮೈದಾನಕ್ಕೆ ಸ್ಥಳಾಂತರಿಸುವಂತೆ ಸಿಟಿಐ (CTI) ಕೋರಿದೆ.

ಹಬ್ಬದ ಸೀಸನ್‌ನಲ್ಲಿ ವ್ಯಾಪಾರ-ವಹಿವಾಟುಗಳಿಗೆ ತೊಂದರೆಯಾಗುವುದನ್ನು ತಪ್ಪಿಸಲು ರ್ಯಾಲಿಯನ್ನು ಮುಂದೂಡುವಂತೆ ಕೋರಿ, ಈ ವ್ಯಾಪಾರಿ ಸಂಘಟನೆಯು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದ ಬೆನ್ನಲ್ಲೇ, ಸೋನಿಯಾ ಗಾಂಧಿ ಅವರಿಗೂ ಪತ್ರ ಬರೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X