'ನಿಮ್ ಅಪ್ಪ ಬಂದಿದ್ದಾರೆ ಬಾ': LKG ವಿದ್ಯಾರ್ಥಿನಿ ಮೇಲೆ 3ನೇ ತರಗತಿ ಬಾಲಕನಿಂದ ದಾರುಣ ಹಲ್ಲೆ, ಕಲ್ಲು, ಹೂ ಕುಂಡ ಎತ್ತಿಹಾಕಿ ರಾಕ್ಷಸೀಕೃತ್ಯ, Video

ಹರಿಯಾಣದ ಪಂಚಕುಲದಲ್ಲಿರುವ ಸಂಸ್ಕೃತಿ ಮಾಡೆಲ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿದ್ದ ಬಾಲಕಿಯ ಮೇಲೆ ಮೊದಲು ಕಲ್ಲುಗಳಿಂದ ಹಲ್ಲೆ ನಡೆಸಿದ ಮೂರನೇ ತರಗತಿಯ ಬಾಲಕ, ಬಳಿಕ ಹೂ ಕುಂಡವನ್ನು ಎತ್ತಿಕೊಂಡು ಆಕೆಯ..
Class 3 boy hits KG girl with stone, flowerpot, drags her around
ಎಲ್ ಕೆಜಿ ವಿದ್ಯಾರ್ಥಿನಿ ಮೇಲೆ 3ನೇ ತರಗತಿ ಬಾಲಕನ ಹಲ್ಲೆ
Updated on: 

ಪಂಚಕುಲ: ಹರಿಯಾಣದ ಶಾಲೆಯೊಂದರಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಮೂರನೇ ತರಗತಿಯಲ್ಲಿ ಓದುತ್ತಿರುವ ಬಾಲಕನೊಬ್ಬ ಎಲ್ ಕೆಜಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪುಟ್ಟ ಬಾಲಕಿಯ ಮೇಲೆ ಕಲ್ಲು ಹಾಗೂ ಹೂ ಕುಂಡದಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ.

ಆಘಾತಕಾರಿ ವಿಚಾರವೆಂದರೆ ಬಾಲಕಿ ಪ್ರಜ್ಞೆ ತಪ್ಪಿದ ಬಳಿಕವೂ ಆಕೆಯ ತಲೆಯನ್ನು ನೆಲಕ್ಕೆ ಬಡಿದು, ಕೂದಲು ಹಿಡಿದು ಶಾಲೆಯ ಆವರಣದಲ್ಲಿ ಎಳೆದಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆಕೆಯ ಸ್ಥಿತಿ ಚಿಂತಾಜನಕವಾಗಿದೆ.

ಹರಿಯಾಣದ ಪಂಚಕುಲದಲ್ಲಿರುವ ಸಂಸ್ಕೃತಿ ಮಾಡೆಲ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿದ್ದ ಬಾಲಕಿಯ ಮೇಲೆ ಮೊದಲು ಕಲ್ಲುಗಳಿಂದ ಹಲ್ಲೆ ನಡೆಸಿದ ಮೂರನೇ ತರಗತಿಯ ಬಾಲಕ, ಬಳಿಕ ಹೂ ಕುಂಡವನ್ನು ಎತ್ತಿಕೊಂಡು ಆಕೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ನಂತರ ಖಾಲಿ ತರಗತಿಯೊಂದಕ್ಕೆ ಕರೆದೊಯ್ದು ನಿರಂತರವಾಗಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಬಾಲಕಿಯ ತಲೆಯನ್ನು ಪದೇಪದೆ ನೆಲಕ್ಕೆ ಬಡಿದಿದ್ದಾನೆ ಎಂದು ವರದಿಯಾಗಿದೆ.

ಬಾಲಕಿ ಪ್ರಜ್ಞೆ ಕಳೆದುಕೊಂಡ ನಂತರವೂ ಬಾಲಕನ ಹಲ್ಲೆ ನಿಂತಿರಲಿಲ್ಲ. ಆಕೆಯ ಕೂದಲು ಹಿಡಿದು ಶಾಲೆಯ ಆವರಣದಲ್ಲಿ ಎಳೆದಾಡಿದ್ದಾನೆ. ಈ ಕುರಿತ ಸಿಸಿಟಿವಿ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

Class 3 boy hits KG girl with stone, flowerpot, drags her around
ಕರ್ವಾ ಚೌತ್ ದಿನವೇ ಪ್ರಿಯಕರನ ಜೊತೆ ಸೆ*, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿಗೆ 'ಧರ್ಮದೇಟು', ಹೈಡ್ರಾಮಾ! Video

'ನಿಮ್ ಅಪ್ಪ ಬಂದಿದ್ದಾರೆ ಬಾ' ಎಂದಿದ್ದ ಬಾಲಕ

ಮೂಲಗಳ ಪ್ರಕಾರ, ಬಾಲಕಿಯ ತಂದೆಯನ್ನು ಭೇಟಿಯಾಗುವಂತೆ ಮಾಡುವುದಾಗಿ ನಂಬಿಸಿ ಬಾಲಕ ಆಕೆಯನ್ನು ಶಾಲಾ ಕಟ್ಟಡದ ಮೊದಲ ಮಹಡಿಗೆ ಕರೆದೊಯ್ದಿದ್ದಾನೆ. ಅಲ್ಲಿಗೆ ತಲುಪಿದ ಬಳಿಕ ಆಕೆಯ ಮೇಲೆ ಹಲ್ಲೆ ಆರಂಭಿಸಿದ್ದಾನೆ ಎನ್ನಲಾಗಿದೆ.

ಘಟನೆಯ ಬಳಿಕ ತೀವ್ರವಾಗಿ ಗಾಯಗೊಂಡ ಬಾಲಕಿಯನ್ನು ಪಂಚಕುಲದ ಸೆಕ್ಟರ್ 6ರ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು, ಗಾಯಗಳ ಗಂಭೀರತೆಯನ್ನು ಪರಿಗಣಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಂಡೀಗಢದ ಪೋಸ್ಟ್‌ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್ (PGIMER) ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಬಾಲಕಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಮಹಡಿ ಮೇಲೆ ಮಲಗಿದ್ದಾಳೆ ಎಂದ ಬಾಲಕ

"ಘಟನೆ ನಡೆದ ದಿನ ಬಾಲಕಿ ಎಂದಿನಂತೆ ಶಾಲೆಗೆ ಹೋಗಿದ್ದಳು. ಆದರೆ ಮನೆಗೆ ಮಾತ್ರ ವಾಪಸ್ ಬರಲೇ ಇಲ್ಲ. ಬಾಲಕಿಯನ್ನು ಕರೆದುಕೊಂಡು ಬರಲು ಆಟೋ ಚಾಲಕ ಬಂದಾಗ ಆಕೆ ಅಲ್ಲಿ ಇರಲಿಲ್ಲ. ತಕ್ಷಣ ಆತ ನನ್ನ ಸಹೋದರನಿಗೆ (ಬಾಲಕಿಯ ತಂದೆ) ಮಾಹಿತಿ ನೀಡಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ನನ್ನ ಸಹೋದರ ಶಾಲೆಗೆ ಧಾವಿಸಿದ್ದಾನೆ. ಆಗ ಈ ಹಿಂದೆ ಬಾಲಕಿಯೊಂದಿಗೆ ಜಗಳವಾಡಿದ್ದ ಬಾಲಕನೊಬ್ಬ, ಆಕೆ ಮೇಲಿನ ಮಹಡಿಯಲ್ಲಿ ಮಲಗಿದ್ದಾಳೆ ಎಂದು ಹೇಳಿ ಅಲ್ಲಿಂದ ಹೊರಟುಹೋಗಿದ್ದಾನೆ.

ಮೇಲೆ ಹೋಗಿ ನೋಡಿದಾಗ ನನ್ನ ಸಹೋದರ ಆಘಾತದಿಂದ ಕುಸಿದುಬಿದ್ದಿದ್ದಾನೆ. ಬಾಲಕಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಆಕೆಯನ್ನು ಒಂದು ಕೊಠಡಿಯೊಳಗೆ ಇರಿಸಿ ಹೊರಗಿನಿಂದ ಬೀಗ ಹಾಕಲಾಗಿತ್ತು..." ಎಂದು ಫಾಜಿಲ್ ತಿಳಿಸಿದ್ದಾರೆ.

ಪೊಲೀಸರಿಂದ ತನಿಖೆ ಆರಂಭ

ಘಟನೆ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಡೆದ ಸಂದರ್ಭ ಹಾಗೂ ಹಲ್ಲೆಗೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಶಾಲಾ ಆಡಳಿತ ಮಂಡಳಿಯ ವಿಚಾರಣೆ ನಡೆಸುತ್ತಿದ್ದಾರೆ. ಹಲ್ಲೆ ನಡೆಸಿದ ಬಾಲಕನ ಪೋಷಕರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನ ಬಾಲಕ ಇಂತಹ ಕೃತ್ಯ ಎಸಗಲು ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಈ ಘಟನೆಯು ಶಾಲಾ ಆವರಣದಲ್ಲಿ ಮಕ್ಕಳ ಸುರಕ್ಷತೆ ಮತ್ತು ವಿದ್ಯಾರ್ಥಿಗಳ ಮೇಲ್ವಿಚಾರಣೆಗೆ ಶಾಲಾ ಆಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X